ಅಖ್ತರ್ ನೀಡಿರುವ ಮಾಹಿತಿ ಪ್ರಕಾರ, ದೇಶದ ವಿದೇಶಾಂಗ ವ್ಯವಹಾರ ಇಲಾಖೆಯ ಕೆಲ ಸೀಕ್ರೆಟ್ ಡಾಕ್ಯುಮೆಂಟ್'ಗಳನ್ನು ಪಾಕಿಸ್ತಾನದ ಗೂಢಚಾರಿಗೆ ಫರ್ಹಾತ್ ನೀಡಿದ್ದನೆನ್ನಲಾಗಿದೆ.
ನವದೆಹಲಿ(ಅ. 29): ಪಾಕಿಸ್ತಾನದ ಗೂಢಚಾರಿಕೆ ಜಾಲದಲ್ಲಿ ಭಾರತೀಯ ಸಂಸದನ ಆಪ್ತಸಹಾಯಕನೊಬ್ಬ ಶಾಮೀಲಾಗಿರುವ ಮಾಹಿತಿ ಹೊರಬಿದ್ದಿದೆ. ಉತ್ತರಪ್ರದೇಶದ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದ ಚೌಧರಿ ಮುನಾವರ್ ಸಲೀಮ್'ನ ಪರ್ಸನಲ್ ಅಸಿಸ್ಟೆಂಟ್ ಫರ್ಹಾತ್'ನನ್ನು ದಿಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಬಂಧಿತರಾಗಿದ್ದ ಪಾಕಿಸ್ತಾನದ ರಾಯಭಾರ ಕಚೇರಿಯ ಕಿರಿಯ ಅಧಿಕಾರಿ ಮೆಹಮೂದ್ ಅಖ್ತರ್ ನೀಡಿದ ಮಾಹಿತಿ ಮೇರೆಗೆ ಫರ್ಹತ್ ಸಿಕ್ಕಿಬಿದ್ದಿದ್ದಾನೆ. ಮೆಹಮೂದ್ ಅಖ್ತರ್ ನೀಡಿರುವ ಮಾಹಿತಿ ಪ್ರಕಾರ, ದೇಶದ ವಿದೇಶಾಂಗ ವ್ಯವಹಾರ ಇಲಾಖೆಯ ಕೆಲ ಸೀಕ್ರೆಟ್ ಡಾಕ್ಯುಮೆಂಟ್'ಗಳನ್ನು ಪಾಕಿಸ್ತಾನದ ಗೂಢಚಾರಿಗೆ ಫರ್ಹಾತ್ ನೀಡಿದ್ದನೆನ್ನಲಾಗಿದೆ.
ಯಾರು ಈ ಫರ್ಹಾತ್?
ಸಂಸದ ಸಲೀಮ್ ನೀಡಿರುವ ಮಾಹಿತಿ ಪ್ರಕಾರ ಫರ್ಹಾತ್'ನನ್ನು ಪಿಎ ಆಗಿ ನೇಮಕ ಮಾಡಿಕೊಳ್ಳುವ ಮುನ್ನ ಸಂಪೂರ್ಣ ಪೊಲೀಸ್ ವೆರಿವಿಫಿಕೇಶನ್(ಪರಿಶೀಲನೆ) ಮಾಡಲಾಗಿತ್ತಂತೆ. "ಈ ವ್ಯಕ್ತಿ ಕಳೆದ ಒಂದು ವರ್ಷದಿಂದ ನನ್ನ ಜೊತೆ ಕೆಲಸ ಮಾಡುತ್ತಿದ್ದ. ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿರುವ ಕೈರಾನಾ ಜಿಲ್ಲೆಗೆ ಸೇರಿದವನೀತ. ಕೈರಾನಾ ಕ್ಷೇತ್ರದ ಸಂಸದರಾಗಿದ್ದ ಪ್ರಮುಖ ಸಮಾಜವಾದಿ ಮುಖಂಡರೊಬ್ಬರ ಜೊತೆ 10 ವರ್ಷಗಳ ಕಾಲ ಕೆಲಸ ಮಾಡಿದ್ದಾಗಿ ನನಗೆ ತಿಳಿಸಿದ್ದ. ನಾವೂ ಕೂಡ ಪೂರ್ಣವಾಗಿ ಪೊಲೀಸ್ ವೆರಿಫಿಕೇಶನ್ ಕೂಡ ಮಾಡಿದ್ದೆವು. ಈಗ ಈ ಪ್ರಕರಣ ನಡೆದಿದೆ. ಏನು ಹೇಳಬೇಕೆಂದು ತೋಚುತ್ತಿಲ್ಲ" ಎಂದು ರಾಜ್ಯಸಭಾ ಸಂಸದ ಸಲೀಮ್ ಹೇಳಿದ್ದಾರೆ.
ಇದೇ ವೇಳೆ, ಪಾಕಿಸ್ತಾನದ ಕಿರಿಯ ರಾಯಭಾರ ಅಧಿಕಾರಿ ಮೆಹಮೂದ್ ಅಖ್ತರ್ ಅವರಿಗೆ ರಾಜತಾಂತ್ರಿಕ ರಕ್ಷಣೆ ಇರುವ ಕಾರಣ ಬಿಡುಗಡೆ ಮಾಡಲಾಗಿದೆ. ಎರಡು ವರ್ಷಗಳ ಕಾಲ ರಾಯಭಾರ ಕಚೇರಿಯಲ್ಲಿದ್ದ ಅಖ್ತರ್, ಪಾಕಿಸ್ತಾನದ ಐಎಸ್'ಐಗೋಸ್ಕರ ಕೆಲಸ ಮಾಡಲು ಅನೇಕ ಭಾರತೀಯರನ್ನು ಬುಟ್ಟಿಗೆ ಹಾಕಿಕೊಂಡು ದೊಡ್ಡ ಜಾಲ ನಿರ್ಮಿಸಿದ್ದಾನೆ ಎಂದು ದಿಲ್ಲಿ ಪೊಲೀಸ್ ಜಂಟಿ ಆಯುಕ್ತ ರವೀಂದ್ರ ಯಾದವ್ ತಿಳಿಸಿದ್ದಾರೆ.
