ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಡುವಿನ ಸಂಘರ್ಷಕ್ಕೆ ಕಾರಣವೇನು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಡುವೆ ಇತ್ತೀಚಿನ ದಿನಗಳಲ್ಲಿ ತೀವ್ರಗೊಂಡಿರುವ ಸಂಘರ್ಷಕ್ಕೆ ಆರ್‌ಬಿಐ ಹೊಂದಿರುವ ಹೆಚ್ಚುವರಿ ಸಂಪನ್ಮೂಲವೇ ಕಾರಣ ಎಂಬ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ರಿಸರ್ವ್ ಬ್ಯಾಂಕ್‌ ಬಳಿ 9.59 ಲಕ್ಷ ಕೋಟಿ ರು. ಬಂಡವಾಳ ಸಂಗ್ರಹವಿದೆ. ಆ ಪೈಕಿ 3.6 ಲಕ್ಷ ಕೋಟಿ ರು. ಹೆಚ್ಚುವರಿ ಸಂಪನ್ಮೂಲವಾಗಿದ್ದು, ಅದನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಿ ಎಂದು ಸರ್ಕಾರ ಕೇಳುತ್ತಿದೆ. ಈ ಹಣವನ್ನು ಬ್ಯಾಂಕುಗಳಿಗೆ ಬಂಡವಾಳ ತುಂಬುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಇಬ್ಬರೂ ಸೇರಿ ಬಳಕೆ ಮಾಡೋಣ ಎಂದು ಆರ್‌ಬಿಐ ಮುಂದೆ ಪ್ರಸ್ತಾಪವಿಟ್ಟಿದೆ. ಆದರೆ ನಿಯಮಗಳನ್ನು ಮುಂದೊಡ್ಡಿ ಸರ್ಕಾರದ ಪ್ರಸ್ತಾಪವನ್ನು ಆರ್‌ಬಿಐ ತಳ್ಳಿ ಹಾಕಿ

ದೆ. ಹಣ ವರ್ಗಾವಣೆಗೆ ಆರ್‌ಬಿಐ ತನ್ನ ನಿಯಮಗಳನ್ನು ಮುಂದೊಡ್ಡುತ್ತಿದೆ. ಆದರೆ ಆ ನಿಯಮಗಳು ಮಡಿವಂತಿಕೆಯ ಆಲೋಚನೆಯಿಂದ ಕೂಡಿವೆ ಎಂಬುದು ಸರ್ಕಾರದ ವಾದ. ಹೀಗಾಗಿ ಕೇಂದ್ರ ಹಾಗೂ ಆರ್‌ಬಿಐ ನಡುವೆ ಸಂಘರ್ಷ ಆರಂಭವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲದೈನಿಕವೊಂದು ವರದಿ ಮಾಡಿದೆ.

ಆರ್‌ಬಿಐಗೆ ಬಂಡವಾಳ ಎಷ್ಟುಬೇಕು, ಸರ್ಕಾರಕ್ಕೆ ಯಾವಾಗ ಹಣವನ್ನು ವರ್ಗಾವಣೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಆರ್ಥಿಕ ಬಂಡವಾಳ ಚೌಕಟ್ಟುವೊಂದನ್ನು ಆರ್‌ಬಿಐ ಹೊಂದಿದೆ. ಆದರೆ 2017ರಲ್ಲಿ ಈ ಚೌಕಟ್ಟು ರೂಪುಗೊಂಡಾಗ ರಿಸವ್‌ರ್‍ ಬ್ಯಾಂಕಿನ ಮಂಡಳಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಇರಲಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಚೌಕಟ್ಟಿನಲ್ಲಿ ಬದಲಾವಣೆ ತರಲು ಮಾತುಕತೆಗೆ ಆರ್‌ಬಿಐ ಅನ್ನು ಆಹ್ವಾನಿಸುತ್ತಿದೆಯಾದರೂ, ಅದಕ್ಕೆ ಆರ್‌ಬಿಐ ಒಪ್ಪುತ್ತಿಲ್ಲ. ಸರ್ಕಾರದ ಈ ನಡೆ ಆರ್‌ಬಿಐ ಕೋಠಿಗೆ ಕೈ ಹಾಕುವುದಾಗಿದೆ. ಇದರಿಂದ ದೇಶದ ವಿಶಾಲ ಆರ್ಥಿಕತೆಯ ಮೇಲೆ ಪರಿಣಾಮವಾಗುತ್ತದೆ ಎಂದು ಆರ್‌ಬಿಐ ಹೇಳುತ್ತಿದೆ ಎಂದು ಮೂಲಗಳು ವಿವರಿಸಿವೆ.

ಅಮೆರಿಕ, ಬ್ರಿಟನ್‌, ಅರ್ಜೆಂಟೀನಾ, ಫ್ರಾನ್ಸ್‌, ಸಿಂಗಾಪುರದಂತಹ ದೇಶಗಳು ಆರ್‌ಬಿಐಗಿಂತ ಕಡಿಮೆ ಹೆಚ್ಚುವರಿ ಸಂಪನ್ಮೂಲ ಹೊಂದಿವೆ ಎಂದು ಸರ್ಕಾರ ಹೇಳುತ್ತಿದೆ. ಈ ಹಿಂದೆ ಕೂಡ ಆರ್‌ಬಿಐ ಹೆಚ್ಚುವರಿ ಸಂಪನ್ಮೂಲ ಹೊಂದಿರುವ ವಿಚಾರ ಚರ್ಚೆಗೆ ಬಂದಿತ್ತು. ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು 2016-17ನೇ ಸಾಲಿನ ಹಣಕಾಸು ಸಮೀಕ್ಷೆಯಲ್ಲಿ ಕೂಡ, ಅಸಾಧಾರಣ ಎನ್ನಿಸುವಷ್ಟುಹೆಚ್ಚುವರಿ ಬಂಡವಾಳವನ್ನು ಆರ್‌ಬಿಐ ಹೊಂದಿದ್ದು, 4 ಲಕ್ಷ ಕೋಟಿ ರು. ಅನ್ನು ಸರ್ಕಾರಕ್ಕೆ ವರ್ಗಾಯಿಸಬೇಕು ಎಂದು ಹೇಳಿದ್ದರು. ಅಂದಿನ ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಸಾಧಾರಣ ಆರ್ಥಿಕ ಸಿದ್ಧಾಂತಗಳು ಅವ್ಯವಸ್ಥೆ ಸೃಷ್ಟಿಸಿವೆ. ಅದನ್ನು ಸರಿಪಡಿಸಲು ಪ್ರಧಾನಿ ಅವರಿಗೆ ರಿಸವ್‌ರ್‍ ಬ್ಯಾಂಕಿನಿಂದ 3.60 ಲಕ್ಷ ಕೋಟಿ ರು. ಬೇಕಂತೆ. ರಿಸವ್‌ರ್‍ ಬ್ಯಾಂಕಿನ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು ಈ ಸಂದರ್ಭದಲ್ಲಿ ಪ್ರಧಾನಿ ಎದುರು ನಿಲ್ಲಬೇಕು. ದೇಶವನ್ನು ರಕ್ಷಿಸಬೇಕು.

- ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷ