ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲು ಸರಕಾರ ಮನಸು ಮಾಡುತ್ತಿಲ್ಲ. ಯೋಜನೆಯ ಟೆಂಡರ್'ಗಳನ್ನು ರದ್ದುಗೊಳಿಸಲು ಬಿಡಿಎ ನಿರಾಕರಿಸುತ್ತಿದೆ ಎಂಬುದು ನಮ್ಮ ಬೆಂಗಳೂರು ಫೌಂಡೇಶನ್, ಸಿಎಫ್'ಬಿ ಮೊದಲಾದ ಸಂಸ್ಥೆಗಳ ಆಕ್ಷೇಪವಾಗಿದೆ.
ಬೆಂಗಳೂರು(ನ. 03): ಉಕ್ಕಿನ ಸೇತುವೆ ನಿರ್ಮಾಣ ಯೋಜನೆಯನ್ನ ಸಂಪೂರ್ಣವಾಗಿ ಕೈಬಿಡುವಂತೆ ಒತ್ತಾಯಿಸಿ ಬರುವ ಭಾನುವಾರದಂದು ಸತ್ಯಾಗ್ರಹ ನಡೆಸಲು ಸಿಟಿಜನ್ಸ್ ಫಾರ್ ಬೆಂಗಳೂರು(ಸಿಎಫ್'ಬಿ) ಸಂಸ್ಥೆ ಕರೆ ಕೊಟ್ಟಿದೆ. ಸ್ಟೀಲ್ ಬ್ರಿಜ್ ಯೋಜನೆಯನ್ನು ಸದ್ಯಕ್ಕೆ ಮುಂದುವರಿಸುವುದಿಲ್ಲ ಎಂದು ಬಿಡಿಎ ಸಂಸ್ಥೆ ಇಂದು ಹೈಕೋರ್ಟ್'ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಆದರೆ, ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲು ಸರಕಾರ ಮನಸು ಮಾಡುತ್ತಿಲ್ಲ. ಯೋಜನೆಯ ಟೆಂಡರ್'ಗಳನ್ನು ರದ್ದುಗೊಳಿಸಲು ಬಿಡಿಎ ನಿರಾಕರಿಸುತ್ತಿದೆ ಎಂಬುದು ನಮ್ಮ ಬೆಂಗಳೂರು ಫೌಂಡೇಶನ್, ಸಿಎಫ್'ಬಿ ಮೊದಲಾದ ಸಂಸ್ಥೆಗಳ ಆಕ್ಷೇಪವಾಗಿದೆ.
ಕಳೆದ ವಾರವಷ್ಟೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸ್ಟೀಲ್ ಫ್ಲೈಓವರ್ ಯೋಜನೆಗೆ ನಾಲ್ಕು ವಾರಗಳ ತಡೆ ನೀಡಿತ್ತು. ಜೊತೆಗೆ, ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಆದೇಶಿಸಿತು. ಇದರಿಂದಾಗಿ ಯೋಜನೆಯನ್ನು ಸದ್ಯಕ್ಕೆ ನಿಲ್ಲಿಸುವುದು ಬಿಡಿಎಗೆ ಅನಿವಾರ್ಯವಾಗಿದೆ.
ಯೋಜನೆ ವಿಚಾರದಲ್ಲಿ ಸರಕಾರದ ಹಠವನ್ನು ಗಮನಿಸದರೆ ಯಾವುದಾದರೊಂದು ರೀತಿಯಲ್ಲಿ ಯೋಜನೆಗೆ ಮರುಜೀವ ನೀಡುವ ಪ್ರಯತ್ನ ನಿಲ್ಲದಿರುವ ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಮತ್ತೊಮ್ಮೆ ಬೆಂಗಳೂರಿನ ನಾಗರಿಕರಿಂದ ಚುರುಕು ಮುಟ್ಟಿಸುವ ಸಲುವಾಗಿ ನ.6ರಂದು ಸತ್ಯಾಗ್ರಹ ನಡೆಸುವುದು ಅನಿವಾರ್ಯ ಎಂದು ಸಿಟಿಜನ್ಸ್ ಫಾರ್ ಬೆಂಗಳೂರು ಸಂಸ್ಥೆಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಉಕ್ಕಿನ ಸೇತುವೆ ಯೋಜನೆಯ ರೂಪುರೇಖೆ ರಚಿಸದೆ, ಮತ್ತು ಸಾಧಕಬಾಧಕಗಳನ್ನು ಅಧ್ಯಯನ ಮಾಡದೇ ಯೋಜನೆಯನ್ನು ತರಾತುರಿಯಾಗಿ ಜಾರಿಗೊಳಿಸುತ್ತಿರುವ ಸರಕಾರ ಹಾಗೂ ಬಿಡಿಎ ಕ್ರಮ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂಬುದು ಬೆಂಗಳೂರಿನ ಅನೇಕ ಸಂಘಟನೆಗಳ ಅಗ್ರಹವಾಗಿದೆ.
