-ಶಿವಾಜಿ ಗಣೇಶನ್ ಸೋಲೇ ಇದಕ್ಕೆ ಉತ್ತಮ ಉದಾಹರಣೆ-ಸಿನಿ ಜನಪ್ರಿಯತೆಯ ಆಚೆ ‘ಏನೋ’ ಇದೆ-ಅದು ರಾಜಕೀಯ ಯಶಸ್ಸಿಗೆ ಕಾರಣ ಆಗಬಲ್ಲದು-ಅದು ಕಮಲ್‌ಗೂ ಗೊತ್ತು: ರಜನಿ 

ಚೆನ್ನೈ: ತಮಿಳಿನ ಖ್ಯಾತ ನಟರಾದ ಕಮಲ್ ಹಾಸನ್ ಹಾಗೂ ರಜನೀಕಾಂತ್ ಅವರು ರಾಜಕೀಯ ಪ್ರವೇಶಿಸಬಹುದು ಎಂಬ ದಟ್ಟ ಸಾಧ್ಯತೆಗಳು ಇರುವ ನಡುವೆಯೇ, ಸೂಪರ್ ಸ್ಟಾರ್ ರಜನಿ ಅವರು ಎಚ್ಚರಿಕೆಯ ನುಡಿಗಳನ್ನಾಡಿದ್ದಾರೆ. ‘ಬರೀ ಸಿನಿಮಾ ಜಪ್ರಿಯತೆಯು ರಾಜಕೀಯ ಪ್ರವೇಶಕ್ಕೆ ಸಾಲದು. ಅದಕ್ಕಿಂತ ಆಚೆ ‘ಏನೋ’ ಇರುತ್ತದೆ. ಅದು ರಾಜಕೀಯ ಯಶಸ್ಸಿಗೆ ನಾಂದಿ ಹಾಡುತ್ತದೆ’ ಎಂದಿದ್ದಾರೆ.

ಭಾನುವಾರ ತಮಿಳುನಾಡು ಸರ್ಕಾರ ಹಮ್ಮಿಕೊಂಡಿದ್ದ ಮೇರು ನಟ ಶಿವಾಜಿ ಗಣೇಶನ್ ಅವರ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ರಜನಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಕಮಲ್ ಹಾಸನ್ ಕೂಡ ರಜನಿ ಅವರ ಜತೆ ವೇದಿಕೆಯಲ್ಲೇ ಇದ್ದರು.

ಕಮಲ್ ಅವರನ್ನು ಉದ್ದೇಶಿಸಿ ಮಾತನಾಡಿದ ರಜನಿ, ‘ರಾಜಕೀಯದ ಯಶಸ್ಸಿಗೆ ಸಿನಿ ಜನಪ್ರಿಯತೆಯ ಆಚೆ ‘ಏನೋ’ ಇದೆ. ಆ ‘ಏನೋ’ ಎಂದರೆ ಏನು ಎಂಬುದು ಕಮಲ್ ಹಾಸನ್ ಅವರಿಗೂ ಬಹುಶಃ ಗೊತ್ತಿರಬಹುದು. ಆದರೆ ಆ ಗುಟ್ಟನ್ನು ಈಗ ಅವರು ನನ್ನ ಜತೆ ಹಂಚಿಕೊಳ್ಳಲಾರರು’ ಎಂದು ನಗೆಗಡಲಿನ ಮಧ್ಯೆ ಹೇಳಿದರು.

ಶಿವಾಜಿ ಗಣೇಶನ್ ಅವರನ್ನೇ ಉದಾಹರಿಸಿದ ರಜನಿ, ‘ಶಿವಾಜಿ ಅವರು ತಮಿಳು ಚಿತ್ರರಂಗದ ಜನಪ್ರಿಯತೆಯ ಉತ್ತುಂಗಕ್ಕೇರಿದರು. ತಮ್ಮದೇ ಪಕ್ಷ ಸ್ಥಾಪಿಸಿದರು. ಆದರೆ ಅವರು ತಮ್ಮದೇ ಕ್ಷೇತ್ರದಲ್ಲಿ ನಿಂತು ಸೋತರು. ಇದು ಅವರಿಗಾದ ಅವಮಾನ ಅಷ್ಟೇ ಅಲ್ಲ. ಅವರ ಕ್ಷೇತ್ರಕ್ಕಾದ ಅವಮಾನವಾಗಿತ್ತು’ ಎಂದು ರಜನಿ ಉದಾಹರಿಸಿದರು.

‘ಆದ್ದರಿಂದ ಸಂದೇಶ ಸ್ಪಷ್ಟವಾಗಿದೆ. ಸಿನಿಮಾ ಒಂದೇ ರಾಜಕೀಯ ಪ್ರವೇಶಕ್ಕೆ ಮಾನದಂಡವಲ್ಲ’ ಎಂದು ರಜನಿ ಹೇಳಿದರು. ರಜನಿ ಹಾಗೂ ಕಮಲ್ ಪ್ರತ್ಯೇಕ ರಾಜಕೀಯ ಪಕ್ಷಗಳನ್ನು ಸ್ಥಾಪಿಸುವತ್ತ ಹೆಜ್ಜೆ ಇರಿಸಿದ್ದಾರೆ. ಆದರೆ ಕಮಲ್ ಹೆಚ್ಚು ಉತ್ಸುಕತೆ ತೋರುತ್ತಿದ್ದು, ರಜನಿ ಏಕೋ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಜನಿ ಅವರ ಹೇಳಿಕೆಗಳು ಅವರು ರಾಜಕೀಯ ಪಕ್ಷ ಸ್ಥಾಪಿಸುತ್ತಾರಾ ಇಲ್ಲವಾ ಎಂಬ ಬಗ್ಗೆ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.