"ಬಲಿಷ್ಠ ಮಿಲಿಟರಿ ಶಕ್ತಿಯನ್ನು ಕಟ್ಟುವ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯುವ ಸಾಮರ್ಥ್ಯ ನಮ್ಮ ಸೇನೆಗಿದೆ. ಚೀನೀ ರಾಷ್ಟ್ರಕ್ಕೆ ಅದ್ಭುತ ನವಚೈತನ್ಯ ತುಂಬ ಮತ್ತು ವಿಶ್ವಶಾಂತಿ ಕಾಪಾಡುವ ನಮ್ಮ ಕನಸನ್ನು ಸಾಕಾರಗೊಳಿಸುವ ವಿಶ್ವಾಸ ನಮ್ಮ ಸೇನೆಗಿದೆ"
ಬೀಜಿಂಗ್(ಜುಲೈ 30): ದೇಶದ ಮೇಲೆ ಯಾವುದೇ ಶತ್ರು ದಾಳಿ ಮಾಡಿದರೂ ಸೋಲಿಸುವಷ್ಟು ಚೀನಾ ಸಮರ್ಥವಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸೀ ಜಿನ್'ಪಿಂಗ್ ಹೇಳಿದ್ದಾರೆ. ಎಷ್ಟೇ ಸೇನೆಗಳು ಹರಿಹಾಯ್ದು ಬಂದರೂ ಚೀನಾದ ಪಿಎಲ್'ಎ ಸೇನೆಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಎದೆಯುಬ್ಬಿಸಿ ಹೇಳಿದ್ದಾರೆ.
ಪೀಪಲ್ಸ್ ಲಿಬರೇಶನ್ ಆರ್ಮಿಯ 90ನೇ ಸಂಸ್ಥಾಪನಾ ದಿನದಂದು ನಡೆದ ಬೃಹತ್ ಮಿಲಿಟರಿ ಪೆರೇಡ್ ವೇಳೆ ಚೀನಾ ಅಧ್ಯಕ್ಷರು ಮಾತನಾಡುತ್ತಿದ್ದರು. ಚೀನಾ ಸೇನೆಯ ಪರಮೋಚ್ಚ ಕಮಾಂಡರ್ ಆಗಿರುವ ಅಧ್ಯಕ್ಷರು, ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಅಭಿವೃದ್ಧಿಯನ್ನು ಕಾಪಾಡುವಷ್ಟು ಆತ್ಮವಿಶ್ವಾಸ ಸೇನೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಹಳ ಚುಟುಕಾಗಿ 10 ನಿಮಿಷ ಭಾಷಣ ಮಾಡಿದ ಕ್ಸೀ ಜಿನ್'ಪಿಂಗ್ ಅವರು, "ಬಲಿಷ್ಠ ಮಿಲಿಟರಿ ಶಕ್ತಿಯನ್ನು ಕಟ್ಟುವ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯುವ ಸಾಮರ್ಥ್ಯ ನಮ್ಮ ಸೇನೆಗಿದೆ. ಚೀನೀ ರಾಷ್ಟ್ರಕ್ಕೆ ಅದ್ಭುತ ನವಚೈತನ್ಯ ತುಂಬ ಮತ್ತು ವಿಶ್ವಶಾಂತಿ ಕಾಪಾಡುವ ನಮ್ಮ ಕನಸನ್ನು ಸಾಕಾರಗೊಳಿಸುವ ವಿಶ್ವಾಸ ನಮ್ಮ ಸೇನೆಗಿದೆ" ಎಂದು ಹೇಳಿದ್ದಾರೆ. ಇದೇ ವೇಳೆ, ಅವರು ದೇಶದ ಕಮ್ಯೂನಿಸ್ಟ್ ಸರಕಾರ ಹೇಳುವುದನ್ನು ಸೇನೆ ಶಿರಸಾವಹಿಸಿ ಮಾಡಬೇಕು. ಎಲ್ಲಿ ಬೆರಳು ತೋರಿಸುತ್ತೋ ಅಲ್ಲಿಗೆ ಹೋಗಿ ಡ್ಯೂಟಿ ಮಾಡಬೇಕು ಎಂದೂ ಚೀನೀ ಅಧ್ಯಕ್ಷರು ಸೇನೆಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಚೀನಾದ ಸೇನೆಯಲ್ಲಿ 23 ಲಕ್ಷ ಆನ್'ಡ್ಯೂಟಿ ಯೋಧರಿದ್ದಾರೆ. ಪೀಪಲ್ಸ್ ಲಿಬರೇಶನ್ ಆರ್ಮಿ ವಿಶ್ವದ ಅತೀ ದೊಡ್ಡ ಸೇನೆ ಎನಿಸಿದೆ. ಇದರ ಡಿಫೆನ್ಸ್ ಬಜೆಟ್ 152 ಬಿಲಿಯನ್ ಡಾಲರ್, ಅಂದರೆ 9 ಲಕ್ಷ ಕೋಟಿ ರೂಪಾಯಿಗೂ ಅಧಿಕವಿದೆ. ಅಮೆರಿಕ ಬಿಟ್ಟರೆ ಚೀನಾ ದೇಶವೇ ಸೇನೆಗೆ ಅತೀ ಹೆಚ್ಚು ವೆಚ್ಚ ಮಾಡುವುದು.
