ಗ್ವಾದರ್ ಪೋರ್ಟ್ ಮೂಲಕ ಅರೇಬಿಯನ್ ಸಾಗರದಲ್ಲಿ ಚೀನಾ ನೆಲೆ ಕಂಡುಕೊಳ್ಳಲಿದೆ. ಭಾರತದ ಮೇಲೆ ಅಕಸ್ಮಾತಾಗಿ ಯುದ್ಧ ಮಾಡಬೇಕಾದ ಸಂದರ್ಭ ಬಂದಲ್ಲಿ ಚೀನಾ ದೇಶಕ್ಕೆ ಈ ಗ್ವಾದರ್ ಬಂದರು ಬಹಳ ಉಪಯೋಗಕ್ಕೆ ಬರಲಿದೆ.

ಕರಾಚಿ(ನ. 26): ಪಾಕಿಸ್ತಾನದ ಪ್ರಮುಖ ಆಯಕಟ್ಟಿನ ಸ್ಥಳವೆನಿಸಿರುವ ದ್ವಾದರ್ ಪೋರ್ಟ್'ನಲ್ಲಿ ಚೀನಾ ತನ್ನ ನೌಕಾ ಪಡೆಗಳನ್ನು ನಿಯೋಜಿಸಲು ನಿರ್ಧರಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಪಾಕಿಸ್ತಾನ-ಚೀನಾ ಆರ್ಥಿಕ ಕಾರಿಡಾರ್ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಗ್ವಾದರ್ ಬಂದರ್'ನ ಭದ್ರತೆಗೆ ಚೀನಾ ಈ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಏನಿದು ಕಾರಿಡಾರ್ ಯೋಜನೆ?
ಬಲೂಚಿಸ್ತಾನದಲ್ಲಿರುವ ಗ್ವಾದರ್ ಪೋರ್ಟ್'ನಿಂದ ಚೀನಾದ ಶಿನ್'ಜಿಯಾಂಗ್ ನಗರವನ್ನು ಸಂಪರ್ಕಿಸುವ 3 ಸಾವಿರ ಕಿ.ಮೀ. ಉದ್ದದ ಕಾರಿಡಾರ್ ಯೋಜನೆ ಇದಾಗಿದೆ. ಬಲೂಚಿಸ್ತಾನದಲ್ಲಿರುವ ತೈಲ ಸಂಪನ್ಮೂಲವನ್ನು ಚೀನಾ ದೇಶಕ್ಕೆ ರಫ್ತು ಮಾಡಲು ಪಾಕಿಸ್ತಾನಕ್ಕೆ ಈ ಕಾರಿಡಾರ್ ಸಹಾಯವಾಗಲಿದೆ. ಅಲ್ಲದೇ, ತನ್ನ ದೇಶದ ವಸ್ತುಗಳನ್ನು ಪಾಕಿಸ್ತಾನಕ್ಕೆ ಸಾಗಿಸಲು ಹಾಗೂ ಆ ಮೂಲಕ ಮಧ್ಯಪ್ರಾಚ್ಯ ಏಷ್ಯಾ ಹಾಗೂ ಆಫ್ರಿಕಾ ರಾಷ್ಟ್ರಗಳಿಗೆ ಸಾಗಿಲು ಚೀನಾಗೆ ಇದು ಒಳ್ಳೆಯ ದಾರಿಯಾಗಲಿದೆ.

ಭಾರತಕ್ಕೆ ಏನು ಆತಂಕ?
ಗ್ವಾದರ್ ಪೋರ್ಟ್ ಮೂಲಕ ಅರೇಬಿಯನ್ ಸಾಗರದಲ್ಲಿ ಚೀನಾ ನೆಲೆ ಕಂಡುಕೊಳ್ಳಲಿದೆ. ಭಾರತದ ಮೇಲೆ ಅಕಸ್ಮಾತಾಗಿ ಯುದ್ಧ ಮಾಡಬೇಕಾದ ಸಂದರ್ಭ ಬಂದಲ್ಲಿ ಚೀನಾ ದೇಶಕ್ಕೆ ಈ ಗ್ವಾದರ್ ಬಂದರು ಬಹಳ ಉಪಯೋಗಕ್ಕೆ ಬರಲಿದೆ. ಪಾಕಿಸ್ತಾನಕ್ಕೆ ಸೇನಾ ಬೆಂಬಲ ನೀಡಲೂ ಈ ಸ್ಥಳ ಬಹಳ ಆಯಕಟ್ಟಿನದ್ದಾಗಿದೆ. ಈ ಮುಂಚೆ ಚೀನಾ ದೇಶವು ತಾನು ಯಾವುದೇ ಕಾರಣಕ್ಕೂ ಪಾಕಿಸ್ತಾನದಲ್ಲಿ ತನ್ನ ಸೇನೆಯನ್ನು ನಿಯೋಜಿಸುವುದಿಲ್ಲವೆಂದು ಭಾರತಕ್ಕೆ ಭರವಸೆ ನೀಡುತ್ತಾ ಬಂದಿತ್ತು. ಇದೀಗ, ತನ್ನ ನಿರ್ಧಾರ ಬದಲಿಸುತ್ತಿರುವುದು ನಿಜಕ್ಕೂ ಯಾವುದೋ ಅಪಾಯದ ಮುನ್ಸೂಚನೆ ಇದ್ದರೂ ಇರಬಹುದು ಎಂಬುದು ಒಂದು ವಲಯದವರ ಚಿಂತನೆಯಾಗಿದೆ.