ನವದೆಹಲಿ (ಅ.02): ಇಂಡಸ್ ನದಿ ಒಪ್ಪಂದವನ್ನು ರದ್ದುಗೊಳಿಸುವ ಬಗ್ಗೆ ಭಾರತವು ಚಿಂತನೆ ನಡೆಸುತ್ತರಿವ ಬೆನ್ನಲ್ಲೇ, ಚೀನಾವು ಭಾರತಕ್ಕೆ ಹರಿಯುವ ಬ್ರಹ್ಮಪುತ್ರ ನದಿಯ ಉಪನದಿಯೊಂದನ್ನು ತಡೆದಿದೆ.

ಟಿಬೆಟ್'ನಲ್ಲಿ ನಿರ್ಮಿಸಲಾಗುತ್ತಿರುವ ಬಹುಕೋಟಿ ವೆಚ್ಚದ ಲಾಲ್ಹೋ ಜಲ ಯೋಜನೆಯೊಂದರ ಕಾಮಗರಿ ಪ್ರಗತಿಯಲ್ಲಿರುವುದರಿಂದ ಆ ಕ್ರಮ ಕೈಗೊಳ್ಳಲಾಗಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಬ್ರಹ್ಮಪುತ್ರಾ ನದಿಯು ಅರುಣಾಚಲ ಪ್ರದೇಶದ ಮೂಲಕ ಭಾರತ ಪ್ರವೇಶಿಸಿ ಬಾಂಗ್ಲಾದೇಶಕ್ಕೆ ಹರಿಯುತ್ತದೆ. ಚೀನಾವು ತಡೆದಿರುವ ನದಿ ಸಿಕ್ಕಿಮ್'ನಲ್ಲಿ ಶಿಗಾಸ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು, ಅದರ ತಡೆಯುವಿಕೆ ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುವುದರ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಭಾರತ ಹಾಗೂ ಚೀನಾ ನಡುವೆ ಈವರೆಗೆ ಯಾವುದೇ ಜಲ ಒಪ್ಪಂದಗಳಾಗಿಲ್ಲ. ಆದರೆ ಪರಸ್ಪರ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಂತರ್ಗಡಿ ನದಿಗಳ ಬಗ್ಗೆ 2013ರಲ್ಲಿ ಆಗಿರುವ ಎಮ್ಓಯು ಮಾಡಲಾಗಿದೆ. ಅದರ ಪ್ರಕಾರ ತಜ್ಞ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಭಾರತಕ್ಕೆ ಹರಿಯುವ ನೀರಿನ ಬಗ್ಗೆ ಚೀನಾ ಮಾಹಿತಿ ನೀಡುತ್ತದೆ.

ಚೀನಾವು ಆರಂಭಿಸಿರುವ ಲಾಲ್ಹೋ ಯೋಜನೆಯು 2014ರಲ್ಲಿ ಆರಂಭವಾಗಿದ್ದು, 2019ರಲ್ಲಿ ಸಂಪೂರ್ಣಗೊಳ್ಳಿಲಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಚೀನಾವು ಬ್ರಹ್ಮಪುತ್ರಾ ನದಿಗೆ ಹೊಂದಿಕೊಂಡು, 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಬೃಹತ್ ಜಲವಿದ್ಯುತ್ ಯೋಜನೆಯೊಂದನ್ನು ನಿರ್ಮಿಸಿತ್ತು. ಭಾರತವು ಅದಕ್ಕೆ ಕಳವಳ ವ್ಯಕ್ತಪಡಿಸಿತ್ತು.

(ಸಾಂದರ್ಭಿಕ ಚಿತ್ರ)