ಬಂದರು ಪ್ರದೇಶ, 1320 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸೇರಿದಂತೆ ಒಟ್ಟು 25 ಯೋಜನೆಗಳಿಗೆ ಚೀನಾ ಆರ್ಥಿಕ ನೆರವು ನೀಡಲು ಮುಂದಾಗಿದೆ.
ನವದೆಹಲಿ(ಅ.15): ವಿದ್ಯುತ್ ಸ್ಥಾವರ, ಬಂದರು ಮತ್ತು ರೈಲುಗಳ ನಿರ್ಮಾಣಕ್ಕಾಗಿ ಬಾಂಗ್ಲಾದೇಶಕ್ಕೆ 1.6 ಲಕ್ಷ ಕೋಟಿ ಸಾಲ ನೀಡಲು ಚೀನಾ ಮುಂದಾಗಿದೆ. ಬಾಂಗ್ಲಾದ ಮೂಲಸೌಕರ್ಯ ಯೋಜನೆಗಳಲ್ಲಿ ಭಾರತದ ಹೂಡಿಕೆ ಹೆಚ್ಚುತ್ತಿರುವುದಕ್ಕೆ ಕಡಿವಾಣ ಹಾಕಲು ಹಾಗೂ ಭಾರತವು ಬಾಂಗ್ಲಾಗೆ ನೀಡಿದ 13 ಸಾವಿರ ಕೋಟಿ ಸಾಲಕ್ಕೆ ಪ್ರತಿಯಾಗಿ ಈ ಭಾರಿ ಮೊತ್ತವನ್ನು ನೀಡಲು ಚೀನಾ ಹೊರಟಿದೆ.
ಶನಿವಾರದಿಂದ ಗೋವಾದಲ್ಲಿ ಆರಂಭವಾಗಲಿರುವ ಬ್ರಿಕ್ಸ್ ಶೃಂಗಸಭೆಗೆ ಆಗಮಿಸುತ್ತಿರುವ ಚೀನಾ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್ ಮಾರ್ಗಮಧ್ಯೆ ಶುಕ್ರವಾರ ಬಾಂಗ್ಲಾದೇಶಕ್ಕೆ ತೆರಳಿದ್ದು, ಅಲ್ಲಿ ಈ ಸಾಲದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಭಾರತದ ತ್ವರಿತ ಆರ್ಥಿಕ ಅಭಿವೃದ್ಧಿಯಲ್ಲಿ ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳೂ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಅಲ್ಲದೆ, ಕಳೆದ ವರ್ಷ ಬಾಂಗ್ಲಾ ರಾಜಧಾನಿ ಢಾಕಾಕ್ಕೆ ಭೇಟಿ ನೀಡಿದ ಮೋದಿ, ಸುಮಾರು 13 ಸಾವಿರ ಕೋಟಿಗೂ ಹೆಚ್ಚು ಆರ್ಥಿಕ ನೆರವು ಘೋಷಿಸಿದ್ದರು. ಭಾರತಕ್ಕೆ ತಿರುಗೇಟು ನೀಡುವ ಹಿನ್ನೆಲೆಯಲ್ಲಿ ಚೀನಾ ಈ ನಿರ್ಧಾರ ಕೈಗೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
‘‘ಬಂದರು ಪ್ರದೇಶ, 1320 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸೇರಿದಂತೆ ಒಟ್ಟು 25 ಯೋಜನೆಗಳಿಗೆ ಚೀನಾ ಆರ್ಥಿಕ ನೆರವು ನೀಡಲು ಮುಂದಾಗಿದೆ. ಚೀನಾ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವುದು ಒಂದು ಮೈಲುಗಲ್ಲಾಗಿದೆ ’’ ಎಂದು ಬಾಂಗ್ಲಾ ಸಚಿವ ಎಂ.ಎ.ಮನ್ನಾನ್ ತಿಳಿಸಿದ್ದಾರೆ.
ಭಾರತಕ್ಕೆ ಚೀನಾ ಎಚ್ಚರಿಕೆ: ಇದೇ ವೇಶೆ, ಚೀನಾ ಕಂಪನಿಗಳ ಉತ್ಪನ್ನಗಳ ಬಹಿಷ್ಕಾರದಿಂದ ದ್ವಿಪಕ್ಷೀಯ ಸಂಬಂಧಕ್ಕೆ ಹೊಡೆತ ಬೀಳಲಿದೆಯೇ ಹೊರತು ರಾಜಕೀಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅನುವಾಗುವುದಿಲ್ಲ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಭಾರತಕ್ಕೆ ಎಚ್ಚರಿಕೆ ನೀಡಿದೆ. ವಾಣಿಜ್ಯ ಅಸಮತೋಲನದ ನಿವಾರಣೆಗೆ ಭಾರತವು ಉದ್ಯಮಗಳ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದಿದೆ. ಚೀನಾ ಉತ್ಪನ್ನಗಳ ಬಹಿಷ್ಕರಿಸುವಂತೆ ಕೋರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರ ಬಗ್ಗೆಯೂ ಅದು ಆಕ್ಷೇಪ ವ್ಯಕ್ತಪಡಿಸಿದೆ.
