ನನ್ನ ಸ್ನೇಹಿತ, ಮಕ್ಕಳ ವೈದ್ಯನೊಬ್ಬ ಯಾವಾಗಲೂ ಹೇಳುವುದುಂಟು. ಅವನ ಬಳಿ ಬರುವ ಪುಟಾಣಿ ರೋಗಿಗಳ ತಂದೆ ತಾಯಿಗಳೆಲ್ಲರೂ ಒಳ ಬಂದ ತಕ್ಷಣ- ‘ಡಾ| ಅಂಕಲ್‌ಗೆ ನಮಸ್ಕಾರ ಮಾಡೂ...’ ಅಂತಾರಂತೆ. ಆದರೆ ಹೆಚ್ಚಿನವರು ತಾವು ಸ್ವತಃ ನಮಸ್ಕಾರ ಮಾಡುವುದಿಲ್ಲವಂತೆ! ಇದು ವ್ಯರ್ಥ ಅಂತ ಅವನ ನಂಬಿಕೆ. ಏಕೆಂದರೆ ಅಪ್ಪ ಹೇಳಿದ ಅಂತ ಕಾಟಾಚಾರಕ್ಕೆ ಆ ಮಗು ನಮಸ್ಕಾರ ಮಾಡುತ್ತದೆಯೇ ಹೊರತು ಅದನ್ನೊಂದು ಅನುಭವದಿಂದ ಹೊಮ್ಮಿದ ಜೀವನಮೌಲ್ಯವಾಗಿ ಸ್ವೀಕರಿಸುವುದಿಲ್ಲ. ಅದರ ಬದಲಿಗೆ ತಂದೆ ತಾಯಿಗಳು ನಾವು  ಪ್ರಾಮಾಣಿಕವಾಗಿ ನಮಸ್ಕಾರ ಮಾಡುವುದನ್ನು ನಡೆಸಿಕೊಂಡು ಹೋದರೆ ಅದನ್ನು ನೋಡಿ ನೋಡಿ ಮಗು ಖಂಡಿತ ಅದನ್ನು ಒಂದು ಅನುಕರಣೀಯ ಮೌಲ್ಯವನ್ನಾಗಿ ಸ್ವೀಕರಿಸುತ್ತದೆ.

ಹೌದು. ಒಂದಲ್ಲ ನೂರಾರು ಸಲ ನಾವು ಮಕ್ಕಳೆದುರು ಹೇಳುವುದೊಂದು.. ಮಾಡುವುದೊಂದು! ಕೊನೆಗೂ ಮಕ್ಕಳು ನಾವು ಹೇಗೆ ವರ್ತಿಸುತ್ತೇವೆ ಎಂಬುದರಿಂದ ಪ್ರಭಾವಿತರಾಗುತ್ತಾರೆ ಹೊರತು ನಾವು ಏನು ಅಪ್ಪಣೆ ಹೊರಡಿಸುತ್ತೇವೆ ಎನ್ನುವುದರಿಂದ ಖಂಡಿತ ಅಲ್ಲ. ಸಣ್ಣವರಿದ್ದಾಗ ನಾವೆಲ್ಲ ಬೆಳೆದದ್ದು ಸಣ್ಣ ಊರುಗಳಲ್ಲಿ, ಗ್ರಾಮಗಳಲ್ಲಿ, ಕೇರಿಗಳಲ್ಲಿ ಮತ್ತು ನಾವು ಬೆಳೆದದ್ದೂ ಮನೆ ಆಚೆಗೇ ಜಾಸ್ತಿ! ಗುಡ್ಡ, ಕಾಡು, ಕಡಲು, ಬೇಲೆ, ಆಟದ ಬಯಲುಗಳೇ
ನಮ್ಮ ಆಡುಂಬೊಲ! ಎಲ್ಲರ ಮನೆಗಳಲ್ಲೂ ಬಡತನ ಇತ್ತು. ನೋವಿತ್ತು. ಅವಮಾನಗಳಿದ್ದವು. ಮದುವೆ ಮನೆಯ ರಂಪಗಳಿದ್ದವು. ದಾಯಾದಿ ಮತ್ಸರಗಳಿದ್ದವು. ಆದರೆ ಇವ್ಯಾವುವೂ  ಮಕ್ಕಳ ಜಗತ್ತನ್ನು ಹಾಳು ಮಾಡುತ್ತಿರಲಿಲ್ಲ. ಏಕೆಂದರೆ ಮಕ್ಕಳೆದುರು ಇದರ ಮಾತುಗಳೇ ಬರುತ್ತಿರಲಿಲ್ಲ. ಹಿರಿಯರ ಮಾತುಗಳೆಲ್ಲ ಮಕ್ಕಳ ಅಳವಿನ ಆಚೆಗಿದ್ದವು. ದಾಯಾದಿಗಳ ಮಕ್ಕಳು ಒಟ್ಟಿಗೇ ಆಡುತ್ತಿದ್ದೆವು. ಊಟ ಮಾಡುತ್ತಿದ್ದೆವು. ನಾವೆಲ್ಲ ಸ್ವಂತ ತಾಯಂದಿರ ಅಕ್ಕರೆಗಿಂತ ದೊಡ್ಡಮ್ಮ, ಚಿಕ್ಕಮ್ಮ, ಮಾಮಾ, ಮಾಮಿಯರ ಆರೈಕೆಯಲ್ಲಿ ಪಡೆದದ್ದೇ ಜಾಸ್ತಿ. ಹೀಗಾಗಿ ಮನಸ್ಸಲ್ಲಿ ದ್ವೇಷ, ಪೂರ್ವ ಗ್ರಹಗಳ ನೆರಳೂ ಬರದೆ, ಇಡೀ ಊರು ಒಂದು ಮನೆಯಾಗಿ ಭಾಸವಾಗುತ್ತಿತ್ತು. ನಿಜವಾದ ಅರ್ಥದಲ್ಲಿ ಅನಿಕೇತನವಾಗಿಯೇ ಊರಿನ ಜತೆ ಬೆರೆತಿದ್ದೆವು. ಆದರೆ ಈಗ ಪಾಲಕರಾಗಿ ನಿಂತಿರುವ ಅದೇ ನಮಗೆ ಏನಾಗಿದೆ? 

‘ನಾನು, ನನ್ನ ಹೆಂಡತಿ, ನನ್ನ ಮಕ್ಕಳು- ಇನ್ಯಾರೂ ಬೇಡ’ ಎಂಬ ಈ ಹೊಸ ಸ್ವಾತಂತ್ರ್ಯ ಸ್ವರ್ಗದ ಧಡ್ಡ ಕನಸಿನಲ್ಲಿ ಅನ್ಯರಲ್ಲಿ ಪ್ರೀತಿ ಬಿಡಿ, ಆಸಕ್ತಿಯೂ ಹೊರಟು ಹೋಗಿದೆ. ಶಾಲೆಯಲ್ಲೂ ನೋಡಿ ತಮ್ಮ ಮಕ್ಕಳ ಡಾನ್ಸ್ ಆಗಿದ್ದೇ ಪಾಲಕರು ಮನೆಗೆ ಹೊರಟೇ ಬಿಟ್ಟರು. ಅವರನ್ನೂ ಮೇಕಪ್ ಸಮೇತ ದರದರ ಎಳೆದುಕೊಂಡು. ತನ್ನ ಮಗುವಿನ ಸಮೀಪ ಅಪ್ಪಿತಪ್ಪಿ ಬೇರೊಂದು ಮಗು ನಿಂತಿದ್ದರೆ ಕಠೋರವಾಗಿ ಅದನ್ನು ದೂರ ಸರಿಸಿ ತಮ್ಮ ಮುದ್ದಿನ ಮುದ್ದೆಯ ಚಿತ್ರವೊಂದನ್ನು ತೆಗೆಯುವ ತೆವಲು ನಮಗೆ. ಜತೆಗೆ ನಮ್ಮ ಮಕ್ಕಳ  ಪ್ರತಿಸ್ಪರ್ಧಿ ಕಂದರ ಮೇಲೆ ಸುಪ್ತ ಸೂಕ್ಷ್ಮ ದ್ವೇಷ! ಮಕ್ಕಳಿಗೂ ಅಷ್ಟೇ, ಮನೆಯೇ ಅಂತಿಮ ಜಗತ್ತೂ ಕೂಡ. ಹೀಗಾಗಿ ಅವರ ಜಗತ್ತು ಕುಬ್ಜವಾಗುವುದರ ಜತೆಗೆ, ಪಾಲಕರ  ಸೀಮಿತ ಜಗದ ಕಸ, ಕಲ್ಮಷ, ವಿಷ, ವಿಷಯಗಳಿಂದಲೆ ಅವರ ಮನಸ್ಸು ಪೋಷಣೆ ಪಡೆಯಬೇಕಾಗಿದೆ. ಏಕೆಂದರೆ ಮನೆಯಲ್ಲಿ ತುಸುವಾದರೂ ಸದ್ವರ್ತನೆಗೆ ಇಂಬಾಗಬಲ್ಲ ಅಜ್ಜ ಅಜ್ಜಿಯರೂ ಈಗ ಇಲ್ಲ. ಹಿರಿಯರೂ ಇಲ್ಲ. ಹೀಗಾಗಿ ಸದಾ ಕಣ್ಣೆದುರೇ ಇರುವ ಮಕ್ಕಳೆದುರೇ ನಮ್ಮ ಎಲ್ಲಾ ಮಾತು, ಕತೆ, ಜಗಳ, ರಂಪ, ಸಣ್ಣತನ! ನಮ್ಮ ಆಫೀಸಿನ ಸಹೋದ್ಯೋಗಿಗಳ ಬಗ್ಗೆ, ನೆರೆಹೊರೆಯವರ ಬಗ್ಗೆ, ಆಗದವರ ಬಗ್ಗೆ ಬಾಯಿಗೆ ಬಂದ ಹಾಗೆ ಆಡಿಕೊಳ್ಳುತ್ತೇವೆ. ಜಾತಿ, ಧರ್ಮಗಳ ಬಗ್ಗೆ ನಮಗಿರುವ ಹೀನ ನಿಲುವುಗಳನ್ನೆಲ್ಲ  ಕಾರಿಕೊಳ್ಳುತ್ತೇವೆ. ಅವರು ಇಂಥವರು, ಇವರು ಅಂಥವರು ಅನ್ನುತ್ತೇವೆ. ಹಿರಿಯರನ್ನು ಏಕವಚನದಲ್ಲಿ ‘ಏನಂತೆ ಅವನು?’ ಎಂದು ಸಂಬೋಧಿಸಿ ಚಾಡಿ ಹೇಳುತ್ತೇವೆ.

ಸುಮ್ಮನೆ ಟೀವಿ  ನೋಡುತ್ತಲೋ, ಅಲ್ಲೇ ಡೈನಿಂಗ್ ಟೇಬಲ್ ಮೇಲೆ ಹೋಂ ವರ್ಕ್  ಮಾಡುತ್ತಲೋ ಇರುವ ಮಗುವಿನ ಮನಸ್ಸಿಗೆ ಇದು ಹೋಗುತ್ತಿಲ್ಲ  ಅಂದುಕೊಂಡಿರಾ? ತಪ್ಪು - ಅವನ ಮನಸ್ಸು ಈ ಮಾತುಗಳಿಂದಲೇ  ರೂಪುಗೊಳ್ಳತೊಡಗುತ್ತದೆ. ಜಾತಿ, ಮತ, ಧರ್ಮ, ಹಣ, ಅಂತಸ್ತುಗಳ ಬಗ್ಗೆ,  ಪೂರ್ವಗ್ರಹ ತುಂಬಿದ ನರಕವೊಂದು ಅವನಲ್ಲಿ ಈಗಲೇ  ಮೂಡತೊಡಗುತ್ತದೆ! ನಾಳೆ ಅವನು ನಮ್ಮದೇ ವರಸೆಯಲ್ಲಿ  ತಮ್ಮದೇ ಗತ್ತಿನಲ್ಲಿ ಈ ಮೂರ್ಖ ಮಾತುಗಳನ್ನು ಅವನ  ಗೆಳೆಯರೊಂದಿಗೆ ಆಡುತ್ತಿರುತ್ತಾನೆ. ಈಚೆಗೆ ಪುತ್ತೂರಿನಲ್ಲಿ ನಡೆದ  ಮಕ್ಕಳ ನಾಟಕೋತ್ಸವದಲ್ಲಿ ಕೆಲ ನಿರ್ದೇಶಕರು ಹಂಚಿಕೊಂಡ ಆತಂಕಗಳು ಭಯ ಹುಟ್ಟಿಸು ವಂತಿವೆ. ಸಾಮಾನ್ಯವಾಗಿ ನಾಟಕ,  ಪ್ರವಾಸ, ಶಿಬಿರ ಇತ್ಯಾದಿಗಳ ಮೂಲಕವೇ ಶಾಲಾ ಮಕ್ಕಳ  ಭಾವಪ್ರಪಂಚ ವಿಸ್ತಾರಗೊಳ್ಳುತ್ತಿರುತ್ತದೆ. ತಾನು ತನ್ನದು ಎಂಬ ಸೀಮಿತ ಕೋಶವನ್ನು ಮೀರಿ ಮಕ್ಕಳ ಮನಸ್ಸು ಮನುಜ ಪ್ರಪಂಚದ, ದಿನನಿತ್ಯದ ಸೋಜಿಗಗಳಿಗೆ ನಿಲುಕುತ್ತ ಬೆಳೆಯುತ್ತಿರುತ್ತದೆ. ರಂಗ ಶಿಕ್ಷಕರೊಬ್ಬರು ಹೇಳಿದರು- ‘ನಾನು ಅಲಿಬಾಬಾ ನಾಟಕ ಆಡಲು ತೆಗೆದುಕೊಂಡಾಗ- ಅದರಲ್ಲಿ ಖುಷಿಯಿಂದ ಪಾಲ್ಗೊಂಡಿದ್ದ ಕೆಲ ಮಕ್ಕಳು ಕೆಲ ದಿನಗಳ ತಾಲೀಮಿನ ನಂತರ ಒಮ್ಮೆಲೇ ಮಂಕಾಗಿಬಿಟ್ಟರು. ಕೆದಕಿದಾಗ ಗುಟ್ಟು ಹೊರಬಂತು. ಮನೆಯಲ್ಲಿ ಅವರು  ಈ ನಾಟಕದ ಸಂಭಾಷಣೆಗಳನ್ನು ಉರುಹಾಕುವಾಗ ಕೇಳಿಸಿಕೊಂಡ ಪಾಲಕರು- ನಿಮ್ಮ ಮಾಸ್ತರರಿಗೆ ಬೇರೆ ನಾಟಕ ಸಿಗಲಿಲ್ಲವೆ. ಇದು  ನಮ್ಮ ಧರ್ಮದ್ದಲ್ಲ. ಭಾಗವಹಿಸಿದರೆ ಹುಷಾರ್! - ಎಂದು  ಬೆದರಿಕೆ ಹಾಕಿದ್ದರು.’ ಕಲೆಯಲ್ಲಿ ಕರಗಿ, ಮಾನವೀಯವಾಗಿ  ಅರಳಿದಾಗಲೇ ಸಕಲ ಜೀವರಾಶಿಗಳ ಮೇಲೆ ಮಮತೆ ಉಕ್ಕಲು  ಸಾಧ್ಯ. ಇಂಥ ಶುದ್ಧ ಸಂಸ್ಕಾರಕ್ಕೆ ಮಕ್ಕಳನ್ನು ಈಡುಮಾಡುವ  ಬದಲಿಗೆ- ಅವರ ತಲೆಯಲ್ಲಿ ಭೇದಭಾವವನ್ನು ಬಿತ್ತುವ ಈ ರೀತಿಗೆ ಏನನ್ನೋಣ? ಅವರದೇ ಇನ್ನೊಂದು ಅನುಭವ- ಅವರ ನಾಟಕದಲ್ಲಿಯ ಆರಂಭದ ‘ಗಣಪತಿ ಸ್ತುತಿ’ಯನ್ನು ಹಾಡಬಾರದು,

ಅದು ತಮ್ಮ ದೇವರ ಸ್ತುತಿಯಲ್ಲ - ಎಂದು ಕೆಲವು ಪಾಲಕರು ತಮ್ಮ  ಮಕ್ಕಳನ್ನು ತಡೆದದ್ದು. ಆದರೆ ಪ್ರತಿ ಸಲವೂ ಅನುಭವಕ್ಕೆ ಬಂದ ಮಹತ್ವದ ಸಂಗತಿ ಎಂದರೆ ಈ ಮಕ್ಕಳು ಶಿಕ್ಷಕರಿಗೆ-‘ದಯವಿಟ್ಟು ನಮ್ಮ ಪಾಲಕರಿಗೆ ಬುದ್ಧಿ ಹೇಳಿ’ ಎನ್ನುವ ಧಾಟಿಯಲ್ಲೇ ಗೋಗರೆದದ್ದು! ಅಂದರೆ ತಮ್ಮ ತಂದೆ ತಾಯಿಗಳು ತಪ್ಪು ಮಾಡುತ್ತಿದ್ದಾರೆ ಎಂಬ ಅಂಶ ಮಕ್ಕಳಿಗೆ ಖಂಡಿತ ಸ್ಪಷ್ಟವಿದೆ. ಅವರ ಮುಕ್ತ ಮನಸ್ಸು ತೀರ ಮುಜುಗರದಿಂದಲೇ ಈ ವಿಷಬೀಜ ಗಳನ್ನು ಎದುರಿಸುತ್ತಿದೆ. ಟೀವಿಯ ಚಲನಚಿತ್ರವನ್ನು ನೋಡಲು ತಡವಾಗಿ ಬಂದು ಸೇರಿಕೊಂಡ ಮಗು, ತೆರೆಯ ಮೇಲಿನ ಪಾತ್ರದ ಕುರಿತು ಮೊದಲು ಕೇಳುವ ಪ್ರಶ್ನೆ ‘ಇವನು ಒಳ್ಳೆಯವನೋ, ಕೆಟ್ಟವನೋ’. ಅಂದರೆ ಒಟ್ಟಾರೆ ಮೂಲಭೂತವಾಗಿ ಮನುಷ್ಯನಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು - ಇವುಗಳ ನಡುವಿನ ದ್ವಂದ್ವವೇ ಮಗುವಿನ ರಂಜನೆಯ ಮುಖ್ಯ ಜೀವಾಳವಾಗಿರುತ್ತದೆ. ಚಂದಮಾಮದ ಕಥೆಯಿಂದ ಹಿಡಿದು ಮ್ಯಾಟ್ರಿಕ್ಸ್ ಟೂ ತನಕವೂ  ಈ ವಿನ್ಯಾಸವೇ ನಡೆದುಬಂದಿದೆ. ಈವಿಲ್ ಅಥವಾ ದುಷ್ಟತನದ  ರುಚಿ, ಆಮಿಷ ಎಷ್ಟೇ ಇದ್ದರೂ ಮತ್ತೆ ಮತ್ತೆ ನೋಬಿಲಿಟಿ ಅಥವಾ ಒಳ್ಳೆಯತನಕ್ಕಾಗಿನ ತುಡಿತವೇ ಮನುಷ್ಯನ ಬಾಳಪಯಣದ ನೆಮ್ಮದಿಯ ಮುಖ್ಯ ಸ್ಥೈರ್ಯವಾಗಿದೆ. ಮತ್ತು ಇದರ ರುಚಿಯನ್ನು ಮೊದಲಿಗೆ ಹತ್ತಿಸಬೇಕಾದ ಹೊಣೆ ಮನೆಯಲ್ಲಿ ಪಾಲಕರ ಮೇಲಿದೆ.
ಮಕ್ಕಳ ಮನಸ್ಸು ಅದ್ಭುತವಾದದ್ದು. ನಿಷ್ಕಾರಣ ಪ್ರೀತಿಯ  ಅನುಪಮ ಸ್ವರ್ಗ ಅದು. ಅಲ್ಲಿ ಗೋಡೆಗಳಿಲ್ಲ, ತಪ್ಪುಗಳಿಲ್ಲ,  ಶಿಕ್ಷೆಗಳಿಲ್ಲ. ಅವರ ನಿರ್ಮಲ ಮನದಿಂದ, ನಿಲುವಿನಿಂದ ಬದುಕಿನ ಕುರಿತ ಪ್ರೀತಿಯನ್ನು, ಅನ್ಯದ ಕುರಿತ ವಾತ್ಸಲ್ಯವನ್ನು ಕಲಿಯಬೇಕಾಗಿರುವುದು ನಾವು. ಹೊರತು ಸ್ವಾರ್ಥ, ಏಕಾಂಗಿತನ, ತಲ್ಲಣ, ದುಗುಡ, ದ್ವೇಷ, ಪೈಪೋಟಿಗಳ ನಮ್ಮ ಇಕ್ಕಟ್ಟಿನ ನರಕದ ಅಲೆಗಳಿಗೆ ಅವರನ್ನು ಈಡಾಗಿಸುವುದು ಅಕ್ಷಮ್ಯ.  ಸುಮಾರು ತನ್ನಷ್ಟೇ ಇರುವ ಪೋರನನ್ನು ಕಂಕುಳಲ್ಲಿಟ್ಟುಕೊಂಡು ಗುಡ್ಡ ಹತ್ತು ತ್ತಿರುವ ಬಾಲಿಕೆಯೊಬ್ಬಳನ್ನು ಗಾಂಧಿ ಕೇಳಿದರಂತೆ: ‘ಇದೇನಮ್ಮಾ... ನಿನಗಿವನು ಭಾರವಾಗುವುದಿಲ್ಲವೆ?’ ಅಂತ. ಅದಕ್ಕವಳು- ‘ಛೆ.. ಇಲ್ಲ. ಇವನು ನನ್ನ ತಮ್ಮ’ ಎಂದಳಂತೆ! 

-ಜಯಂತ್ ಕಾಯ್ಕಿಣಿ