ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತದ ಆದೇಶಕ್ಕೆ ಇಲ್ಲ ಕಿಮ್ಮತ್ತು!

Chikkaballapura Administration failed to act for culprit
Highlights

ಜಿಲ್ಲೆಯಾದ್ಯಂತ ಪ್ಲಾಸ್ಟಿಕ್, ಫ್ಲೆಕ್ಸ್‌ಗಳನ್ನ ನಿಷೇಧಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರು ಇನ್ನು ಸಮರ್ಕವಾಗಿ ಜಾರಿಯಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಗರರಸಭೆ ಅಧಿಕಾರಿಗಳು ಪೂರ್ಣ ವಿಫಲವಾಗಿದ್ದಾರೆ. ಇಲ್ಲಿದೆ ಚಿಕ್ಕಬಳ್ಳಾಪುರ ಜಿಲ್ಲೆಯ ಕಂಪ್ಲೀಟ್ ರಿಪೋರ್ಟ್.
 

ಅಶ್ವತ್ಥನಾರಾಯಣ ಎಲ್.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ(ಆ.09): ಜಿಲ್ಲಾ ಮಟ್ಟದಲ್ಲಿನ ಆದೇಶಗಳು ಕೇವಲ ಕಾಗದಕ್ಕೆ ಮಾತ್ರ ಸೀಮಿತ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ನೂತನ ಜಿಲ್ಲಾಧಿಕಾರಿಯಾದರೂ ಆದೇಶಗಳು ಸಮರ್ಪಕವಾಗಿ ಅನುಷ್ಠಾನವಾಗಲು ಕ್ರಮವಹಿಸುವರೇ ಎಂಬ ಪ್ರಶ್ನೆ ಪ್ರಸ್ತುತ  ಸಾರ್ವಜನಿಕರನ್ನು ಕಾಡುತ್ತಿದೆ.

ಈ ಹಿಂದಿನ ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಜಿಲ್ಲಾಡಳಿತದಿಂದ ಜಾರಿಯಾಗುವ ಆದೇಶಗಳು ಕೇವಲ ಆರಂಭಿಕ ಶೂರತ್ವ ಮೆರೆಯುವ ಜೊತೆಗೆ ಅನುಷ್ಠಾನವಾದ ನಿದರ್ಶನಗಳೇ ಇಲ್ಲ. ಈ ಸಾಲಿಗೆ ಪ್ರಸ್ತುತ ಪ್ಲಾಸ್ಟಿಕ್ ನಿಷೇಧವೂ ಸೇರಿದ್ದು, ಪರಿಸರ ಸ್ನೇಹಿ ಪ್ರವಾಸಿ ತಾಣಗಳಾಗಿಸಲು ಅಧಿಕಾರಿಗಳೇ ಸಹಕರಿಸುತ್ತಿಲ್ಲ ಎಂಬ ಆರೋಪ ಬಲವಾಗಿದೆ. 

ಕೋಟ್ಪಾ ಏನಾಯಿತು? 
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಯಂತ್ರಿಸುವ ಕೋಟ್ಪಾ ಕಾಯ್ದೆಯನ್ನೇ ಜಿಲ್ಲೆಯಲ್ಲಿ ಗಾಳಿಗೆ ತೂರಲಾಗಿದೆ. ಕೋಟ್ಪಾ ಕಾಯ್ದೆಯಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. 

ಜೊತೆಗೆ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಆದರೆ, ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕೋಟ್ಪಾ ಸಮಿತಿ ರಚನೆ ಮಾಡಲಾಗಿದೆ ಹೊರತು ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಮುಂದಾಗಿಲ್ಲ ಎಂಬುದಕ್ಕೆ ಸಾರ್ವಜನಿಕ ಸ್ಥಳಗಳೇ ಸಾಕ್ಷಿಯಾಗಿವೆ. ಬಸ್ ನಿಲ್ದಾಣ, ಆಟೋ ನಿಲ್ದಾಣ, ಚಿತ್ರಮಂದಿರ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿಯೂ ಬಹಿರಂಗವಾಗಿಯೇ ಧೂಮಪಾನ ಮಾಡುತ್ತಿದ್ದರೂ ಕಡಿವಾಣ ಹಾಕುವ ಅಧಿಕಾರಿಯೇ ಇಲ್ಲವಾಗಿದ್ದಾರೆ. 

ಪ್ಲಾಸ್ಟಿಕ್ ನಿಷೇಧವೂ ಮೂಲೆಗೆ: 
ಇನ್ನು ಕಳೆದ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರು, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮಾರಾಟ ಮಾಡುವುದು ಮತ್ತು ಬಳಸುವುದನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದರು. ಅಲ್ಲದೇ, ಪ್ಲಾಸ್ಟಿಕ್‌ನಿಂದ ತಯಾರಿಸುವ ಫ್ಲೆಕ್ಸ್‌ಗಳನ್ನು ಮುದ್ರಿಸುವುದು ಮತ್ತು ಪ್ರದರ್ಶಿಸುವುದನ್ನು ಸಂಪೂರ್ಣ ನಿಷೇಧಿಸಿ ಆದೇಶಿಸಿದ್ದರು.

ಅಲ್ಲದೇ, ಪ್ರಮುಖ ಪ್ರವಾಸಿ ತಾಣಗಳಾದ ನಂದಿ ಗಿರಿಧಾಮ, ಆವುಲ ಬೆಟ್ಟ ಸೇರಿದಂತೆ ಇತರೆ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳೂ ಸಹಕರಿಸಬೇಕೆಂದು ಸೂಚಿಸಿದ್ದರು. ಇದರಿಂದಾಗಿ ಇಡೀ ಜಿಲ್ಲೆ ಪ್ಲಾಸ್ಟಿಕ್ ಮುಕ್ತವಾಗಲಿದೆ ಎಂಬ ಆಶಾಭಾವ ಪ್ರಜ್ಞಾವಂತರಲ್ಲಿ ಮೂಡಿತ್ತು. ಆದರೆ, ಇದು ಕೇವಲ ಆದೇಶಕ್ಕೆ ಮಾತ್ರ ಸೀಮಿತ ಎಂಬುದು ಪ್ರಸ್ತುತ ಸಾಬೀತಾಗಿದೆ.

ಇನ್ನೂ ನಿಂತಿಲ್ಲ ಪ್ಲಾಸ್ಟಿಕ್ ಮಾರಾಟ: 
ನಗರ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿನ ತಳ್ಳುವ ಗಾಡಿಯಿಂದ, ಪಾನಿಪೂರಿ ಅಂಗಡಿಯವರೆಗೂ ಎಲ್ಲರೂ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇನ್ನು ಮಾಂಸದ ಅಂಗಡಿಗಳವರಂತೂ ಪ್ಲಾಸ್ಟಿಕ್ ಇಲ್ಲದೆ ವ್ಯಾಪಾರವೇ ಸಾಧ್ಯವಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಪ್ರತಿನಿತ್ಯ ಸಾವಿರಾರು ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಸಾರ್ವಜನಿಕರ
ಕೈಯಲ್ಲಿ ಓಡಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಅತ್ತ ಗಮನ ಹರಿಸುತ್ತಲೇ ಇಲ್ಲ.

ಇನ್ನು ಪ್ರವಾಸಿ ತಾಣಗಳಾದ ನಂದಿಗಿರಿಧಾಮ ಮತ್ತು ಆವುಲಬೆಟ್ಟಗಳು ಸಂಪೂರ್ಣ ಪ್ಲಾಸ್ಟಿಕ್ ಮಯವಾಗಿವೆ ಎಂಬುದಕ್ಕೆ ಈ ಪ್ರದೇಶಗಳ ಗಿಡ ಮರಗಳಿಗೆ ನೇತಾಡುತ್ತಿರುವ ಪ್ಲಾಸ್ಟಿಕ್ ಸಾಕ್ಷಿಯಾಗಿದೆ. ಪ್ರತಿನಿತ್ಯ ಪ್ರತಿ ವಾಹನವನ್ನೂ ಪರಿಶೀಲಿಸಿ ಪ್ಲಾಸ್ಟಿಕ್ ಇದ್ದರೆ ವಶಕ್ಕೆ ಪಡೆದು ಜನರಲ್ಲಿ ಅರಿವು ಮೂಡಿಸುವಂತೆ ಹಿಂದಿನ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶ ಸಂಪೂರ್ಣ ಮರತೇ ಹೋಗಿದೆ ಎಂಬುದು ವಿಶೇಷ.

ಎಲ್ಲೆಲ್ಲೂ ರಾರಾಜಿಸುತ್ತಿವೆ ಫ್ಲೆಕ್ಸ್‌ಗಳು: 
ಇನ್ನು ಯಾವುದೇ ಪ್ರಮುಖ ಕಾರ್ಯಕ್ರಮವಾದರೂ ಪ್ಲಾಸ್ಟಿಕ್‌ನಿಂದ ತಯಾರಾಗಿರುವ ಫ್ಲೆಕ್ಸ್‌ಗಳನ್ನು ಹಾಕುವುದು ಇತ್ತೀಚಿನ ದಿನಗಳಲ್ಲಿ ರೂಡಿಯಾಗಿದೆ. ಆದರೆ, ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ಜಿಲ್ಲಾಡಳಿತ ನಿಷೇಧಿಸಿರುವ ಕಾರಣ ಫ್ಲೆಕ್ಸ್ ಹಾಕಲು ನಗರಸಭೆ ಅನುಮತಿ ನೀಡುವಾಗಲೇ ಪ್ಲಾಸ್ಟಿಕ್ ಫ್ಲೆಕ್ಸ್ ಯಾಗಿದ್ದರೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗಳ ಕಟ್ಟಾಜ್ಞೆ ಇದೆ. ಆದರೆ, ನಗರಸಭೆ ಈ ಆದೇಶವನ್ನೂ ಗಾಳಿಗೆ ತೂರಿ ಅನುಮತಿ ನೀಡುತ್ತಿರುವುದು ಸರ್ಕಾರಿ ಆದೇಶಕ್ಕೆ ಸೆಡ್ಡುಹೊಡೆಯುವಂತಿದೆ. 

ಪರಿಸರ ನಾಶ ಮತ್ತು ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರದ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ತಪ್ಪಿಸಲು ಸರ್ಕಾರ ಜಾರಿ ಮಾಡುವ ಆದೇಶಗಳನ್ನು ಸರ್ಕಾರಿ ಅಧಿಕಾರಿಗಳೇ ಗಾಳಿಗೆತೂರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನೂತನ ಜಿಲ್ಲಾಧಿಕಾರಿಗಳಾದರೂ ಇತ್ತ ಗಮನ ಹರಿಸಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವ ಕುರಿತು ಹೆಚ್ಚಿನ ಮುತುವರ್ಜಿ ವಹಿಸುವರೇ ಎಂಬುದನ್ನು ಕಾದುನೋಡಬೇಕಿದೆ.

loader