Asianet Suvarna News Asianet Suvarna News

ಭ್ರಷ್ಟಾಚಾರ ತನಿಖೆ; ಸಚಿವಾಲಯಕ್ಕೆ ಮುಖ್ಯ ಜಾಗೃತ ಅಧಿಕಾರಿಗಳ ನೇಮಕ

ರಾಜ್ಯಪಾಲರು, ಮುಖ್ಯಮಂತ್ರಿಗಳ ಕಚೇರಿ, ಜನಸ್ಪಂದನ ವಿಭಾಗದಿಂದ ಬರುವ ಸರ್ಕಾರಿ ಅಧಿಕಾರಿಗಳ ವಿರುದ್ಧದ ಎಲ್ಲ ದೂರುಗಳನ್ನು ಪರಿಶೀಲಿಸಿ ವಿಚಾರಣೆಗಾಗಿ ಎಸಿಬಿಗೆ ವಹಿಸುವ ಅಧಿಕಾರವನ್ನು ಮುಖ್ಯ ಜಾಗೃತ ಅಧಿಕಾರಿಗಳಿಗೆ ನೀಡಲಾಗಿದೆ. ಈ ಕುರಿತಾಗಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಮಾಹಿತಿ ನೀಡಿ, ಅಂಥವರ ವಿರುದ್ಧ ಕ್ರಮ ಜರುಗಿಸುವಂತೆ ನೋಡಿಕೊಳ್ಳಬೇಕು.

chief vigilance officers appointment to probe corruption cases

ವರದಿ: ಶಿವಕುಮಾರ ಮೆಣಸಿನಕಾಯಿ, ಕನ್ನಡಪ್ರಭ

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿ ವರ್ಷಗಟ್ಟಲೇ ಅಧಿಕಾರ ಅನುಭವಿಸುತ್ತಿದ್ದ ಸರ್ಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧದ ಮೊಕದ್ದಮೆಗಳು ಶೀಘ್ರ ಇತ್ಯರ್ಥಗೊಂಡು ಶಿಕ್ಷೆ ಅನುಭವಿಸುವಂತಾಗಲು ರಾಜ್ಯ ಸರ್ಕಾರ ಪ್ರತಿ ಇಲಾಖೆಗೆ ‘ಮುಖ್ಯ ಜಾಗೃತ ಅಧಿಕಾರಿ’ಗಳ ನೇಮಕ ಮಾಡಿದೆ. ಇನ್ನು ಮುಂದೆ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹದಳ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯಲ್ಲಿ ಸರ್ಕಾರಿ ನೌಕರರ ವಿರುದ್ಧದ ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಚಾರಣೆ ನಡೆಸಲು ಈ ನೇಮಕ ಮಾಡ​ಲಾ​ಗಿದೆ.

ಈವ​ರೆಗೆ ಭ್ರಷ್ಟಾಚಾರ ಪ್ರಕರಣಗಳು ತನಿಖಾ ಸಂಸ್ಥೆಗಳಲ್ಲಿ ದಾಖಲಾಗಿ ವರ್ಷಗಳೇ ಕಳೆದರೂ ಸಿಬ್ಬಂದಿ ಅಥವಾ ಅಧಿಕಾರಿಗಳ ಕುರಿತಾದ ಮಾಹಿತಿಗಳನ್ನು ತನಿಖೆಗೆ ಒದಗಿಸುವಲ್ಲಿ ವಿಳಂಬವಾಗುತ್ತಿತ್ತು. ಇದರ ಲಾಭ ಪಡೆಯುತ್ತಿದ್ದ ನೌಕರರು ಸೇವೆಯಲ್ಲಿ ಮುಂದುವರಿಯುತ್ತಿದ್ದರು. ಹೀಗಾಗಿ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳೇ ಮುಂದಾಗಿ ಸರ್ಕಾರದ ಮಾಹಿತಿ ಕೋರಿ ನಿರ್ದೇಶನ ನೀಡುತ್ತಿದ್ದವು. ಹಲವು ಪ್ರಕರಣಗಳಲ್ಲಿ ನೌಕರರು ನಿವೃತ್ತಿ ಹೊಂದುತ್ತಿದ್ದರು. ಬಳಿಕ ಅವರ ವಿರುದ್ಧದ ಪ್ರಕರಣಗಳು ಮುಚ್ಚಿ ಹೋಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ರತಿ ಇಲಾಖೆಗೆ ತನಿಖೆಯ ಕುರಿತಂತೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಜಾಗೃತ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳು ಹಾಗೂ ದಂಡನಾತ್ಮಕ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರ ನೀಡಲಾಗಿದೆ.

ಯಾವ ಪ್ರಕರಣಗಳಲ್ಲಿ ಮಾಹಿತಿ?:
ಲಂಚ, ಭ್ರಷ್ಟಾಚಾರ, ಫೋರ್ಜರಿ, ವಂಚನೆ, ವಿಶ್ವಾಸ ದ್ರೋಹ, ಖೊಟ್ಟಿದಾಖಲಾತಿಗಳ ಆರೋಪಗಳಿಗೆ ಸಂಬಂಧಿಸಿದ ದೂರುಗಳು, ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳು ಮತ್ತು ತಜ್ಞ ಪೊಲೀಸ್‌ ತನಿಖೆಯ ಅಗತ್ಯವಿರುವ ಸಂಕೀರ್ಣ ಸ್ವರೂಪದ ಪ್ರಕರಣಗಳಿಗೆ ಸಂಬಂದಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತನಿಖೆಗಾಗಿ ಮಾಹಿತಿ ನೀಡುವುದು ಇವರ ಅಧಿಕಾರ ವ್ಯಾಪ್ತಿಗೆ ಸೇರುತ್ತದೆ.

ಮುಂಜಾಗೃತಾ ಕ್ರಮಗಳ ಕರ್ತವ್ಯ
ಭ್ರಷ್ಟಾಚಾರ ಅಥವಾ ಅಕ್ರಮಗಳ ವ್ಯಾಪ್ತಿಯನ್ನು ತೊಡೆದು ಹಾಕಲು ಅಥವಾ ಕಡಿಮೆ ಮಾಡುವ ದೃಷ್ಟಿಯಿಂದ ಸರ್ಕಾರದ ಇಲಾಖೆಗಳ ಅಥವಾ ಸಂಸ್ಥೆಗಳಲ್ಲಿ ಅಸ್ತಿತ್ವದಲ್ಲಿರುವ ನಿಯಮಾವಳಿಗಳು ಮತ್ತು ಕಾರ್ಯ ವಿಧಾನಗಳನ್ನು ವಿವರವಾಗಿ ಪರಿಶೀಲಿಸಿ, ಎಸಿಬಿ ಅಥವಾ ಲೋಕಾಯುಕ್ತಕ್ಕೆ ನೆರವು ನೀಡುವುದು ಜಾಗೃತ ಅಧಿಕಾರಿಗಳ ಕರ್ತವ್ಯವಾಗಿದೆ. ಅಲ್ಲದೇ ವ್ಯವಸ್ಥೆಯ ವೈಫಲ್ಯಗಳು ಮತ್ತು ಭ್ರಷ್ಟಾಚಾರ ಅಥವಾ ಅಕ್ರಮಗಳ ಅಸ್ತಿತ್ವವನ್ನು ಪತ್ತೆ ಹಚ್ಚಲು ಅನಿರೀಕ್ಷಿತ ತಪಾಸಣೆ ಮತ್ತು ನಿಯಮಿತ ತಪಾಸಣೆಗಳನ್ನು ಮಾಡಬೇಕಾಗಿದೆ.

ದಂಡನಾತ್ಮಕ ಕ್ರಮಗಳ ಕರ್ತವ್ಯ
ಭ್ರಷ್ಟಾಚಾರ ನಿಗ್ರಹದಳ ಅಥವಾ ಇತರೆ ತನಿಖಾ ಸಂಸ್ಥೆಗಳು ಯಾವುದೇ ಅಧಿಕಾರಿಯ ಬಗ್ಗೆ ಮಾಹಿತಿ, ಅನುಮತಿ, ಅಭಿಪ್ರಾಯ, ಸ್ಪಷ್ಟೀಕರಣ ಅಥವಾ ದಾಖಲೆಗಳನ್ನು ಕೋರಿದಾಗ 15 ದಿನಗಳ ಒಳಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ 15 ದಿನದೊಳಗೆ ಮಾಹಿತಿ ನೀಡದಿದ್ದಲ್ಲಿ ಸಂಬಂಧಪಟ್ಟಇಲಾಖಾ ಮುಖ್ಯಸ್ಥರು ಅಥವಾ ಕಾರ್ಯದರ್ಶಿಯ ಹಂತಕ್ಕೆ ವರ್ಗಾಯಿಸಿ ಒಟ್ಟಾರೆ 30 ದಿನಗಳೊಳಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಭ್ರಷ್ಟಾಚಾರ ನಿಗ್ರಹದಳ ಅಥವಾ ಇತರೆ ತನಿಖಾ ಸಂಸ್ಥೆಗಳು ಅಭಿಯೋಜನಾ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳನ್ನು ನಿಗದಿತ ಅವಧಿಯೊಳಗೆ ವಿಲೇಗೊಳಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ.

ಆಡಳಿತದಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ದೂರುಗಳ ತ್ವರಿತ ಹಾಗೂ ಸೂಕ್ತ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಇಲಾಖೆಗಳಿಗೆ ಮುಖ್ಯ ಜಾಗೃತ ಅಧಿಕಾರಿಗಳನ್ನು ನೇಮಕ ಮಾಡಿದೆ. ಇನ್ನು ಆಯುಕ್ತಾಲಯ ಮತ್ತು ಸರ್ಕಾರದ ವಿವಿಧ ಸಂಸ್ಥೆಗಳು ಹಾಗೂ ಜಿಲ್ಲಾಮಟ್ಟದಲ್ಲಿ ಜಾಗೃತ ಅಧಿಕಾರಿಗಳ ನೇಮಕಕ್ಕೆ ಅಧಿಸೂಚನೆ ಹೊರಬಿದ್ದಿದೆ. ಇನ್ನು ಮೇಲಾದರೂ ಭ್ರಷ್ಟಾಚಾರ ಪ್ರಕರಣಗಳಿಗೆ ತ್ವರಿತ ಮುಕ್ತಿ ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕು.

ಏನೇನು ಅಧಿಕಾರ?
ರಾಜ್ಯಪಾಲರು, ಮುಖ್ಯಮಂತ್ರಿಗಳ ಕಚೇರಿ, ಜನಸ್ಪಂದನ ವಿಭಾಗದಿಂದ ಬರುವ ಸರ್ಕಾರಿ ಅಧಿಕಾರಿಗಳ ವಿರುದ್ಧದ ಎಲ್ಲ ದೂರುಗಳನ್ನು ಪರಿಶೀಲಿಸಿ ವಿಚಾರಣೆಗಾಗಿ ಎಸಿಬಿಗೆ ವಹಿಸುವ ಅಧಿಕಾರವನ್ನು ಮುಖ್ಯ ಜಾಗೃತ ಅಧಿಕಾರಿಗಳಿಗೆ ನೀಡಲಾಗಿದೆ. ಈ ಕುರಿತಾಗಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಮಾಹಿತಿ ನೀಡಿ, ಅಂಥವರ ವಿರುದ್ಧ ಕ್ರಮ ಜರುಗಿಸುವಂತೆ ನೋಡಿಕೊಳ್ಳಬೇಕು. ಇದಲ್ಲದೇ ಇಲಾಖಾ ವಿಚಾರಣಾ ಪ್ರಕರಣಗಳಲ್ಲೂ ವಿಚಾರಣಾಧಿಕಾರಿ ಹಾಗೂ ದಂಡನಾಧಿಕಾರಿಗಳು ಆಯಾ ಶಿಸ್ತು ಪ್ರಾಧಿಕಾರ ನೇಮಿಸಿ ಕ್ರಮ ಜರುಗಿಸುವ ಮೇಲುಸ್ತುವಾರಿ ಕೆಲಸವೂ ಮುಖ್ಯ ಜಾಗೃತ ಅಧಿಕಾರಿಗಳಿದ್ದೇ ಆಗಿದೆ.

Latest Videos
Follow Us:
Download App:
  • android
  • ios