ಚೆನ್ನೈ[ಆ.26]: : ಟೆಕ್ಕಿಯೊಬ್ಬ ತಾನು ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್‌ ಎಂದು ಹೇಳಿಕೊಂಡು, ಪಂಚತಾರಾ ಹೋಟೆಲ್‌ಗಳಲ್ಲಿ ನೌಕರಿ ಕೊಡಿಸುವುದಾಗಿ ಆಫರ್‌ ನೀಡಿ 600 ಜನ ಮಹಿಳೆಯರ ಅರೆನಗ್ನ ಫೋಟೋ, ವಿಡಿಯೋಗಳನ್ನು ಪಡೆದುಕೊಂಡು ನಂತರ ಹಣಕ್ಕಾಗಿ ಅವರನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ರಾಜ್‌ ಚೈಝೀನ್‌ ಆಲಿಯಾಸ್‌ ಪ್ರದೀಪ್‌(33) ಎಂಬ ನಕಲಿ ಎಚ್‌ಆರ್‌ ಮಹಿಳೆಯರನ್ನು ಪೀಡಿಸುತ್ತಿದ್ದವನು.

ಐಟಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ಪ್ರದೀಪ್‌, ತಾನೊಬ್ಬ ಎಚ್‌ಆರ್‌ ಅಂತಾ ಸುಳ್ಳು ಹೇಳಿ ನಂಬಿಸಿ ಹಲವಾರು ಸುಂದರ ಸ್ತ್ರೀಯರ ಸಂಪರ್ಕ ಸಾಧಿಸುತ್ತಿದ್ದ. ಅವರಿಗೆ ಪಂಚತಾರಾ ಹೋಟೆಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ನಿಮ್ಮ ಆಕರ್ಷಕ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿಕೊಡಿ ಎನ್ನುತ್ತಿದ್ದ. ಇವನ ಮಾತಿಗೆ ಮಾರುಹೋದ ಸ್ತ್ರೀಯರು ಚಿತ್ರಗಳನ್ನು ಕಳುಹಿಸಿಕೊಟ್ಟಿದ್ದಾರೆ. ತದನಂತರ ಇವರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಹಣ ನೀಡಲು ಬೇಡಿಕೆ ಇಡುತ್ತಿದ್ದ. ಇಲ್ಲದಿದ್ದರೆ ನಿಮ್ಮ ಫೋಟೋ- ವಿಡಿಯೋಗಳನ್ನು ಬಿತ್ತರಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗೆ ನಕಲಿ ಎಚ್‌ಆರ್‌ನ ಜಾಲಕ್ಕೆ 16 ರಾಜ್ಯಗಳ 600 ಸ್ತ್ರೀಯರು ಸಿಲುಕಿದ್ದಾರೆ.

ಈ ಬಗ್ಗೆ ಮಹಿಳೆಯೋರ್ವಳು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ನಕಲಿ ಎಚ್‌ಆರ್‌ನ ಕರ್ಮಕಾಂಡ ಬಯಲಾಗಿದೆ. ನಂತರ ಇವನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಹತಾಶೆಯಿಂದ ಈ ಕೃತ್ಯ ಎಸಗುತ್ತಿದ್ದೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.