ಬೆಂಗಳೂರು :  2017ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಕಾರು ಅಪಘಾತಕ್ಕೂ ಮುನ್ನ ಖ್ಯಾತ ಉದ್ಯಮಿ ದಿ.ಆದಿಕೇಶವುಲು ಮೊಮ್ಮಗ ಗೀತಾವಿಷ್ಣು, ಚಿತ್ರನಟ ದೇವರಾಜ್‌ ಕಿರಿಯ ಪುತ್ರ ಪ್ರಣವ್‌ ಹಾಗೂ ಅವರ ಸ್ನೇಹಿತರು ಗಾಂಜಾ ಸೇವಿಸಿದ್ದ ಸಂಗತಿ ದೃಢಪಟ್ಟಿದೆ ಎಂದು ನ್ಯಾಯಾಲಯಕ್ಕೆ ಸೋಮವಾರ ಸಿಸಿಬಿ ಆರೋಪ ಪಟ್ಟಿಸಲ್ಲಿಸಿದೆ.

ಪ್ರಕರಣದ ತನಿಖೆ ಮುಕ್ತಾಯಗೊಳಿಸಿದ ಸಿಸಿಬಿ, ಆರೋಪಿಗಳಾದ ಗೀತಾವಿಷ್ಣು, ಪ್ರಣವ್‌ ದೇವರಾಜ್‌, ಮಾರತ್‌ಹಳ್ಳಿಯ ಶಶಾಂಕ್‌, ವಿನೋದ್‌, ಜುನೈದ್‌, ಮಹಮ್ಮದ್‌ ಫೈಸಲ್‌ ಹಾಗೂ ಗೀತಾ ವಿಷ್ಣು ಬಾವ ಡಾ.ರಾಜೇಶ್‌ ನಾಯ್ಡು, ಅಕ್ಕ ಚೈತನ್ಯ ಹಾಗೂ ಆನಂದನ್‌ ವಿರುದ್ಧ ಮಾದಕ ವಸ್ತು ನಿಗ್ರಹ ಕಾಯ್ದೆಯ ಸೆಕ್ಷೆನ್‌ 20, 27 ಹಾಗೂ 212 ಐಪಿಸಿ ಅಡಿಯಲ್ಲಿ ಸುಮಾರು 600 ಪುಟಗಳ ದೋಷಾರೋಪ ಪಟ್ಟಿಸಲ್ಲಿಸಿದೆ.

ಅಪಘಾತಕ್ಕೂ ಮುನ್ನ ಗೀತಾವಿಷ್ಣು ಮತ್ತು ಪ್ರಣವ್‌ ದೇವರಾಜ್‌ ಅವರು ತಮ್ಮ ಗೆಳೆಯರ ಜತೆ ಸೇರಿಕೊಂಡು ಪಾರ್ಟಿ ಮಾಡಿದ್ದರು. ಈ ಪಾರ್ಟಿ ಮುಗಿದ ನಂತರ ಕಾರು ಅಪಘಾತವಾಗಿದೆ. ತನಿಖೆ ವೇಳೆ ಈ ಆರೋಪಿಗಳ ರಕ್ತ ಮಾದರಿಯಲ್ಲಿ ಗಾಂಜಾ ಅಂಶವಿರುವುದು ದೃಢಪಟ್ಟಿರುತ್ತದೆ ಎಂದು ಆರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಇದಕ್ಕೆ ಪೂರಕವಾಗಿ ವೈದ್ಯಕೀಯ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ವರದಿ ಹಾಗೂ 25ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ಲಗತ್ತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2017ರ ಸೆಪ್ಟೆಂಬರ್‌ ರಾತ್ರಿ 12.40ರ ವೇಳೆ ಉದ್ಯಮಿ ದಿ. ಮೊಮ್ಮಗ ಗೀತಾವಿಷ್ಣು ಅವರ ಬೆಂಜ್‌ ಕಾರು ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ನಲ್ಲಿ ಅಪಘಾತಕ್ಕೀಡಾಗಿತ್ತು. ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ವಿಷ್ಣು, ಮಾರುತಿ ಓಮ್ನಿ ಕಾರಿಗೆ ಗುದ್ದಿಸಿ ಬಳಿಕ ಪುಟ್‌ಪಾತ್‌ ಮೇಲಿದ್ದ ಬಿಬಿಎಂಪಿ ನಾಮಫಲಕಕ್ಕೆ ಡಿಕ್ಕಿ ಹೊಡೆಸಿದ್ದರು. ಈ ಘಟನೆ ಬಳಿಕ ಆತನಿಗೆ ಸಾರ್ವಜನಿಕರು ಥಳಿಸಿದ್ದರು. ಅಂದು ಆತನ ಕಾರಿನಲ್ಲಿ 10 ಸಾವಿರ ಮೌಲ್ಯದ 110 ಗ್ರಾಂ ತೂಕದ ಗಾಂಜಾ ಸಿಕ್ಕಿತ್ತು. ಬಳಿಕ ಅಪಘಾತದಲ್ಲಿ ಗಾಯಗೊಂಡು ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ವಿಷ್ಣು ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು, ಕೊನೆಗೆ ಮೂರು ದಿನಗಳ ಬಳಿಕ ಸಿಸಿಬಿಗೆ ಶರಣಾಗಿದ್ದರು.