ಚಾಮರಾಜನಗರ (ಮಾ. 22):  ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಧಾನದಲ್ಲಿ ವಿಷಪ್ರಸಾದ ತಿಂದು 17 ಮಂದಿ ಮೃತಪಟ್ಟಪ್ರಕರಣಕ್ಕೆ ಸಂಬಂಧಪಟ್ಟಂತೆ 6163 ಪುಟಗಳ ಆರೋಪಪಟ್ಟಿ(ಚಾಜ್‌ರ್‍ಶೀಟ್‌)ಯನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಕೊಳ್ಳೇಗಾಲ ಡಿವೈಎಸ್‌ಪಿ ಪುಟ್ಟಮಾದಯ್ಯ ಅವರು ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ದೇವಾಲಯದ ಹಿಡಿತ ಸಂಪೂರ್ಣವಾಗಿ ತಮ್ಮ ಕೈಯಲ್ಲೇ ಇರಬೇಕು ಎಂಬ ದುರುದ್ದೇಶದಿಂದ ಇಮ್ಮಡಿ ಮಹಾದೇವಸ್ವಾಮಿ ಹಾಗೂ ಇತರ ಮೂವರು ಆರೋಪಿಗಳು ಪ್ರಸಾದದಲ್ಲಿ ವಿಷ ಬೆರೆಸಿರುವುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.

ದೇಗುಲ ಹಿಡಿತಕ್ಕಾಗಿ ಸಂಚು, ದೇವಾಲಯದ ಆದಾಯ, ಚಿನ್ನ, ಆಡಳಿತ ಎಲ್ಲವೂ ಮೊದಲ ಆರೋಪಿಯಾದ ಮಹಾದೇವಸ್ವಾಮಿ ನಿಯಂತ್ರಣಕ್ಕೆ ಬರಬೇಕು. ಇತರೆ ಆರೋಪಿಗಳಾದ ಅಂಬಿಕಾ, ಮಾದೇಶ ದಂಪತಿಗೆ ಹೆಚ್ಚಿನ ಅಧಿಕಾರ ಸಿಗಬೇಕು ಎಂಬ ಉದ್ದೇಶದಿಂದ ವ್ಯವಸ್ಥಿತವಾಗಿ ವಿಷ ಪ್ರಸಾದದ ಕೃತ್ಯವನ್ನು ಹೆಣೆದಿದ್ದರು. ಮತ್ತೊಬ್ಬ ಆರೋಪಿ ದೊಡ್ಡಯ್ಯ ವೈಯಕ್ತಿಕ ದ್ವೇಷದಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ದುರಂತದಲ್ಲಿ ಅಸ್ವಸ್ಥಗೊಂಡವರು, ದೇವಾಲಯ ಟ್ರಸ್ಟಿಗಳು, ವೈದ್ಯರು, ಗ್ರಾಮಸ್ಥರು ಸೇರಿದಂತೆ ಒಟ್ಟು 322 ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಆರೋಪಿಗಳ ವಿರುದ್ಧ ದೊರೆತಿರುವ ವಿವಿಧ ಸಾಕ್ಷ್ಯಗಳು, ವಿಧಿವಿಜ್ಞಾನ ಪ್ರಯೋಗಾಲಯ ವರದಿ, ಮರಣೋತ್ತರ ಪರೀಕ್ಷೆಯ ವರದಿ ಸೇರಿದಂತೆ ಹಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಮೊದಲ ಬಾರಿ ಆರೋಪಿಗಳು ಖುದ್ದು ಕೋರ್ಟ್‌ಗೆ ಹಾಜರು

ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ನಾಲ್ವರು ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್‌, ದೊಡ್ಡಯ್ಯ ಅವರನ್ನು ಗುರುವಾರ ಮೊದಲ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲಾಯಿತು.

ಗುರುವಾರ ಮೈಸೂರು ಕಾರಾಗೃಹದಿಂದ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್‌, ದೊಡ್ಡಯ್ಯಅವರನ್ನು ಮೊದಲ ಬಾರಿಗೆ ಜಿಲ್ಲಾ ನ್ಯಾಯಾಧೀಶ ಜಿ.ಬಸವರಾಜ ಖುದ್ದಾಗಿ ವಿಚಾರಣೆ ನಡೆಸಿದರು. ಭದ್ರತಾ ದೃಷ್ಟಿಯಿಂದ ಇದುವರಗೆ ಆರೋಪಿಗಳನ್ನು ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕರೆತಂದಿರಲಿಲ್ಲ. ಮೈಸೂರು ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ವಿಚಾರಣೆ ಮಾಡಲಾಗುತ್ತಿತ್ತು.

ಎರಡನೇ ಆರೋಪಿ ಅಂಬಿಕಾ, ಮೂರನೇ ಆರೋಪಿ ಮಾದೇಶ್‌ ಮತ್ತು ನಾಲ್ಕನೆಯ ಆರೋಪಿ ದೊಡ್ಡಯ್ಯ ಅವರ ಪರ ವಕೀಲರ ನೇಮಕವಾಗಿಲ್ಲ. ಈ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಆರೋಪಿಗಳನ್ನು ಪ್ರಶ್ನಿಸಿದಾಗ 26ರವರಗೆ ವಕೀಲರ ನೇಮಕಕ್ಕೆ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಾ.26ಕ್ಕೆ ಮುಂದೂಡಿದರು. ಈಗಾಗಲೇ ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿ ವಕೀಲನ್ನು ನೇಮಕ ಮಾಡಿಕೊಂಡು ಜಾಮೀನು ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿದೆ.