ಉತ್ತಮ ಬೆಳೆ ಪಡೆಯಲು 20 ನಿಮಿಷ ಮಂತ್ರ ಪಠಿಸಿದರೆ ಸಾಕು! ಕೃಷಿ ಸಚಿವರ ಹೊಸ ಯೋಜನೆ

Chant Vedic mantra to get a better crop Goa govt scheme for farmers
Highlights

  • ರೈತರ ಬೆಳೆ ವೈಫಲ್ಯ ಸಮಸ್ಯೆಗೆ ‘ಆಧ್ಯಾತ್ಮ’ ಕ್ರಮದ ಮೂಲಕ ಪರಿಹಾರ
  • ಕೆಮಿಕಲ್ ಇಂಜಿನಿಯರ್ ಆಗಿದ್ದ ದೇವಮಾನವನಿಂದ ನೂತನ ಕೃಷಿ ಕ್ರಮ

ಪಣಜಿ: ತಮ್ಮ ಹೊಲದಲ್ಲಿ ಉತ್ತಮ ಬೆಳೆ ಪಡೆಯಬೇಕಾದರೆ ಇನ್ಮುಂದೆ ರೈತರು ಪ್ರತಿದಿನ ಒಂದೆಡೆ ಕೂತು 20 ನಿಮಿಷಗಳ ಕಾಲ ‘ಓಂ ರೂಂ ಜುಂ ಸಾಹ್’ ಪಠಿಸಬೇಕು! ರೈತರ ಬೆಳೆ ವೈಫಲ್ಯ ಸಮಸ್ಯೆಗೆ ಇಂತಹ ಒಂದು ಪರಿಹಾರ ಹುಡುಕುವ ಪ್ರಯತ್ನಕ್ಕೆ ಗೋವಾ ಸರ್ಕಾರ ಕೈಹಾಕಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ಸ್‌ ವರದಿ ಮಾಡಿದೆ.

ಶಿವಯೋಗ ಕಾಸ್ಮಿಕ್ ಫಾರ್ಮಿಂಗ್  [ಶಿವಯೋಗ ಬ್ರಹ್ಮಾಂಡೀಯ ಕೃಷಿ] ಎಂಬ ಯೋಜನೆಗೆ ಚಾಲನೆ ನೀಡಿದ ಕೃಷಿ ಸಚಿವ ವಿಜಯ್ ಸರ್ದೇಸಾಯಿ, ಈ ಕೃಷಿಕ್ರಮವನ್ನು ಅನುಸರಿಸಲು ಹಣದ ಅಗತ್ಯವಿಲ್ಲ. ಉತ್ತಮ ಕೃಷಿಗಾಗಿ ಯಾವುದೇ ಹೊಸ ವಿಧಾನವನ್ನು ಅಳವಡಿಸಲು ತಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಈ ‘ನೂತನ’ ಕೃಷಿ ಕ್ರಮವನ್ನು ಪರಿಚಯಿಸಿದವರು  ಗುರ್ಗಾಂವ್ ನ ಸ್ವಾಮಿಜಿ ಡಾ.  ಶಿವಾನಂದ ಅವಧೂತ ಎಂಬವರು. ಕೆಮಿಕಲ್ ಇಂಜಿನಿಯರ್ ಆಗಿದ್ದ ಡಾ. ಶಿವಾನಂದ ಈಗ ಶಿವಯೋಗ ಫೌಂಡೇಶನ್ ನಡೆಸುತ್ತಿದ್ದಾರೆ. ಸಚಿವ ವಿಜಯ್ ಸರ್ದೇಶಾಯಿ ಪತ್ನಿ  ಉಷಾ ಸ್ವಾಮೀಜಿಯ ಭಕ್ತೆಯಾಗಿದ್ದು, ಅವರ ವಿಚಾರಗಳನ್ನು ಅನುಸರಿಸುತ್ತಾರೆ. 

ನನಗೂ ಮೊದಮೊದಲು ಇದರ ಬಗ್ಗೆ ಅನುಮಾನಗಳಿತ್ತು.  ಆದರೆ ಇದು ಯಾವುದೇ ಪವಾಡವಲ್ಲ, ಬದಲಾಗಿ ಇದರ ಬಗ್ಗೆ ಸಾಕಷ್ಟು ಅಧ್ಯಯನವಿದೆ, ಎಂದು ಸಚಿವರು ಹೇಳಿದ್ದಾರೆ.

ಸ್ವಾಮೀಜಿ ಹೇಳುವ ಕ್ರಮದಲ್ಲಿ ರೈತರು ಬೇಸಾಯ ಮಾಡುವ  ವಿಡಿಯೋ  ಕಳೆದ ಒಂದು ವಾರದಿಂದ  ಗೋವಾದಲ್ಲಿ ವೈರಲ್ ಆಗಿದೆಯೆನ್ನಲಾಗಿದೆ. ಈ ಕ್ರಮವನ್ನು ಅನುಸರಿಸುವ ಮೂಲಕ ಬ್ರಹ್ಮಾಂಡೀಯ ಶಕ್ತಿಗಳನ್ನು ಆಧ್ಯಾತ್ಮದ ಮೂಲಕ ಮಣ್ಣಿಗೆ ವರ್ಗಾಯಿಸುಬಹುದು ಎಂದು ಹೇಳಲಾಗಿದೆ.
 

loader