ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಸಮರ್ಥವಾಗಿರುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆಯೇ ಹೊರತು ಯಾವುದೇ ರೀತಿಯಲ್ಲೂ ಮ್ಯಾಚ್‌ ಫಿಕ್ಸಿಂಗ್‌ ಮಾಡಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಸಮರ್ಥವಾಗಿರುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆಯೇ ಹೊರತು ಯಾವುದೇ ರೀತಿಯಲ್ಲೂ ಮ್ಯಾಚ್‌ ಫಿಕ್ಸಿಂಗ್‌ ಮಾಡಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ 35ರಿಂದ 40 ಅಭ್ಯರ್ಥಿಗಳ ಎರಡನೇ ಕಂತಿನ ಅಭ್ಯರ್ಥಿಗಳ ಪಟ್ಟಿಯನ್ನು ಒಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಈಗ ಪ್ರಕಟಗೊಂಡಿರುವ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣಾ ಆಯೋಗವು ಚುನಾವಣಾ ದಿನಾಂಕ ಪ್ರಕಟಿಸುವ ಮುನ್ನವೇ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಕೆಲವು ಪರಿವರ್ತನೆಯಾಗಲಿದೆ. ಪರಿವರ್ತನೆಯಾಗುವ ಕ್ಷೇತ್ರಗಳ ಅಭ್ಯರ್ಥಿ ಸೇರಿದಂತೆ ಅಲ್ಲಿನ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಲಾಗುವುದು. ಎಲ್ಲಾ ಪಕ್ಷಗಳಿಗಿಂತ ಮೊದಲೇ ಪಟ್ಟಿಪ್ರಕಟಿಸುವ ಮೂಲಕ ಪಕ್ಷದ ಬಗ್ಗೆ ಇರುವ ಅಭಿಪ್ರಾಯಗಳಿಗೆ ತೆರೆ ಎಳೆಯಲಾಗಿದೆ ಎಂದರು.

ಟಿಕೆಟ್‌ ಹಂಚಿಕೆಯನ್ನು ನ್ಯಾಯ ಬದ್ಧವಾಗಿ ಮಾಡಿಲ್ಲ ಎಂದು ಕೆಲವರು ಅಪಪ್ರಚಾರ ನಡೆಸಿದ್ದಾರೆ. ಕ್ಷೇತ್ರದ ಜನರ ವಿಶ್ವಾಸ ಗಳಿಸಿರುವ ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಮಾಡಲಾಗಿದೆ. ಸಮರ್ಥವಾಗಿ ಚುನಾವಣೆ ಎದುರಿಸುವ ಲೆಕ್ಕಚಾರ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ಸ್ನೇಹಿತ ಅಥವಾ ಇತರೆ ಯಾವುದೇ ವ್ಯಾಮೋಹಕ್ಕೊಳಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಯಾವುದೇ ಅಭ್ಯರ್ಥಿಗಳ ಜತೆ ಮ್ಯಾಚ್‌ ಫಿಕ್ಸಿಂಗ್‌ ಸಹ ಮಾಡಿಲ್ಲ ಎಂದು ಹೇಳಿದರು.

ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸಬೇಕು, ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡುವ ಕುರಿತು, ಮತದಾರರ ಜತೆ ನೇರ ಸಂಪರ್ಕ ಹೊಂದುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಸಲಹೆ-ಸೂಚನೆಗಳನ್ನು ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಎಲ್‌ಸಿಡಿ ವಾಹನ ಸಿದ್ಧವಾಗಿದ್ದು, ವಾಹನದ ಮೂಲಕ ಪಕ್ಷದ ಕಾರ್ಯಕ್ರಮಗಳು, ಜೆಡಿಎಸ್‌ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ ಯೋಜನೆಗಳು ಮತ್ತು ಅಧಿಕಾರಕ್ಕೆ ಬಂದಲ್ಲಿ ಈಡೇರಿಸುವ ಭರವಸೆಗಳ ಕುರಿತು ಜನರಿಗೆ ಮನದಟ್ಟು ಮಾಡಲಾಗುವುದು. ಅಲ್ಲದೇ, ಸ್ಥಳೀಯ ಮತ್ತು ರಾಜ್ಯ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಜನತೆಗೆ ತಲುಪಿಸಲಾಗುವುದು ಎಂದು ಹೇಳಿದರು.