Asianet Suvarna News Asianet Suvarna News

’ಕನ್ನಡ ಮಕ್ಕಳಿಗೆ ಶುರುವಿನಿಂದಲೇ ಇಂಗ್ಲೀಷ್ ಕಲಿಸಿದರೆ ಕುರಿಗಳು ಸೃಷ್ಟಿಯಾಗುತ್ತವೆ’

ಧಾರವಾಡದಲ್ಲಿ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಜ.04 ರಿಂದ 6 ರವರೆಗೆ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ವೇಳೆ ಕಂಬಾರರು ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ್ ಮಾಧ್ಯಮದ ಬಗ್ಗೆ ಚರ್ಚೆ ನಡೆಸಿದ್ದಾರೆ.  ಕನ್ನಡ ಪ್ರಭಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 

Chandrashekhar Kambar speaks about Kannada medium schools in Dharwad
Author
Bengaluru, First Published Jan 5, 2019, 12:53 PM IST

ಧಾರವಾಡ (ಜ.05): 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ಚಂದ್ರಶೇಖರ ಕಂಬಾರರು ಕನ್ನಡ ಮಾಧ್ಯಮ, ಇಂಗ್ಲೀಷ್ ಮಾಧ್ಯಮಗಳ ಬಗ್ಗೆ ’ಕನ್ನಡ ಪ್ರಭ’ದ ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ ನೋಡಿ. 

ತುಂಬಾ ತಡವಾಗಿ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಪದವಿ ಸಿಕ್ಕಿತಲ್ಲವೇ ನಿಮಗೆ? ಅದರ ಬಗ್ಗೆ ಬೇಸರವಿದೆಯೇ?

ಖಂಡಿತ ಯಾವ ಬೇಸರವೂ ಇಲ್ಲ. ನನ್ನ ಗುರುಗಳಾದ ಸಂ.ಶಿ.ಭೂಸನೂರಮಠ ಅವರಿಗೆ ಈ ಗೌರವ ಸಿಕ್ಕೇ ಇರಲಿಲ್ಲ. ಅವರಿಗೇ ಸಿಕ್ಕಿಲ್ಲವೆಂದ ಮೇಲೆ ನನಗೇಕೆ ಬೇಕು ಎಂದು ಸುಮ್ಮನಿದ್ದೆ. ನಾನಿದನ್ನು ಇಷ್ಟಪಟ್ಟವನೂ ಅಲ್ಲ, ಬಯಸಿದವನೂ ಅಲ್ಲ. ಈಗ ಹುಡುಕಿಕೊಂಡು ಬಂದಿದೆ. ಖುಷಿಯಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತೇನೆ.

ನೀವು ಉತ್ತರ ಕರ್ನಾಟಕದವರು. ಈಗ ಉತ್ತರ ಕರ್ನಾಟಕದ ಸಾಹಿತ್ಯಕ ಹೃದಯದಂತಿರುವ ಧಾರವಾಡದ ಸಮ್ಮೇಳನದ ಅಧ್ಯಕ್ಷಗಿರಿಯೇ ನಿಮಗೆ ಒಲಿದಿದೆ.

ಹೌದು. ಅದು ಇನ್ನೊಂದು ಖುಷಿ. ನನಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಧಾರವಾಡಕ್ಕೇ ಬಂದು ಪ್ರದಾನ ಮಾಡಿದ್ದರು. ನಾನು ಮೊದಲ ಕವನ ವಾಚನ ಮಾಡಿದ್ದು ಧಾರವಾಡದಲ್ಲಿ. ಎಂಎ ಮಾಡಿದ್ದು, ಪಿಎಚ್‌ಡಿ ಮಾಡಿದ್ದು ಕೂಡ ಧಾರವಾಡದಲ್ಲೇ. ಧಾರವಾಡದಲ್ಲಿ ಕಾಲೇಜು ಅಧ್ಯಾಪಕನಾಗಿ, ಬೆಳಗಾವಿಗೆ ಹೋಗಿ, ಉಡುಪಿಗೆ ಹೋಗಿ, ಅಲ್ಲಿಂದ ಶಿಕಾಗೋಗೆ ಹೋಗಿ, ಮತ್ತೆ ಧಾರವಾಡಕ್ಕೆ ಬಂದು ಒಂದು ವರ್ಷ ಅಧ್ಯಾಪಕನಾಗಿದ್ದೆ. ಹೀಗೆ ಧಾರವಾಡದಲ್ಲಿ ನನ್ನ ಹಲವಾರು ನೆನಪುಗಳೂ ಪ್ರಥಮಗಳೂ ಇವೆ. ನನಗೆ ಆತ್ಮೀಯವಾದ ಸ್ಥಳ ಧಾರವಾಡ.

ಅಲ್ಲೇ ಕುರ್ತುಕೋಟಿ, ಗಿರೀಶ್ ಕಾರ್ನಾಡ್, ರಾಜೀವ್ ತಾರಾನಾಥ್, ಜಿ.ಬಿ.ಜೋಶಿಯಂತಹವರೆಲ್ಲ ನನಗೆ ಪರಿಚಯವಾಗಿದ್ದು. ಅಲ್ಲಿ ನನ್ನನ್ನು, ಚಂಪಾ, ಕಲಬುರ್ಗಿ, ಗಿರಡ್ಡಿ ಮತ್ತು ಪಟ್ಟಣ ಶೆಟ್ಟಿಯವರನ್ನು ಪಂಚ ಪಾಂಡವರು ಎಂದು ಕರೆಯುತ್ತಿದ್ದರು. ನಾವೆಲ್ಲ ಒಟ್ಟಾಗಿ ಕನಸು ಕಂಡ ಸ್ಥಳವದು. ಹಿಂದೆ ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಕುವೆಂಪು ಅಧ್ಯಕ್ಷರಾಗಿದ್ದರು. ಆಗ ಬೆಳಗಾವಿಯಲ್ಲಿ ಲೆಕ್ಚರರ್ ಆಗಿದ್ದ ನಾನು ಸಮ್ಮೇಳನಕ್ಕೆ ಬಂದಿದ್ದೆ. ಆ ನೆನಪು ಇನ್ನೂ ಇದೆ. ಆದರೆ ಈಗ ಅಲ್ಲಿ ನನ್ನ ಗುರುಗಳಿಲ್ಲ. ಸ್ನೇಹಿತರಿಬ್ಬರು - ಕಲಬುರ್ಗಿ, ಗಿರಡ್ಡಿ - ಕೂಡ ಹೋದರು. ಅವರಿಲ್ಲದ ಧಾರವಾಡಕ್ಕೆ ಹೋಗುತ್ತಿದ್ದೇನೆ.

ಕನ್ನಡ, ಇಂಗ್ಲಿಷ್ ಎರಡೂ ಭಾಷೆ ಕಲಿಸಬಹುದಲ್ಲ? ಇಂಗ್ಲಿಷ್ ಇಂದಿನ ಅಗತ್ಯ ತಾನೇ?

ಗಾಂಧೀಜಿಯವರು ಸ್ವಾತಂತ್ರ್ಯಪೂರ್ವದಲ್ಲೇ ಇದರ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು. ನಮ್ಮ ಹುಡುಗರೆಲ್ಲ ಬೆಂಡಾಗಿಬಿಟ್ಟಿದ್ದಾರೆ... ಬರೀ ಬಾಯಿಪಾಠ ಮಾಡ್ತಾರೆ.. ಇವರಿಗೆ ಯೋಚನೆ ಮಾಡುವುದಕ್ಕೇ ಬರುವುದಿಲ್ಲ... ಹೀಗಾದರೆ ಹೇಗೆ? ಸ್ವಾತಂತ್ರ್ಯ ಬಂದ ತಕ್ಷಣ ಈ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ತೆಗೆದುಹಾಕ್ತೀನಿ ಎಂದು ಗಾಂಧೀಜಿ ಹೇಳುತ್ತಿದ್ದರು. ಅದು ಹೋಗಲಿ, ಮೊನ್ನೆಯಷ್ಟೇ ಒಂದು ಸಮಾರಂಭದಲ್ಲಿ ಖ್ಯಾತ ವಿಜ್ಞಾನಿ ಸಿಎನ್ ಆರ್ ರಾವ್ ತಾನು ಕನ್ನಡದಲ್ಲೇ ಕಲಿತಿದ್ದನ್ನೂ, ಈಗಿನ ಮಕ್ಕಳಿಗೂ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಅಗತ್ಯವನ್ನೂ ಹೇಳುತ್ತಿದ್ದರು.

ಭಾಷೆಯ ಮೂಲಭೂತ ಜ್ಞಾನವೇ ಇಲ್ಲದ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಹೀಗೆ ಎರಡೆರಡು ಭಾಷೆಗಳನ್ನು ತುರುಕಲು ಹೋದರೆ ಅವರ ಕತೆ ಏನಾದೀತು? ಮೊದಲು ಒಂದು ಭಾಷೆಯನ್ನು ಚೆನ್ನಾಗಿ ಕಲಿಸಿ. ನಂತರ ಬೇರೆ ಭಾಷೆಯನ್ನು ಮಕ್ಕಳು ಸುಲಭವಾಗಿ ಕಲಿಯುತ್ತಾರೆ. ನಾನು 7 ನೇ ಕ್ಲಾಸ್ ವರೆಗೆ ಒಂದೇ ಒಂದು ಇಂಗ್ಲಿಷ್ ಪದ ಕಲಿತವನಲ್ಲ. ನಂತರ ಒಂದೇ ವರ್ಷದಲ್ಲಿ ಕೃಷ್ಣಮೂರ್ತಿ ಪುರಾಣಿಕರು ನನಗೆ ಅದ್ಭುತವಾಗಿ ಇಂಗ್ಲಿಷ್ ಕಲಿಸಿದರು. ನನ್ನ ಇಂಗ್ಲಿಷ್ ಚೆನ್ನಾಗಿಲ್ಲವೇ? ಜಗತ್ತಿನ ಬೇರೆ ಬೇರೆ ದೇಶದ 14 ವಿಶ್ವವಿದ್ಯಾಲಯಗಳಿಗೆ ಹೋಗಿ ಭಾಷಣ ಮಾಡಿಬಂದಿದ್ದೇನೆ. ಶಿಕಾಗೋದಲ್ಲಿ 2 ವರ್ಷ ಇಂಗ್ಲಿಷ್‌ನಲ್ಲೇ ಪಾಠ ಮಾಡಿದ್ದೇನೆ.

ಅಂದರೆ ನೀವು ಹೇಳುವುದು 7 ನೇ ತರಗತಿವರೆಗೆ ಇಂಗ್ಲಿಷ್ ಬೇಡವೇ ಬೇಡ ಎಂದೇ? ಶ್ರೀಮಂತರ ಮಕ್ಕಳು ಇಂಗ್ಲಿಷ್ ಕಲಿತು, ಬಡ ಮಕ್ಕಳು ಕನ್ನಡ ಕಲಿತು, ನಂತರ ಉನ್ನತ ಶಿಕ್ಷಣಕ್ಕೆ ಇಬ್ಬರೂ ಬಂದಾಗ ಒಬ್ಬರು ಹಿಂದುಳಿಯುತ್ತಾರೆ, ಇನ್ನೊಬ್ಬರು ಮುಂದೆ ಹೋಗುತ್ತಾರೆ. ಅದಕ್ಕೇನು ಪರಿಹಾರ?

ಶ್ರೀಮಂತರ ಮಕ್ಕಳು ಇಂಗ್ಲಿಷನ್ನೇ ಕಲಿಯಲಿ ಬಿಡಿ. ಆದರೆ, ಬಡವರ ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಚೆನ್ನಾಗಿ ಕನ್ನಡ ಕಲಿಸಿ. ನಂತರ ನೋಡಿ, ಹೇಗೆ ಒಂದೇ ವರ್ಷದಲ್ಲಿ ಶ್ರೀಮಂತರ ಮಕ್ಕಳನ್ನೂ ಮೀರಿಸುವಂತೆ ಬಡ ಮಕ್ಕಳು ಇಂಗ್ಲಿಷ್ ಕಲಿತು ತೋರಿಸುತ್ತಾರೆ. ನಾವ್ಯಾರೂ ಶಿಕ್ಷಣ ತಜ್ಞರಲ್ಲ. ಆದರೆ, ದೊಡ್ಡ ದೊಡ್ಡ ಶಿಕ್ಷಣ ತಜ್ಞರು ಮಕ್ಕಳ ಪ್ರಾಥಮಿಕ ಕಲಿಕೆ ಮಾತೃಭಾಷೆಯಲ್ಲೇ ಆಗಬೇಕು ಎಂದು ಹೇಳುತ್ತಿದ್ದಾರಲ್ಲ. ಅದನ್ನಾದರೂ ನಾವು ಕೇಳಬೇಕಲ್ಲವೇ? ಅದಿಲ್ಲದೆ ನಾವು ಕನ್ನಡದ ಮಕ್ಕಳಿಗೆ ಶುರುವಿನಿಂದಲೇ ಇಂಗ್ಲಿಷ್ ಕಲಿಸಲು ಹೋದರೆ ಕುರಿಗಳನ್ನು ಸೃಷ್ಟಿಸುತ್ತೇವಷ್ಟೆ. ಎರಡನ್ನೂ ಕಲಿಸಲು ಹೋದರೆ ಎರಡೂ ಭಾಷೆ ಅವರಿಗೆ ಬರುವುದಿಲ್ಲ. ಮಕ್ಕಳು ಆಗ ಎಡಬಿಡಂಗಿಗಳಾಗುತ್ತವೆ.

ನಾವು ಮೊದಲು ಕಲಿಯುವ ಭಾಷೆ ನಮ್ಮ ಇಡೀ ಜೀವನಕ್ಕೆ ಅಡಿಪಾಯವಾಗುತ್ತದೆ. ಹಾಗಾಗಿ ಅದರ ವಿಷಯದಲ್ಲಿ ಹದ ತಪ್ಪಬಾರದು. ಇಂಗ್ಲಿಷ್ ನಿಮ್ಮ ಮಾತೃಭಾಷೆಯಾಗಿದ್ದರೆ ಮೊದಲು ಅದನ್ನೇ ಕಲಿಯಿರಿ. ಸುದೈವವಶಾತ್ ಇಂದು ಕನ್ನಡಕ್ಕೆ ಬಹಳ ಶಕ್ತಿ ಬಂದಿದೆ. ಹೀಗಾಗಿ ಕನ್ನಡ ಕಲಿತು ಆಮೇಲೆ ಇಂಗ್ಲಿಷ್ ಕಲಿತರೆ ಕನ್ನಡಿಗರು ಅದ್ಭುತಗಳನ್ನೇ ಸೃಷ್ಟಿಮಾಡಬಲ್ಲರು.

ಕನ್ನಡ ಮಾಧ್ಯಮ ಇರುವುದು ಸರ್ಕಾರಿ ಶಾಲೆಗಳಲ್ಲಿ. ಕಳೆದ 10 ವರ್ಷಗಳಲ್ಲಿ 12 ಸಾವಿರ ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚಿದೆ. ಇಂಗ್ಲಿಷ್ ಮಾಧ್ಯಮ ವಿರೋಧಿಸುವವರು ಏಕೆ ಯಾರೂ ಕನ್ನಡ ಶಾಲೆ ಮುಚ್ಚುವುದನ್ನು ವಿರೋಧಿಸಲಿಲ್ಲ?

ನಾವು ವಿರೋಧಿಸಿದ್ದೇವೆ. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ದೇಶಾದ್ಯಂತ ಏಕರೂಪದ ನೀತಿಯನ್ನಾಗಿ ಜಾರಿಗೊಳಿಸಬೇಕು ಎಂದು ನನ್ನ ನೇತೃತ್ವದಲ್ಲೇ ಸಮಾನಮನಸ್ಕರೆಲ್ಲ ಸೇರಿ 5 ಲಕ್ಷ ಸಹಿ ಸಂಗ್ರಹಿಸಿ ಪ್ರಧಾನಿಗೆ ಸಲ್ಲಿಸಿದ್ದೇವೆ. ಹಿಂದಿ, ಪಂಜಾಬಿಗಳು, ಬಂಗಾಳಿಗಳೆಲ್ಲ ಅದಕ್ಕೆ ಸಹಿ ಹಾಕಿದ್ದಾರೆ. ನಾನೇ ಎಸ್ ಎಲ್ ಭೈರಪ್ಪನವರನ್ನು ಪ್ರಧಾನಿ ಬಳಿ ಕರೆದುಕೊಂಡು ಹೋಗಿ ಈ ಬಗ್ಗೆ ಸಲಹೆ ಕೊಡಿಸಿದ್ದೇನೆ.

ಪ್ರಧಾನಿ ಕೂಡ ಅದಕ್ಕೆ ಸ್ಪಂದಿಸಿ, ವಿರೋಧ ಪಕ್ಷದವರು ಇದಕ್ಕೆ ತಕರಾರು ಮಾಡುವುದರಿಂದ ಅವರೇ ಮಸೂದೆ ಮಂಡಿಸಿದರೆ ನಾವು ಅಂಗೀಕರಿಸುತ್ತೇವೆ ಎಂದು ಹೇಳಿದ್ದರು.

- ಸಂದರ್ಶನ: ಪ್ರಿಯಾ ಕೇರ್ವಾಶೆ/ ಮಹಾಬಲ ಸೀತಾಳಬಾವಿ 

Follow Us:
Download App:
  • android
  • ios