ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸೋಲಿಸಲು ಹೊಸ ಮೈತ್ರಿಕೂಟ ರಚಿಸುವ ಹಲವು ಯತ್ನಗಳು ವಿಫಲಗೊಂಡ ಬೆನ್ನಲ್ಲೇ, ಆ ಹೊಣೆಯನ್ನು ಇದೀಗ ಆಂಧ್ರಪ್ರದೇಶ ಸಿಎಂ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ವಹಿಸಿಕೊಂಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಮೋದಿ ಸೋಲಿಸುವ ಉಸ್ತುವಾರಿಯನ್ನು ತಮ್ಮ ಹೆಗಲಿಗೆ ಹಾಕಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಕಳೆದ ವಾರವಷ್ಟೇ ರಾಜಧಾನಿಗೆ ಭೇಟಿ ನೀಡಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಹಾಗೂ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರನ್ನು ಭೇಟಿ ಮಾಡಿದ್ದ ನಾಯ್ಡು, ಗುರುವಾರ ಮತ್ತೊಮ್ಮೆ ದೆಹಲಿಗೆ ಆಗಮಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಎನ್‌ಸಿಪಿ ನಾಯಕ ಶರದ್‌ ಪವಾರ್‌, ಫಾರೂಕ್‌ ಅಬ್ದುಲ್ಲಾ ಜತೆಗೆ ಸಮಾಲೋಚನೆ ನಡೆಸಿದರು.

2004ರಲ್ಲಿ ಯುಪಿಎ ರೂಪಿಸಿದ್ದ ಮಾದರಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಅಂತಿಮಗೊಳಿಸಿ, ಬಿಜೆಪಿ ಜತೆ ಹೋರಾಟಕ್ಕೆ ಇಳಿಯುವ ಉದ್ದೇಶವನ್ನು ಈ ನಾಯಕರು ಹೊಂದಿದ್ದಾರೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇತರೆ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹೊಣೆಯನ್ನು ನಾಯ್ಡು ಹೊತ್ತುಕೊಂಡಿದ್ದಾರೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಅಂತಿಮಗೊಳಿಸಲು ದೆಹಲಿಯಲ್ಲಿ ಶೀಘ್ರದಲ್ಲೇ ಸಮಾನ ಮನಸ್ಕ ಪಕ್ಷಗಳ ಸಭೆ ಕರೆಯಲು ಉದ್ದೇಶಿಸಲಾಗಿದೆ.

ಒಗ್ಗೂಡಿ ಕೆಲಸ ಮಾಡುತ್ತೇವೆ:  ತಮ್ಮನ್ನು ನಾಯ್ಡು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್‌ ಗಾಂಧಿ, ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗೂಡಿ ಕೆಲಸ ಮಾಡಲಿವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ದಾಳಿ ನಡೆಯದಂತೆ ನೋಡಿಕೊಳ್ಳಲಿವೆ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ನಾಯ್ಡು, ಎಲ್ಲ ರಾಜಕೀಯ ಪಕ್ಷಗಳ ಜತೆ ಚರ್ಚೆ ನಡೆಸುತ್ತಿದ್ದೇನೆ. ಒಂದೇ ವೇದಿಕೆಯಲ್ಲಿ ಸೇರಿ, ತಂತ್ರಗಾರಿಕೆ ರೂಪಿಸುತ್ತೇವೆ ಎಂದರು.

ಇದಕ್ಕೂ ಮುನ್ನ ಶರದ್‌ ಪವಾರ್‌ ಹಾಗೂ ಫಾರೂಕ್‌ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ ನಾಯ್ಡು, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯನ್ನು ಎದುರಿಸಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ನಾಯ್ಡು ಅವರು ಬಿಜೆಪಿಯೇತರ ಪಕ್ಷಗಳ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಪವಾರ್‌ ತಿಳಿಸಿದರು.

ಕಳೆದ ವರ್ಷದವರೆಗೂ ಬಿಜೆಪಿ ಮಿತ್ರಕೂಟದಲ್ಲೇ ಇದ್ದ ಚಂದ್ರಬಾಬು ನಾಯ್ಡು ಅವರು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಕಳೆದ ವರ್ಷ ಆಡಳಿತಾರೂಢ ಕೂಟ ತೊರೆದಿದ್ದರು. ಇಲ್ಲಿವರೆಗೂ ಕಾಂಗ್ರೆಸ್‌ ವಿರೋಧಿ ರಾಜಕಾರಣ ಮಾಡಿಕೊಂಡು ಬಂದಿದ್ದ ಅವರು, ಈಗ ಕಾಂಗ್ರೆಸ್ಸಿನ ಜತೆಗೇ ಕೈಜೋಡಿಸಿರುವುದು ಗಮನಾರ್ಹ.

ಟಿಡಿಪಿ ಜೊತೆಗಿನ ನಮ್ಮ ಹಿಂದಿನ ಸಂಬಂಧವನ್ನು ನಾವು ಮತ್ತೆ ಚರ್ಚಿಸಲು ಹೋಗುವುದಿಲ್ಲ. ವರ್ತಮಾನ ಮತ್ತು ಭವಿಷ್ಯವನ್ನು ಮಾತ್ರ ನಾವು ಗಮನದಲ್ಲಿಟ್ಟುಕೊಂಡು ಒಂದಾಗಿ ಮುಂದೇ ಸಾಗಲು ನಿರ್ಧರಿಸಿದ್ದೇವೆ. ಭಾರತವನ್ನು ಉಳಿಸಿಕೊಳ್ಳಲು, ನಮ್ಮ ಸಂಸ್ಥೆಗಳನ್ನು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಮುಂದಿನ ಲೋಕಸಭಾ ಚುನಾವಣೆ ವೇಳೆ ಎಲ್ಲಾ ವಿಪಕ್ಷಗಳು ಒಂದಾಗಿ ಹೋರಾಡಲಿವೆ.

ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ


ಸದ್ಯಕ್ಕೆ ದೇಶವನ್ನು ಉಳಿಸುವುದು ನಮ್ಮ ಮುಖ್ಯ ಗುರಿ. ಈ ನಿಟ್ಟಿನಲ್ಲಿ ಭವಿಷ್ಯದ ಹೋರಾಟದ ರೂಪರೇಷೆ ರಚನೆಗೆ ಶೀಘ್ರವೇ ಸಭೆ ಆಯೋಜಿಸಲಿದ್ದೇವೆ. ಹೊಸ ಮೈತ್ರಿಕೂಟದ ನಾಯಕ ಯಾರು ಎಂಬುದು ಈಗಿನ ಮುಖ್ಯ ವಿಷಯವಲ್ಲ. ಕಾಂಗ್ರೆಸ್‌ ಪ್ರಮುಖ ವಿಪಕ್ಷ ಎಂಬುದು ವಾಸ್ತವ. ದೇಶ ಉಳಿಸಲು ಕಾಂಗ್ರೆಸ್‌ ಜೊತೆ ಎಲ್ಲಾ ಪಕ್ಷಗಳು ಕೈಜೋಡಿಸುವುದು ಇಂದಿನ ಅಗತ್ಯ.

ಚಂದ್ರಬಾಬು ನಾಯ್ಡು, ಟಿಡಿಪಿ ಅಧ್ಯಕ್ಷ