ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಸಮೂಹ ದೇವಸ್ಥಾನಗಳಲ್ಲಿ ಇದೇ ಡಿಸೆಂಬರ್ 14ರಿಂದ ಪೂಜಾ ಪ್ರಕ್ರಿಯೆಗಳನ್ನು ಬಂದ್ ಮಾಡಲಾಗುತ್ತದೆ. ಆರನೇ ವೇತನ ಆಯೋಗದ ನಿಯಮಾನುಸಾರ ಶೇ.30 ವೇತನ ಹೆಚ್ಚಿಸಬೇಕು ಎಂದು ಚಾಮುಂಡೇಶ್ವರಿ ನೌಕರರ ಸಂಘದ ಸದಸ್ಯರು ಪೂಜೆಗೆ ಗೈರಾಗಲಿದ್ದಾರೆ.
ಮೈಸೂರು : ಆರನೇ ವೇತನ ಆಯೋಗದ ನಿಯಮಾನುಸಾರ ಶೇ.30 ವೇತನ ಹೆಚ್ಚಿಸಬೇಕು, ಇಲ್ಲದಿದ್ದರೆ ಡಿ.14ರಿಂದ ಪೂಜಾ ಕಾರ್ಯಕ್ಕೆ ಗೈರಾಗುವ ಮೂಲಕ ಹೋರಾಟ ನಡೆಸಲು ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಸಮೂಹ ದೇವಸ್ಥಾನಗಳ ನೌಕರರ ಸಂಘ ನಿರ್ಧರಿಸಿದೆ.
ಇದರಿಂದ ಚಾಮುಂಡೇಶ್ವರಿ ದೇವಸ್ಥಾನ ಸೇರಿ ಸಮೂಹ ದೇವಸ್ಥಾನಗಳಲ್ಲಿ ಡಿ.14ರಿಂದ ಪೂಜೆ ಸೇರಿ ಧಾರ್ಮಿಕ ಕೈಂಕರ್ಯಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಚಾಮುಂಡೇಶ್ವರಿ ಸಮೂಹ ದೇವಸ್ಥಾನಗಳಲ್ಲಿ 200ಕ್ಕೂ ಹೆಚ್ಚಿನ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. 6ನೇ ವೇತನ ಆಯೋಗದ ನಿಯಮಗಳಂತೆ ದೇವಸ್ಥಾನ ನೌಕರರಿಗೆ ಶೇ.30ರಷ್ಟುವೇತನ ಹೆಚ್ಚಿಸಬೇಕು. ಹೆಚ್ಚುವರಿ ತುಟ್ಟಿಭತ್ಯೆ ಆದಾಗ ಮಂಜೂರು ಮಾಡಿಕೊಳ್ಳಲು ಕಾಯಂ ಆದೇಶ ನೀಡಬೇಕು. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ಬೋನಸ್ ನೀಡಬೇಕು. ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ 70ಕ್ಕೂ ಹೆಚ್ಚಿನ ನೌಕರರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಚಾಮುಂಡೇಶ್ವರಿ ದೇವಸ್ಥಾನದ ಇಒ ಪ್ರಸಾದ್ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ.
ನೌಕರರ ಸಂಘದ ಮನವಿಯು ರಾಜ್ಯ ಮಟ್ಟದಲ್ಲಿ ನಿರ್ಧಾರ ಆಗಬೇಕಿರುವುದರಿಂದ ಪ್ರಸಾದ್ ಅವರು ಮನವಿ ಪತ್ರವನ್ನು ಮುಜರಾಯಿ ಇಲಾಖೆ ಆಯುಕ್ತರಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಸರ್ಕಾರವು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ದೇವಸ್ಥಾನದಲ್ಲಿ ಪೂಜೆ, ಧಾರ್ಮಿಕ ಕೈಂಕರ್ಯಗಳು ನಡೆಯುವುದಿಲ್ಲ. ಇದರಿಂದ ಆಗುವ ಅನಾನುಕೂಲಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಸಂಘದವರು ಎಚ್ಚರಿಸಿದ್ದಾರೆ.
