* ಬಿಜೆಪಿಗೆ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಗುಡ್ ಬೈ* ಪ್ಯಾಕ್ಸ್ ಮೂಲಕ ಯಡಿಯೂರಪ್ಪಗೆ ರಾಜೀನಾಮೆ ರವಾನಿಸಿದ ವಿಜಯಶಂಕರ್* ಬಿಜೆಪಿ ನಾಯಕರ ವರ್ತನೆಯಿಂದ ಬೇಸತ್ತು ರಾಜೀನಾಮೆ.* ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದ ವಿಜಯಶಂಕರ್.* ಪಿರಿಯಾಪಟ್ಟಣದ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯಶಂಕರ್.* ಟಿಕೆಟ್ ನಿರಾಕರಣೆ ಹಿನ್ನಲೆ,ಪಕ್ಷದಲ್ಲಿ ನಿರ್ಲಕ್ಷ್ಯ ಹಿನ್ನಲೆ ಬೇಸತ್ತು ರಾಜೀನಾಮೆ.

ಮೈಸೂರು(ಅ. 28): ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಫ್ಯಾಕ್ಸ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಅವರು ರಾಜೀನಾಮೆ ರವಾನಿಸಿದ್ದಾರೆ. ಸಿ.ಎಚ್. ವಿಜಯಶಂಕರ್ ಮನವೊಲಿಸಲು ಬಿಜೆಪಿ ನಾಯಕರು ಈ ಮೊದಲು ಸಾಕಷ್ಟು ಬಾರಿ ಮುಂದಾಗಿದ್ದರೆನ್ನಲಾಗಿದೆ. ಆದರೆ, ಪಕ್ಷ ತೊರೆಯಲು ವಿಜಯಶಂಕರ್ ದೃಢನಿಶ್ಚಯ ಮಾಡಿಕೊಂಡಿದ್ದಾರೆ. ಬಿಜೆಪಿ ಟಿಕೆಟ್ ನಿರಾಕರಣೆ, ನಿರ್ಲಕ್ಷ್ಯ ಮೊದಲಾದವುಗಳಿಂದ ಅವರು ಬೇಸತ್ತಿದ್ದರು. ಪಕ್ಷ ತೊರಯಲು ಇದೇ ಕಾರಣ ಎನ್ನಲಾಗಿದೆ.

ಮಾಜಿ ಸಚಿವರೂ ಆಗಿರುವ 61 ವರ್ಷದ ಸಿಎಚ್ ವಿಜಯಶಂಕರ್ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಚುನಾಯಿತರಾಗಿದ್ದರು. ಮೈಸೂರು ರಾಜ ಶ್ರೀಕಂಠದತ್ತ ಒಡೆಯರ್ ಅವರನ್ನೇ ಸೋಲಿಸಿ ಅಚ್ಚರಿ ಮೂಡಿಸಿದ್ದವರು. 2014ರಲ್ಲಿ ಹಾಸನದಲ್ಲಿ ಎಚ್.ಡಿ.ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋಲಪ್ಪಿದರು. ರಾಜ್ಯ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷರಾಗಿಯೂ ವಿಜಯಶಂಕರ್ ಸಕ್ರಿಯರಾಗಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಮೈಸೂರಿನ ಪಿರಿಯಾಪಟ್ಟಣ ಕ್ಷೇತ್ರದಿಂದ ಭಾರತಿಯ ಜನತಾ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದರೆ, ಪಕ್ಷದ ಟಿಕೆಟ್ ಸಿಗಲಿಲ್ಲ. ಜೊತೆಗೆ, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕೊರಗು ಇತ್ತೀಚೆಗೆ ವಿಜಯಶಂಕರ್ ಅವರಲ್ಲಿತ್ತು. ಇದರಿಂದ ಅವರು ಬೇಸತ್ತು ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಅವರು ಹೋಗುವ ಮನಸ್ಸು ಮಾಡಿದ್ದಾರೆನ್ನುವುದು ಗೊತ್ತಾಗಿಲ್ಲ.