ಬಿಪಿಆರ್‌'ಡಿ ಪರವಾಗಿ ಅಹಮದಾಬಾದ್‌ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಹೊಸ ಸಮವಸ್ತ್ರದ ಐದು ಮಾದರಿಗಳನ್ನು ನೀಡಲಿದೆ.

ನವದೆಹಲಿ(ಡಿ.25): ಭಾರೀ ಹಳೆಯ ಕಾಲದ ಭಾರತದ ಪೊಲೀಸರ ಖಾಕಿ ಸಮವಸ್ತ್ರದ ಬದಲಿಗೆ, ಹೊಸದಾಗಿ ಆಕರ್ಷಕ ಸಮವಸ್ತ್ರಗಳನ್ನು ಪೂರೈಸಲು ಸರ್ಕಾರ ಚಿಂತಿಸಿದೆ. ದೇಶಾದ್ಯಂತ ಇರುವ ಪೊಲೀಸ್ ಪಡೆಗಳು ಮತ್ತು ಅರೆ ಸೇನಾ ಪಡೆಗಳ ಸಿಬ್ಬಂದಿಗೆ ಎಲ್ಲ ಕಾಲಕ್ಕೆ ಅನುಗುಣವಾಗುವ, ಬಳಕೆಗೆ ಯೋಗ್ಯವಾದ ಸಮವಸ್ತ್ರ ಪೂರೈಸಲು ಕೇಂದ್ರ ಎಲ್ಲ ಅಂತಿಮ ಸಿದ್ಧತೆ ನಡೆಸುತ್ತಿದೆ.

ಹೊಸ ಸಮವಸ್ತ್ರಕ್ಕೆ ಆಧುನಿಕ ವಿನ್ಯಾಸವಿರಲಿದೆ. ಹೊಸ ಬಣ್ಣ ಮತ್ತು ವಿನ್ಯಾಸ ಯೋಜನೆಯಡಿ, ನೋಡುವುದಕ್ಕೆ ಆಕರ್ಷಕ ಬಣ್ಣದ, ಅಧಿಕಾರದ ಗತ್ತನ್ನು ಹೊರಸೂಸುವ, ಸಾರ್ವಜನಿಕ ಸ್ನೇಹಿ ದೃಷ್ಟಿಕೋನವಿರುವ ನೂತನ ಸಮವಸ್ತ್ರಗಳು ಬರುವ ಸಾಧ್ಯತೆಗಳಿವೆ ಎಂದು ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ತಿಳಿಸಿದೆ.

ಪೊಲೀಸರಿಗೆ ಹೊಸ ಸಮವಸ್ತ್ರ ವಿನ್ಯಾಸಗೊಳಿಸುವ ಕುರಿತಂತೆ ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಮಂಡಳಿ(ಬಿಪಿಆರ್‌'ಡಿ)ಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಬಿಪಿಆರ್‌'ಡಿ ಪರವಾಗಿ ಅಹಮದಾಬಾದ್‌ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆ ಹೊಸ ಸಮವಸ್ತ್ರದ ಐದು ಮಾದರಿಗಳನ್ನು ನೀಡಲಿದೆ.

ಎಎಸ್‌'ಬಿಗೆ 9000 ರೈಫಲ್‌'ಗಳು:

ನೇಪಾಳ ಮತ್ತು ಭೂತಾನ್‌ನ ಗಡಿ ಭದ್ರತೆ ಕರ್ತವ್ಯ ನಿರ್ವಹಿಸುವ ಸೇನೆಯ ಸಶಸ್ತ್ರ ಸೀಮಾ ಬಲ(ಎಸ್‌'ಎಸ್‌'ಬಿ)ಕ್ಕೆ 9000 ರೈಫಲ್‌'ಗಳು ಮತ್ತು ಗುಂಡು ನಿರೋಧಕ ವಾಹನಗಳನ್ನು ಮಂಜೂರು ಮಾಡಲಾಗಿದೆ.

34 ಶಸ್ತ್ರಾಸ್ತ್ರ ಭರಿತ ವಾಹನಗಳು ಮತ್ತು 763 ಗಸ್ತು ಬೈಕ್‌'ಗಳು ಮಂಜೂರಾಗಿವೆ. ಮಂಜೂರಾದ ವಾಹನಗಳ ಪೈಕಿ 12 ಗುಂಡು ನಿರೋಧಕ ವಾಹನಗಳು, 15 ಲಘು ಶಸ್ತ್ರಾಸ್ತ್ರ ಭರಿತ ವಾಹನಗಳು, ಏಳು ನೆಲಬಾಂಬ್ ನಿರೋಧಕ ವಾಹನಗಳು ಸೇರಿದಂತೆ, 42 ನಾಲ್ಕು ಚಕ್ರಗಳ ಗಸ್ತು ವಾಹನಗಳನ್ನು ಮಂಜೂರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.