ಬೆಂಗಳೂರು :  ರಾಜ್ಯ ಸರ್ಕಾರ ಸಲ್ಲಿಕೆ ಮಾಡಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವ ಹಿನ್ನೆಲೆಯಲ್ಲಿ ಸಮಾಜದ ಮುಖಂಡರು ಇನ್ನಾದರೂ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಕೇಂದ್ರದ ಈ ತಿರಸ್ಕಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಎಚ್ಚರಿಕೆ ಗಂಟೆ ಎಂದು ಭಾವಿಸಿದ್ದು, ಸಮಾಜದ ಹಿತದೃಷ್ಟಿಯಿಂದ ಎಲ್ಲ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಒಂದಾಗಬೇಕಾಗಿದೆ. ಸಮಾಜವನ್ನು ಕಟ್ಟುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಗ್ಗಟ್ಟಿನ ಕೊರತೆಯಿಂದ ಧರ್ಮದ ಮಾನ್ಯತೆ ಪಡೆಯುವ ಎಲ್ಲ ಅರ್ಹತೆಗಳಿದ್ದರೂ ಕೇಂದ್ರದ ಮುಂದೆ ಸರಿಯಾಗಿ ವಿಷಯ ಮಂಡನೆ ಮಾಡದಿರುವುದು ತಿರಸ್ಕಾರಕ್ಕೆ ಕಾರಣವಾಗಿದೆ. ಮೊದಲಿನಿಂದಲೂ ಮಹಾಸಭೆ ‘ವೀರಶೈವ-ಲಿಂಗಾಯತ’ ಒಂದೇ ಎಂದು ಪ್ರತಿಪಾದಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ಪಡೆಯಲು ಸಂಘಟನಾತ್ಮಕ ಹೋರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.