ಕೇಂದ್ರದ ಅಧಿಸೂಚನೆ ಪ್ರಕಾರ, ಪರವಾನಿಗೆ ಪಡೆದ ಬ್ರೀಡರ್'ಗಳನ್ನು ಹೊರತುಪಡಿಸಿ ಬೇರಾರೂ ಕೂಡ ಗೋವಧಾ ಕೇಂದ್ರಗಳಿಗೆ ದನಗಳನ್ನು ಮಾರಾಟ ಮಾಡುವಂತಿಲ್ಲ. ಅಷ್ಟೇ ಅಲ್ಲ ದನಗಳ ಮಾರಾಟಕ್ಕೂ ಕೇಂದ್ರ ಕಡಿವಾಣ ಹಾಕಿದೆ. ಜಮೀನು ಹೊಂದಿರುವ ರೈತರು ಮಾತ್ರ ದನಗಳ ಮಾರಾಟ ಮಾಡಬಹುದಾಗಿದೆ.

ನವದೆಹಲಿ(ಮೇ 26): ಮೂರು ವರ್ಷ ಅಧಿಕಾರ ಪೂರ್ಣಗೊಳಿಸಿದ ಸಂದರ್ಭದಲ್ಲಿ ಕೇಂದ್ರ ಎನ್'ಡಿಎ ಸರಕಾರ ಗೋಹತ್ಯಾ ನಿಷೇಧ ನಿರ್ಣಯ ಹೊರಡಿಸಿದೆ. ಈ ನಿರ್ಧಾರದ ಮೂಲಕ ಹಸು, ಎಮ್ಮೆ, ಒಂಟೆ ಮೊದಲಾದ ಪ್ರಾಣಿಗಳ ವಧೆಗೆ ಕೇಂದ್ರ ಬ್ರೇಕ್ ಹಾಕಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಈ ಸಂಬಂಧ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ದೇಶದ 1 ಕೋಟಿ ರೂ ಪ್ರಮಾಣದ ಮಾಂಸೋದ್ಯಮದ ಮೇಲೆ ನೇರ ಪರಿಣಾಮ ಬೀರಲಿದೆ.

ಕೇಂದ್ರದ ಅಧಿಸೂಚನೆ ಪ್ರಕಾರ, ಪರವಾನಿಗೆ ಪಡೆದ ಬ್ರೀಡರ್'ಗಳನ್ನು ಹೊರತುಪಡಿಸಿ ಬೇರಾರೂ ಕೂಡ ಗೋವಧಾ ಕೇಂದ್ರಗಳಿಗೆ ದನಗಳನ್ನು ಮಾರಾಟ ಮಾಡುವಂತಿಲ್ಲ. ಅಷ್ಟೇ ಅಲ್ಲ ದನಗಳ ಮಾರಾಟಕ್ಕೂ ಕೇಂದ್ರ ಕಡಿವಾಣ ಹಾಕಿದೆ. ಜಮೀನು ಹೊಂದಿರುವ ರೈತರು ಮಾತ್ರ ದನಗಳ ಮಾರಾಟ ಮಾಡಬಹುದಾಗಿದೆ.

ಗೋಹತ್ಯಾ ನಿಷೇಧ ಅಧಿಸೂಚನೆಯ ಹೈಲೈಟ್ಸ್:
* ಹಸು, ಎತ್ತು, ಎಮ್ಮೆ, ಕೋಣ, ಕರು, ಒಂಟೆ ಇವುಗಳಿಗೆ ನೂತನ ಅಧಿನಿಯಮ ಅನ್ವಯ
* ವಧಾಗೃಹಕ್ಕೆ ಗೋವುಗಳ ಮಾರಾಟವನ್ನು ನಿಷೇಧಿಸಲಾಗಿದೆ.
* ಪರವಾನಿಗೆ ಹೊಂದಿದ ಬ್ರೀಡರ್ಸ್'ಗಳು ಮಾತ್ರ ಗೋವಧಾಗೃಹಗಳಿಗೆ ಮಾರಾಟ ಮಾಡಬಹುದು.
* ಕೃಷಿ ಜಮೀನು ಮಾಲೀಕರು ಮಾತ್ರ ಪ್ರಾಣಿ ಮಾರುಕಟ್ಟೆಯಲ್ಲಿ ಗೋವುಗಳನ್ನು ಮಾರಾಟ ಮಾಡಬಹುದು
* ಅಂತಾರಾಷ್ಟ್ರೀಯ ಗಡಿಯಿಂದ 50 ಕಿಮೀ ವರೆಗೆ ಪ್ರಾಣಿ ಸಂತೆಗಳಿಗೆ ನಿಷೇಧ.
* ರಾಜ್ಯದ ಗಡಿಗಳಿಂದ 25 ಕಿಮೀ ವರೆಗೆ ಯಾವುದೇ ಪ್ರಾಣಿ ಸಂತೆಗಳು ಇರುವಂತಿಲ್ಲ.
* ಪ್ರಾಣಿಯನ್ನು ಬೇರೆ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ವಿಶೇಷ ಅನುಮತಿ ಪಡೆದಿರಬೇಕು
* ಸಣ್ಣ ಪ್ರಾಯದ ಮತ್ತು ಅಶಕ್ತ ಪ್ರಾಣಿಗಳನ್ನು ಮಾರುವಂತಿಲ್ಲ
* ಪ್ರಾಣಿ ಮಾರುಕಟ್ಟೆಗಳಲ್ಲಿ ಸರಿಯಾದ ರೀತಿಯ ಸೌಲಭ್ಯಗಳಿರಬೇಕು. ನೀರು, ಫ್ಯಾನು, ಬೆಡ್ಡು, ರ್ಯಾಂಪ್, ಜಾರಿ ಬೀಳದಂಥ ನೆಲ, ಪ್ರಾಣಿ ಚಿಕಿತ್ಸಾ ವ್ಯವಸ್ಥೆ, ಅನಾರೋಗ್ಯಪೀಡಿತ ಪ್ರಾಣಿಗಳಿಗೆ ಬೇರೆ ಗೃಹ ವ್ಯವಸ್ಥೆ ಇತ್ಯಾದಿ 30 ನಿಯಮಗಳಿವೆ
* ಪ್ರಾಣಿ ಮಾರುಕಟ್ಟೆ ನಡೆಸಲು ಜಿಲ್ಲಾ ಪ್ರಾಣಿ ಮಾರುಕಟ್ಟೆ ಸಮಿತಿಯ ಅನುಮತಿ ಇರಬೇಕು. ಈ ಸಮಿತಿಯ ನೇತೃತ್ವವನ್ನು ಮ್ಯಾಜಿಸ್ಟ್ರೇಟ್ ವಹಿಸಿಕೊಳ್ಳುತ್ತಾರೆ. ಸರಕಾರೀ ಅನುಮೋದಿತ ಪ್ರಾಣಿ ಕಲ್ಯಾಣ ಸಂಘಟನೆಗಳಿಂದ ಇಬ್ಬರು ಪ್ರತಿನಿಧಿಗಳು ಈ ಸಮಿತಿಯಲ್ಲಿರುತ್ತಾರೆ.
* ಮಾರುಕಟ್ಟೆಗಳಿಗೆ ತರುವಾಗ ಪ್ರಾಣಿಗಳನ್ನ ಸರಿಯಾಗಿ ತುಂಬಿಸಲಾಗಿರುವುದನ್ನು ವೆಟರಿನರಿ ಇನ್ಸ್'ಪೆಕ್ಟರ್'ರಿಂದ ದೃಢೀಕರಣ ಪಡೆಯುವುದು ಕಡ್ಡಾಯ. ಯಾವುದೇ ಪ್ರಾಣಿಯು ಮಾರಾಟಕ್ಕೆ ಯೋಗ್ಯವಲ್ಲ ಎಂಬುದನ್ನು ನಿರ್ಧರಿಸುವ ಹಕ್ಕು ವೆಟರ್ನರಿ ಇನ್ಸ್'ಪೆಕ್ಟರ್'ಗೆ ಇರುತ್ತದೆ.

ಯಾರಾರಿಗೆ ತೊಂದರೆ?
* ದೇಶದಲ್ಲಿರುವ ಮಾಂಸೋದ್ಯಮ ಹೆಚ್ಚೂಕಡಿಮೆ 1 ಲಕ್ಷ ಕೋಟಿಯಷ್ಟಿದೆ. ಶೇ.90ರಷ್ಟು ಮಾಂಸವು ಪ್ರಾಣಿ ಮಾರುಕಟ್ಟೆಗಳಿಂದಲೇ ಬರುತ್ತದೆ. ಪ್ರಾಣಿ ಮಾರುಕಟ್ಟೆಯ ಮೇಲೆ ಕೇಂದ್ರವು ನಿಯಂತ್ರಣ ಹೇರಿರುವುದರಿಂದ ದೇಶದ ಮಾಂಸೋದ್ಯಕ್ಕೆ ತೀವ್ರ ಹೊಡೆತ ಬೀಳುತ್ತದೆ.
* ನಿರುಪಯುಕ್ತ ಮತ್ತು ವೃದ್ಧ ಹಸುಗಳನ್ನು ಮಾರಾಟ ಮಾಡಿಬಿಡುತ್ತಿದ್ದ ರೈತರ ಆದಾಯಕ್ಕೆ ಕತ್ತರಿ ಬೀಳುತ್ತದೆ.
* ಹಸುಗಳನ್ನು ಪಾಲಿಸಲಾಗದ ರೈತರು, ಗೋಕೇಂದ್ರಗಳಲ್ಲಿ ಅವುಗಳ ಪಾಲನೆಗೆ ಇಂತಿಷ್ಟು ಹಣ ತೆರಬೇಕಾಗುತ್ತದೆ.
* ಹಸುಗಳ ವ್ಯಾಪಾರ ಮಾಡಲು ಸಾಕಷ್ಟು ಕಾಗದಪತ್ರಗಳ ಕೆಲಸದ ಅಗತ್ಯವಿರುತ್ತದೆ. ಇಂಥ ಬಹುತೇಕ ವ್ಯಾಪಾರಸ್ಥರು ನಿರಕ್ಷರಿಗಳಾಗಿರುವುದರಿಂದ ಸಾಕಷ್ಟು ತೊಂದರೆಯಾಗುತ್ತದೆ.