ಬೆಂಗಳೂರು (ಮಾ. 06):  ಯಶವಂತಪುರದಿಂದ ದೆಹಲಿಗೆ ಸಂಚರಿಸುವ ‘ಯಶವಂತಪುರ- ಹಜರತ್‌ ನಿಜಾಮುದ್ದೀನ್‌’ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.

ಈ ವೇಳೆ ಮಾತನಾಡಿದ ಅವರು, ದೇಶದ ವೇಗದ ಆರ್ಥಿಕ ಪ್ರಗತಿಯಲ್ಲಿ ರೈಲ್ವೆ ಸಂಪರ್ಕವೂ ಪ್ರಮುಖ ಪಾತ್ರ ವಹಿಸುತ್ತದೆ. ಯಶವಂತಪುರ-ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ರಾಜ್ಯದ ರಾಜಧಾನಿ ಮತ್ತು ದೇಶದ ರಾಜಧಾನಿ ಸಂಪರ್ಕಿಸಲಿದೆ. ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಘೋಷಿಸಿದ್ದ ರೈಲ್ವೆ ಯೋಜನೆಗಳ ಪೈಕಿ ಬಹುತೇಕ ಯೋಜನೆಗಳನ್ನು ಪೂರೈಸಿದೆ. ಪ್ರತಿ ಬಜೆಟ್‌ನಲ್ಲಿ ರೈಲ್ವೆಗೆ ಬಜೆಟ್‌ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

 

ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಜನರ ಬಹುದಿನಗಳ ಬೇಡಿಕೆಯಾಗಿದ್ದ ಯಶವಂತಪುರ-ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಈಗ ಈಡೇರಿದೆ. ಹಾಗಾಗಿ ಕೇಂದ್ರ ರೈಲ್ವೆ ಸಚಿವರಿಗೆ ಕೃತ್ಯಜ್ಞತೆ ಹೇಳುವುದಾಗಿ ತಿಳಿಸಿದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಉಪನಗರ ರೈಲು ಸೇರಿದಂತೆ ಬೆಂಗಳೂರು ನಗರಕ್ಕೆ ಬಹು ಮಾದರಿ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉಪನಗರ ರೈಲು ಯೋಜನೆ ಅನುಷ್ಠಾನ ವಿಚಾರವಾಗಿ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಿದ್ದಾರೆ ಎಂದರು.

ಪ್ರತಿ ಮಂಗಳವಾರ ಯಶವಂತಪುರದಿಂದ ಮಧ್ಯಾಹ್ನ 12.30ಕ್ಕೆ ಹೊರಡಲಿರುವ ರೈಲು, ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ, ಬಂಗಾರಪೇಟೆ ಮಾರ್ಗವಾಗಿ ಸಂಚರಿಸಿ ಗುರುವಾರ ಬೆಳಗ್ಗೆ 9.30ಕ್ಕೆ ದೆಹಲಿ ತಲುಪಲಿದೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿಬದಲಾಗಲಿದೆ.