Asianet Suvarna News Asianet Suvarna News

ಸಮರಕ್ಕೂ ಸೈ, ಶಾಂತಿಗೂ ಜೈ ಅಂತಿದ್ರು ನಮ್ಮ ಅಟಲ್ ಜೀ!

  • ಜನಾಂದೋಲನ ರೂಪಿಸಿ ಅಯಸ್ಕಾಂತೀಯ ಶಕ್ತಿ ಆಗಿದ್ದರು ಅಟಲ್ ಜಿ 
  • ನಿಷ್ಕಳಂಕ ಚಾರಿತ್ರ್ಯ, ಮೇರು ವ್ಯಕ್ತಿತ್ವದ ಮಹಾನ್ ನಾಯಕ 
  • ಸಮರಕ್ಕೂ ಸೈ, ಶಾಂತಿಗೂ ಜೈ ಅಂತಿದ್ರು 
Central Minister Ananth Kumar recalls Atal Bihari Vajpayee
Author
Bengaluru, First Published Aug 17, 2018, 9:52 AM IST

ಬೆಂಗಳೂರು (ಆ. 17): ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಭಾರತದ ಸ್ವಾತಂತ್ರ್ಯೋತ್ತರ ರಾಜಕಾರಣದಲ್ಲಿ ಸದಾ ಹಸಿರಾಗಿರುವ ಹೆಸರು. ಅವರೊಬ್ಬ ನಿಷ್ಕಳಂಕ ಚಾರಿತ್ರ್ಯದ, ಮೇರು ವ್ಯಕ್ತಿತ್ವದ ಮಹಾನ್ ಜನನಾಯಕ. ಅಪ್ರತಿಮ ವಾಗ್ಮಿ, ಅದ್ವಿತೀಯ ಸಂಸತ್ ಪಟು. ಕವಿ ಹೃದಯದ ಭಾವಜೀವಿ, ಸರ್ವಜನಪ್ರಿಯ ಹಾಗೂ ಬಹುರಂಗಿನ ವ್ಯಕ್ತಿತ್ವದ ಅಪೂರ್ವ ವ್ಯಕ್ತಿ, ಶಕ್ತಿಯಾಗಿದ್ದರು.

ಸ್ವಾತಂತ್ರ ಹೋರಾಟದಿಂದ ಸ್ವಾತಂತ್ರದ ಸ್ವರ್ಣ ಮಹೋತ್ಸವದವರೆಗೆ ವಾಜಪೇಯಿ ನಡೆದು ಬಂದ ದಾರಿ ಕಳಂಕ ರಹಿತ. ಡಾ|ಶ್ಯಾಮಪ್ರಸಾದ್ ಮುಖರ್ಜಿಯವರ ನೇತೃತ್ವದಲ್ಲಿ ಕಾಶ್ಮೀರ ವಿಮೋಚನಾ ಹೋರಾಟ, ನಂತರ ಪ್ರಾರಂಭವಾದ ಜೆಪಿ ಆಂದೋಲನ, ತುರ್ತುಪರಿಸ್ಥಿತಿಯಲ್ಲಿ ಕಾರಾಗೃಹ ವಾಸ, ಮೊದಲನೆಯ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಅಭೂತಪೂರ್ವ ಕಾರ್ಯನಿರ್ವಹಣೆ. ನಂತರ ಭಾರತೀಯ ಜನತಾ ಪಕ್ಷದ ಕರ್ಣಧಾರತ್ವ, ಭವ್ಯ ಭಾರತದ ಕನಸುಗಾರ ಹಾಗೂ ಹರಿಕಾರ ಪ್ರಧಾನಿ ವಾಜಪೇಯಿ ಈವರೆಗೆ ನಡೆದು ಬಂದ ದಾರಿ ಬಲುದೂರ. ಅವರ ಜೀವನ, ಸ್ವಾತಂತ್ರ್ಯಾ ನಂತರದ ಭಾರತೀಯ ಇತಿಹಾಸಕ್ಕೆ ಬೆಳಕಿನ ಕಿಂಡಿ ಎನ್ನಬಹುದು.

55 ವರ್ಷಕ್ಕೂ ಹೆಚ್ಚು ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದ ಕಾಂಗ್ರೆಸ್ಸಿನ ಕಥೆ ಒಂದು ಮುಖವಾದರೆ ಜನರ ಆಶೋತ್ತರಗಳನ್ನು ಮುಂದಿಡುತ್ತಾ ದೇಶದ ಅತ್ಯುನ್ನತ ಪಂಚಾಯತ್- ಸಂಸತ್‌ನ ಒಳಗೆ ಮತ್ತು ಹೊರಗೆ ಜನಾಂದೋಲನವನ್ನು ರೂಪಿಸಿ ಅದಕ್ಕೆ ಅಯಸ್ಕಾಂತದ ಧ್ವನಿ ಕೊಟ್ಟ ವಾಜಪೇಯಿ ಅವರ ಜೀವನದ ಇನ್ನೊಂದು ಮುಖ.

ದೇಶದ ಅಸ್ಮಿತೆ, ಭದ್ರತೆ ವಿಚಾರ ಬಂದಾಗ ಬಲಾಢ್ಯರನ್ನೇ ಎದುರು ಹಾಕಿಕೊಳ್ಳಲು, ಸಮರವನ್ನೇ ಸಾರಲು ಹಿಂಜರಿಯದ ದಿಟ್ಟ ನೇತಾರ ಅಟಲ್‌ಜಿ. ಆದರೆ, ಯುದ್ಧ ಅನಿವಾರ್ಯವಿಲ್ಲದಿದ್ದಾಗ ವಿರೋಧಿಗಳಿಗೂ ಸ್ನೇಹಹಸ್ತ ಚಾಚಿ ಶಾಂತಿ ಸಾರಿದ ಸಹೃದಯಿ ನಾಯಕ ಅವರು. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಪಳಗಿ ವ್ಯಕ್ತಿತ್ವ-ವಿಚಾರ-ವಿಕಾಸದ ಮೂಸೆಯಲ್ಲಿ ಪರಿಪಕ್ವತೆಯತ್ತ ಮುನ್ನಡೆದ ಮುತ್ಸದ್ಧಿ ವಾಜಪೇಯಿಯವರು.

ಅವರ ವಿಚಾರ, ನಡೆ-ನುಡಿಗಳು ಅನೇಕ ಪೀಳಿಗೆಗಳನ್ನು ಉದ್ದೀಪನಗೊಳಿಸುವಷ್ಟು ಪ್ರೇರಕವಾಗಿದ್ದವು. ವಿದೇಶಾಂಗ ಸಚಿವರಾಗುವ ಮೊದಲು ಮತ್ತು ನಂತರವೂ ಕೂಡ ಅವರೊಬ್ಬ ಭಾರತೀಯ ಸಂಸ್ಕೃತಿಯ ಮುಂಚೂಣಿ ರಾಯಭಾರಿಯಾಗಿದ್ದರು. ಭಾರತೀಯ ಚಿಂತನೆಯ ಉದಾರ ಉತ್ತುಂಗ ವಿಚಾರಗಳೇ ಮೈತಾಳಿದಂತೆ ಅವರ ಮಾತು ಹಾಗೂ ವ್ಯವಹಾರಗಳಿದ್ದವು.

ಅಂತರಾಷ್ಟ್ರೀಯ ರಾಜಕಾರಣದಲ್ಲಿ ವಾಜಪೇಯಿ ಅವರದ್ದೇ ವಿಶೇಷ ಛಾಪು. ಭಾರತೀಯ ನಿಯೋಗದ ನೇತೃತ್ವ ವಹಿಸಿ ಜಿನೀವಾದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಪ್ರಬಲ ಪ್ರತಿಪಾದನೆ ಮಾಡಿದ್ದು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಅವರ ಶಿಖರ ಸಾಧನೆ.

ಸುಮಾರು 95  ಕೋಟಿಗೂ ಹೆಚ್ಚು ಜನರ ಈ ನಿತ್ಯ ನೂತನ ಚಿರಪುರಾತನ ರಾಷ್ಟ್ರದ ನೇತೃತ್ವ ವಹಿಸಿದ್ದರು. ದೇಶದಲ್ಲಿ ಆಗ ಜನಸಂಖ್ಯೆಯಿಂದ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಅಪರಾಧೀಕರಣ, ಉಗ್ರವಾದ, ಜಾತಿವಾದ, ಸಾಮಾಜಿಕ ಅಸಮಾನತೆ, ಭೀತಿಭಯ, ವಿಷಮತೆಗಳ ಹತ್ತು ಹಲವು ಪೆಡಂಭೂತಗಳು ತಾಂಡವ ನೃತ್ಯವಾಡುತ್ತಿದ್ದವು.

ಈ ಎಲ್ಲಾ ಸವಾಲುಗಳ ಮಧ್ಯೆ ವಿಭಜಿತ ಜನಾದೇಶದಿಂದ ಮೇಲೆದ್ದು ಬಂದು ಸಮ್ಮಿಶ್ರ ಸರ್ಕಾರವನ್ನೇ ಬದಲಾವಣೆಯ ಸಾಧನವನ್ನಾಗಿ ಉಪಯೋಗಿಸಿಕೊಂಡರು. ಐವತ್ತು ವರ್ಷಗಳ ದುರಾಡಳಿತದಿಂದ ಬರಡು ಬೆಂಗಾಡಾಗಿದ್ದ ನಾಡಿನಲ್ಲಿ ಅಮೃತ ಸಿಂಚನೆಯ ಗಂಗೆಯನ್ನು ಹರಿಸಿದ ಆಧುನಿಕ ಭಗೀರಥರಾಗಿದ್ದರು ಅಟಲ ಬಿಹಾರಿ ವಾಜಪೇಯಿ ಅವರು.

ರಾಜಸ್ಥಾನದ ಪೋಖ್ರಾನ್‌ನ ಮರುಭೂಮಿಯಲ್ಲಿ ನಡೆಸಿದ ಅಣುಸ್ಫೋಟಗಳು ಭಾರತ ದೇಶದ ವಿರೋಧಿಗಳ ಎದೆಯಲ್ಲಿ ಭೀತಿಯ ಮೋಡಗಳನ್ನು ನಿರ್ಮಾಣ ಮಾಡಿ ನಾಡಿನ ಜನ, ಭಾರತೀಯ ಸಂಜಾತ ವಿಶ್ವ ನಾಗರಿಕರಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡಿತು. ಇದು ಕವಿ ಹೃದಯ ಮುತ್ಸದ್ಧಿಯ ರಾಷ್ಟ್ರಪ್ರೇಮದ ಆವಿಷ್ಕಾರವಾಗಿತ್ತು.

ವಾಜಪೇಯಿ ಅವರನ್ನು ಕಳೆದ ಕೆಲವು ದಶಕಗಳಿಂದ ಹತ್ತಿರದಿಂದ ನೋಡುವ ಭಾಗ್ಯ ನನಗೆ ದೊರಕಿದೆ. ಪ್ರತಿ ಸಲ ಅವರೊಂದಿಗೆ ಒಡನಾಡುವಾಗಲೂ ನನ್ನಲ್ಲಿ ಅವರ ಬಗೆಗಿನ ಗೌರವ, ಪ್ರೀತಿ ಹಾಗೂ ಹೆಮ್ಮೆ ಇಮ್ಮಡಿಯಾಗುತ್ತಿತ್ತು. ಪ್ರತಿ ಸಲ ಅವರನ್ನು ಭೇಟಿ ಮಾಡಿದಾಗಲೂ ಅವರೊಂದು ಅಗಾಧವಾದ ಅನುಭವವನ್ನು ಮೊಗೆದು ಕೊಡುತ್ತಿದ್ದರು.

ದೇಶದ ದಿವ್ಯ ಸಂಕೇತ:

ಅಟಲ್‌ಜೀಯವರ ಸರ್ಕಾರದಲ್ಲಿ ಅವರ ಕಿರಿಯ ಸಹೋದ್ಯೋಗಿಯಾಗಿ ಕೆಲಸ ಮಾಡುವ ಸದವಕಾಶ ನನಗೆ ದೊರೆತಿದ್ದು ನನ್ನ ಪಾಲಿನ ಪುಣ್ಯ ಎಂದೇ ನಾನು ಭಾವಿಸಿದ್ದೇನೆ. ಅತ್ಯಂತ ನಿರ್ಣಾಯಕ ವಿಷಯಗಳ ಬಗ್ಗೆ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರ, ಅದನ್ನು ತಗೆದುಕೊಳ್ಳುತ್ತಿದ್ದ ರೀತಿ, ವಿಷಯದ ಆಳಕ್ಕಿಳಿದು ಅದನ್ನು ಅಭ್ಯಸಿಸುತ್ತಿದ್ದ ವಿಧಾನ, ಸಮಸ್ಯೆಯ ಅರಿವಿನ ಬಗೆಗೆ ಅವರಿಗಿದ್ದ ವಿಶಾಲ ನೋಟ ಹಾಗೂ ದೂರದೃಷ್ಟಿ ಅನುಪಮವಾದುದು. ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಈ ಬೃಹತ್ ದೇಶದ ಒಂದು ದಿವ್ಯ ಸಂಕೇತವಾಗಿ ಅವರು ಕಂಗೊಳಿಸುತ್ತಾರೆ. ಎಂಥದೇ ಸಂದರ್ಭ ಇರಲಿ. ಅಟಲ್‌ಜಿ ಅವರ ನಡೆ ನುಡಿ, ವಿಚಾರ ಹಾಗೂ ನಡವಳಿಕೆ ಆದರ್ಶಪ್ರಾಯ.  

-ಅನಂತ್ ಕುಮಾರ್, ಕೇಂದ್ರ ಸಚಿವ, ಸಂಸದೀಯ ವ್ಯವಹಾರಗಳ ಖಾತೆ 

Follow Us:
Download App:
  • android
  • ios