ಫೇಸ್ಬುಕ್‌'ಗೆ ಭಾರತ ಸರ್ಕಾರದ ಎಚ್ಚರಿಕೆ

First Published 22, Mar 2018, 9:05 AM IST
Central Govt Warns to Social Media
Highlights

ಅಮೆರಿಕದ ಚುನಾವಣೆ ಮೇಲೆ ಫೇಸ್‌ಬುಕ್‌ ಅಕ್ರಮವಾಗಿ ಪ್ರಭಾವ ಬೀರಿದ ಬಗ್ಗೆ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರ ಕೂಡ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.

ನವದೆಹಲಿ (ಮಾ. 22):  ಅಮೆರಿಕದ ಚುನಾವಣೆ ಮೇಲೆ ಫೇಸ್‌ಬುಕ್‌ ಅಕ್ರಮವಾಗಿ ಪ್ರಭಾವ ಬೀರಿದ ಬಗ್ಗೆ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರ ಕೂಡ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.

‘ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ಅಕ್ರಮವಾಗಿ ಯಾವುದೇ ರೀತಿಯ ಪ್ರಭಾವ ಬೀರಲು ಯತ್ನಿಸಿದರೆ ಅಥವಾ ಭಾರತದಲ್ಲಿ 20 ಕೋಟಿಯಷ್ಟಿರುವ ಫೇಸ್‌ಬುಕ್‌ ಬಳಕೆದಾರರ ದತ್ತಾಂಶಗಳನ್ನು ಇನ್ನಾರಿಗಾದರೂ ನೀಡಿದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಚಿಂತನೆಗಳು ಮುಕ್ತವಾಗಿ ಹರಿದಾಡಬೇಕು ಎಂಬುದಕ್ಕೂ ನಮ್ಮ ಬೆಂಬಲವಿದೆ. ಆದರೆ, ಸಾಮಾಜಿಕ ಜಾಲತಾಣಗಳು ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ವಾಮಮಾರ್ಗಗಳಲ್ಲಿ ಪ್ರಭಾವ ಬೀರಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಿಸ್ಟರ್‌ ಮಾರ್ಕ್ ಜುಕರ್‌ಬರ್ಗ್‌, ನೀವು ಭಾರತದ ಐಟಿ ಮಂತ್ರಿಯ ಮಾತು ಕೇಳಿಸಿಕೊಳ್ಳುವುದು ಒಳ್ಳೆಯದು. ನಮ್ಮ ದೇಶದಲ್ಲಿ ಫೇಸ್ಬುಕ್‌ಗೆ ಸಂಪೂರ್ಣ ಸ್ವಾಗತವಿದೆ. ಆದರೆ, ನೀವೇನಾದರೂ ಭಾರತೀಯರ ದತ್ತಾಂಶಗಳನ್ನು ಕದ್ದರೆ ಮಾತ್ರ ಸಹಿಸಿಕೊಳ್ಳುವುದಿಲ್ಲ. ನಮ್ಮಲ್ಲಿ ಬಹಳ ಕಠಿಣವಾದ ಐಟಿ ಕಾಯ್ದೆಯಿದೆ. ಅದನ್ನು ಬಳಸಿ ನಿಮ್ಮನ್ನು ಇಲ್ಲಿಗೂ ಕರೆಸುತ್ತೇವೆ.

- ರವಿಶಂಕರ ಪ್ರಸಾದ್‌, ಐಟಿ ಮತ್ತು ಕಾನೂನು ಸಚಿವ 

loader