ನವದೆಹಲಿ: ಲೋಕಸಭೆ ಚುನಾವಣೆಗೂ ಮೊದಲು ಕೃಷಿಕರ ಓಲೈಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಸಂಕಷ್ಟದಲ್ಲಿರುವ ಕೃಷಿಕರ ನೆರವಿಗಾಗಿ ಒಂದೆರಡು ದಿನಗಳಲ್ಲಿ ಭರ್ಜರಿ ಪ್ಯಾಕೇಜ್ ಪ್ರಕಟಿಸುವ ಸಾಧ್ಯತೆಯಿದೆ. ಈ ಮೊದಲು ಸೋಮವಾರವೇ ಸಂಪುಟ ಸಭೆಗೆ ನಿರ್ಧರಿಸಲಾಗಿತ್ತಾದರೂ, ಕಡೆಯ ಘಳಿಗೆಯಲ್ಲಿ ಸಂಪುಟ ಸಭೆ ಮುಂದೂಡಲಾಗಿದೆ. ಸಂಪುಟ ಸಭೆ ಬುಧವಾರ ಇಲ್ಲವೇ ಗುರುವಾರ ನಡೆಯುವ ಸಾಧ್ಯತೆ ಇದ್ದು, ಅಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಭೆಯಲ್ಲಿ ಕೇಂದ್ರ ಕೃಷಿ ಸಚಿವಾಲಯವು ಸಣ್ಣ ಹಾಗೂ ಮಧ್ಯಮ ಗಾತ್ರದ ಕೃಷಿಕರ ಸಮಸ್ಯೆ ಪರಿಹರಿಸಲು ಮೂರ್ನಾಲ್ಕು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಡಲಿದೆ. 

ಇದರಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಹೀಗೆ ಎರಡೂ ಮಾದರಿಯ ಪರಿಹಾರಗಳಿರಲಿವೆ. ಇವುಗಳಿಗೆ ದೊಡ್ಡ ಮೊತ್ತದ ಹಣ ಬೇಕಾಗುವುದರಿಂದ ಸಂಪುಟ ಸಭೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ. 

1 ಸಕಾಲಕ್ಕೆ ಕಂತು ಪಾವತಿಸುವ ರೈತರ ಬೆಳೆಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದು. ಇದಕ್ಕೆ ಸುಮಾರು 15000 ಕೋಟಿ ರು. ಬೇಕಾಗುತ್ತದೆ. 2 ಆಹಾರದ ಬೆಳೆಗಳಿಗೆ ರೈತರು ಪಡೆಯುವ ಬೆಳೆ ವಿಮೆಯ ಸಂಪೂರ್ಣ ಪ್ರೀಮಿಯಂ ಮನ್ನಾ ಮಾಡುವುದು. 3 ತೆಲಂಗಾಣ, ಒಡಿಶಾ ಮಾದರಿಯಲ್ಲಿ ರೈತರ ಖಾತೆಗೆ ನಿರ್ದಿಷ್ಟ ಹಣವನ್ನು ನೇರವಾಗಿ ಜಮೆ ಮಾಡುವುದು. ಮೂಲಗಳ ಪ್ರಕಾರ ಈ ಮೂರು ಆಯ್ಕೆಗಳು ಕೇಂದ್ರ ಸರ್ಕಾರದ ಮುಂದಿವೆ. ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಎರಡು ಕೊಡುಗೆಗಳನ್ನು ಪ್ಯಾಕೇಜ್ ರೂಪದಲ್ಲಿ ಕೇಂದ್ರ ಸರ್ಕಾರ ಘೋಷಿಸಬಹುದು ಎನ್ನಲಾಗಿದೆ. 

ತಜ್ಞರ ಪ್ರಕಾರ, ಈಗ ಘೋಷಿಸುವ ಯಾವುದೇ ಯೋಜನೆಯನ್ನು ಜಾರಿಗೆ ತರಲು ಲೋಕಸಭೆ ಚುನಾವಣೆಗೂ ಮುನ್ನ ಬಹಳ ಕಡಿಮೆ ಸಮಯವಿದೆ. ಹೀಗಾಗಿ ರಾಜಕೀಯ ಲಾಭ ಸಿಗಬೇಕು ಅಂದರೆ ಅತ್ಯಂತ ತ್ವರಿತವಾಗಿ ಕೃಷಿಕರ ನೆರವಿಗೆ ಬರುವ ಯೋಜನೆಗಳನ್ನು ಜಾರಿಗೊಳಿಸಬೇಕಾಗುತ್ತದೆ. ಕೃಷಿಕರು ಹೆಚ್ಚು ಸಂಕಷ್ಟದಲ್ಲಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಕೃಷಿಕರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವ ಒತ್ತಡ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿದೆ. ಕೃಷಿ ಸಚಿವ ರಾಧಾರಮಣ ಸಿಂಗ್ ಕೂಡ ಫೆ.೧ರ ಬಜೆಟ್‌ಗೂ ಮೊದಲೇ ಕೃಷಿ ಕ್ಷೇತ್ರಕ್ಕೆ ಪ್ಯಾಕೇಜ್ ಘೋಷಣೆಯಾಗಲಿದೆ ಎಂದು ಕೆಲ ದಿನಗಳ ಹಿಂದೆ ಸುಳಿವು ನೀಡಿದ್ದರು.