ನವದೆಹಲಿ[ಜ.04]: ಲೋಕಸಭೆ ಚುನಾವಣೆಗೂ ಮುನ್ನ ಮಂಡನೆಯಾಗಲಿರುವ ಕೇಂದ್ರ ಸರ್ಕಾರದ ಕೊನೆಯ ಬಜೆಟ್‌ನಲ್ಲಿ 5 ಲಕ್ಷ ರು. ಒಳಗೆ ಆದಾಯ ಹೊಂದಿರುವವರಿಗೆ ಕೇಂದ್ರ ಸರ್ಕಾರ ತೆರಿಗೆ ದರ ಕಡಿತ ಉಡುಗೊರೆ ನೀಡುವ ಸಾಧ್ಯತೆ ಇದೆ.

ಏಪ್ರಿಲ್‌- ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಫೆ.1ರಂದು ಪೂರ್ಣ ಪ್ರಮಾಣದ ಬಜೆಟ್‌ ಬದಲು ಲೇಖಾನುದಾನ ಮಂಡಿಸಲಿದ್ದಾರೆ. ಅದರಲ್ಲಿ ಶೇ.5ರ ತೆರಿಗೆ ಸ್ಲಾ್ಯಬ್‌ನಲ್ಲಿ ಬರುವವರಿಗೆ ತೆರಿಗೆ ಕಡಿತದ ಪ್ರಕಟಣೆಯನ್ನು ಹೊರಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಲ್ಲಿವರೆಗೂ ಮಂಡನೆಯಾಗಿರುವ ಪ್ರತಿ ಬಜೆಟ್‌ನಲ್ಲಿ ಮಧ್ಯಮವರ್ಗಕ್ಕೆ ಒಂದಲ್ಲಾ ಒಂದು ರೀತಿಯ ಕೊಡುಗೆ ನೀಡಿದ್ದೇವೆ ಎಂದು ಸ್ವತಃ ಜೇಟ್ಲಿ ಅವರೇ ಪತ್ರಿಕೆಯೊಂದಕ್ಕೆ ಸೂಚ್ಯವಾಗಿ ತಿಳಿಸಿದ್ದಾರೆ. ಆದರೆ ಅದು ಈ ಬಾರಿಯೂ ಮುಂದುವರಿಯುವುದೇ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ನಿರಾಕರಿಸಿದ್ದಾರೆ.

2018ರ ಏ.1ರಿಂದ ಡಿ.20ರವರೆಗೆ ಆದಾಯ ತೆರಿಗೆ ಸಂಗ್ರಹ 7.36 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.14ರಷ್ಟುಪ್ರಗತಿ ಕಂಡುಬಂದಿದೆ. ಇದೇ ವೇಳೆ, ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವವರ ಸಂಖ್ಯೆಯಲ್ಲಿ ಶೇ.67ರಷ್ಟುಜಿಗಿತ ಕಂಡುಬಂದಿದೆ. 3 ವರ್ಷಗಳ ಹಿಂದೆ 26.92 ಲಕ್ಷ ಮಂದಿ ತೆರಿಗೆ ರಿಟರ್ನ್‌ ಸಲ್ಲಿಸುತ್ತಿದ್ದರೆ, ಈಗ ಅಂಥವರ ಸಂಖ್ಯೆ 44.88 ಲಕ್ಷ ಕೋಟಿಗೆ ಏರಿಕೆಯಾಗಿದೆ. ತೆರಿಗೆ ಸಂಗ್ರಹ ಹೆಚ್ಚಳ, ತೆರಿಗೆದಾರರ ಸಂಖ್ಯೆ ಏರಿಕೆಯಿಂದಾಗಿ ಸರ್ಕಾರಕ್ಕೆ ತೆರಿಗೆ ಕಡಿತಗೊಳಿಸುವ ಅವಕಾಶ ಸಿಕ್ಕಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

2.5 ಲಕ್ಷ ರು.ನಿಂದ 5 ಲಕ್ಷ ರು.ವರೆಗೆ ಆದಾಯ ಹೊಂದಿರುವವರು ಶೇ.5ರ ತೆರಿಗೆ ಸ್ಲಾ್ಯಬ್‌ನಲ್ಲಿ ಬರುತ್ತಾರೆ. ಕಳೆದ ಹಣಕಾಸು ಸಾಲಿನಲ್ಲಿ 3 ಕೋಟಿ ಮಂದಿ ತೆರಿಗೆದಾರರಿದ್ದರು. ಆ ಪೈಕಿ ಹೆಚ್ಚಿನವರು ಶೇ.5ರ ಸ್ಲಾ್ಯಬ್‌ನವರು. ಈ ತೆರಿಗೆ ಸ್ತರದಿಂದ ಹೆಚ್ಚಿನ ಪ್ರಮಾಣದಲ್ಲೇನೂ ತೆರಿಗೆ ಬರುತ್ತಿಲ್ಲ.

ಸರ್ಕಾರ ಏನು ಮಾಡಬಹುದು?

1. ವಾರ್ಷಿಕ 2.5 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಆ ಮಿತಿಯನ್ನು ಈ ವರ್ಷ 3 ಲಕ್ಷ ರು.ಗೆ ಏರಿಸಬಹುದು.

2. ‘ಸ್ಟಾಂಡರ್ಡ್‌ ಡಿಡಕ್ಷನ್‌’ ಮೊತ್ತವನ್ನು 40 ಸಾವಿರದಿಂದ 50 ಸಾವಿರ ರು.ಗೆ ಹೆಚ್ಚಳ ಮಾಡಬಹುದು.