ನವದೆಹಲಿ :  ಅಯೋಧ್ಯೆ ರಾಮಮಂದಿರ ನಿರ್ಮಾಣ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ವಿಳಂಬ ಆಗುತ್ತಿರುವ ನಡುವೆಯೇ, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ‘ಪರ್ಯಾಯ’ ಹೆಜ್ಜೆ ಇರಿಸಿದೆ. ವಿವಾದಿತ ಜಮೀನಿನ ಸುತ್ತಮುತ್ತ ಇರುವ ವಿವಾದಿತವಲ್ಲದ ಸುಮಾರು 67 ಎಕರೆ ಜಮೀನನ್ನು ಅದರ ಮೂಲ ಮಾಲೀಕರಿಗೆ ಮರಳಿ ನೀಡಲು ಅನುಮತಿ ಕೊಡಬೇಕು ಎಂದು ಅರ್ಜಿ ಸಲ್ಲಿಸಿದೆ.

ಲೋಕಸಭೆ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣದ ಬಗ್ಗೆ ಏನಾದರೂ ಘೋಷಣೆ ಮಾಡಲೇಬೇಕು ಎಂಬ ಹಿಂದೂಪರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತರುತ್ತಿರುವಾಗಲೇ, ಕೇಂದ್ರ ಅನುಸರಿಸಿರುವ ಈ ನಡೆ ಮಹತ್ವ ಪಡೆದಿದೆ.

ಮಂಗಳವಾರ ಹೊಸದಾಗಿ ಅರ್ಜಿಯೊಂದನ್ನು ಸಲ್ಲಿಸಿರುವ ಕೇಂದ್ರ ಸರ್ಕಾರ, ‘2.77 ಎಕರೆ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಜಮೀನು ಸೇರಿದಂತೆ 67.703 ಎಕರೆ ಭೂಮಿಯನ್ನು 1991ರಲ್ಲಿ ಸರ್ಕಾರ ವಶಪಡಿಸಿಕೊಂಡಿತ್ತು. ಈ ಪೈಕಿ ಧ್ವಂಸಗೊಂಡ ಬಾಬ್ರಿ ಮಸೀದಿ ಇದ್ದ 0.313 ಎಕರೆ ಜಮೀನು ಹೊರತುಪಡಿಸಿ ಮಿಕ್ಕ 67.390 ಎಕರೆ ಜಮೀನನ್ನು ಮೂಲ ಮಾಲೀಕರಿಗೆ ಮರಳಿಸಬೇಕು’ ಎಂದು ಕೋರಿದೆ.

ಅಂದರೆ, ವಿವಾದಿತ ಬಾಬ್ರಿ ಮಸೀದಿ ಧ್ವಂಸಗೊಂಡ ಜಮೀನು ಹೊರತುಪಡಿಸಿ, ವಿವಾದಿತವಲ್ಲದ ಜಮೀನು ಮೂಲ ಮಾಲೀಕರಿಗೆ ಮರಳಿದರೆ ಅಲ್ಲಿ ಮಂದಿರ ಕಟ್ಟುವ ಯೋಚನೆ ಸರ್ಕಾರಕ್ಕೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಸರ್ಕಾರ ವಶಪಡಿಸಿಕೊಂಡಿದ್ದ 67 ಎಕರೆ ಜಮೀನಿನಲ್ಲಿ 42 ಎಕರೆಯು, ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಮೂಲ ದಾವೇದಾರರಾದ ರಾಮಜನ್ಮಭೂಮಿ ನ್ಯಾಸ್‌ ಟ್ರಸ್ಟ್‌ಗೆ ಸೇರಿದೆ. ಅಲ್ಲಿಯೇ ಈಗ ತಾತ್ಕಾಲಿಕ ರಾಮಲಲ್ಲಾ ಮಂದಿರವೂ ಇದೆ.

ಕೇಂದ್ರದ ಈ ಅರ್ಜಿಗೆ ರಾಜಕೀಯ ವಲಯದಲ್ಲಿ ಪರ-ವಿರೋಧಗಳು ವ್ಯಕ್ತವಾಗಿವೆ. ಬಿಜೆಪಿ, ವಿಎಚ್‌ಪಿ ಹಾಗೂ ಹಲವು ಹಿಂದೂಪರ ಸಂಘಟನೆಗಳು ಸರ್ಕಾರದ ನಿರ್ಧಾರ ಸ್ವಾಗತಿಸಿವೆ. ಆದರೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಸುಪ್ರೀಂ ಕೋರ್ಟೇ ಹೇಳಿತ್ತು:

‘ಅಯೋಧ್ಯಾ ಭೂಸ್ವಾಧೀನ ಕಾಯ್ದೆಯಡಿ ವಶಪಡಿಸಿಕೊಳ್ಳಲಾದ ವಿವಾದಿತ 0.313 ಎಕರೆ ಜಮೀನು ಹೊರತುಪಡಿಸಿದರೆ (ಧ್ವಂಸಗೊಂಡ ಬಾಬ್ರಿ ಮಸೀದಿ ಇದ್ದ ಜಾಗ) ಮಿಕ್ಕ ವಿವಾದರಹಿತ ಜಮೀನನ್ನು ಸರ್ಕಾರವು ಮೂಲ ಮಾಲೀಕರಿಗೆ ಮರಳಿಸಬಹುದು ಎಂದು 1994ರಲ್ಲಿ ಕಮಾಲ್‌ ಫಾರೂಖಿ ಪ್ರಕರಣದ ತೀರ್ಪು ನೀಡುವ ವೇಳೆ ಸರ್ವೋಚ್ಚ ನ್ಯಾಯಾಲಯವೇ ಹೇಳಿತ್ತು. ಆದರೆ 2003ರಲ್ಲಿ ಪುನಃ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಹೀಗಾಗಿ ಯಥಾಸ್ಥಿತಿ ಆಜ್ಞೆಯನ್ನು ತೆರವುಗೊಳಿಸಿ ಸುಮಾರು 67.390 ಎಕರೆ ಜಮೀನನ್ನು ಮೂಲ ಮಾಲೀಕರಿಗೆ ಮರಳಿಸಲು ಅನುಮತಿಸಬೇಕು’ ಎಂದು ಅರ್ಜಿಯಲ್ಲಿ ಕೇಂದ್ರ ಸರ್ಕಾರ ಕೋರಿದೆ.

‘ಜಮೀನನ್ನು ಮೂಲ ಯಜಮಾನರಿಗೆ ಮರಳಿಸಲು ತನ್ನ ಯಾವುದೇ ತಕರಾರು ಇಲ್ಲ. ತಮಗೆ ಈ ಜಮೀನು ಮರಳಿಸಿ ಎಂದು ರಾಮಜನ್ಮಭೂಮಿ ನ್ಯಾಸ್‌ ಟ್ರಸ್ಟ್‌ ಸೇರಿದಂತೆ ಅನೇಕ ಮೂಲ ಮಾಲೀಕರು ಸರ್ಕಾರಕ್ಕೆ ಕೋರಿದ್ದಾರೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

2010ರಲ್ಲಿ ಮಂದಿರ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿ ಒಟ್ಟಾರೆ ಜಮೀನಿನಲ್ಲಿ 2.77 ಎಕರೆ ಪ್ರದೇಶವನ್ನು ರಾಮಲಲ್ಲಾ ಮಂದಿರ, ನಿರ್ಮೋಹಿ ಅಖಾಡಾ ಹಾಗೂ ಸುನ್ನಿ ವಕ್ಫ್ ಮಂಡಳಿಗಳಿಗೆ ಹಂಚಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಈ ಪಕ್ಷಗಾರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಅದರ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ. ಇದರ ವಿಚಾರಣೆ ಪದೇ ಪದೇ ಮುಂದೂಡಿಕೆಯಾಗುತ್ತಿರುವುದು ವಿವಾದಕ್ಕೂ ಕಾರಣವಾಗಿದೆ.

ರಾಮಜನ್ಮಭೂಮಿ ನ್ಯಾಸ್‌ಗೆ ಸೇರಿದ ಜಮೀನು ವ್ಯಾಜ್ಯದಲ್ಲಿ ಇಲ್ಲ. ಹೀಗಾಗಿ ಜಮೀನು ಮರಳಿಸಿ ಎಂಬ ಸರ್ಕಾರದ ಕೋರಿಕೆ ಸರಿಯಾದ ದಿಶೆಯಲ್ಲಿದ್ದು, ಇದನ್ನು ನಾವು ಸ್ವಾಗತಿಸುತ್ತೇವೆ.

- ಅಲೋಕ್‌ ಕುಮಾರ್‌, ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ

ಕೇಂದ್ರ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ವಿವಾದಿತವಲ್ಲದ ಜಮೀನಿನಲ್ಲಿ ಮಂದಿರ ನಿರ್ಮಾಣ ಆರಂಭಿಸುವುದೇ ಸರ್ಕಾರದ ಉದ್ದೇಶವಾಗಿದೆ.

- ಯೋಗಿ ಆದಿತ್ಯನಾಥ್‌, ಉತ್ತರಪ್ರದೇಶ ಮುಖ್ಯಮಂತ್ರಿ

ಕೇಂದ್ರ ಸರ್ಕಾರ ಮಂದಿರ ನಿರ್ಮಾಣ ಮಾಡಲು ಪೂರ್ವಾನುಮತಿಯನ್ನು ಬಯಸುತ್ತದೆ. ಅದಕ್ಕೆಂದೇ ವಿವಾದಿತವಲ್ಲದ 67 ಎಕರೆ ಜಮೀನನ್ನು ಮೂಲ ಮಾಲೀಕರಿಗೆ ಮರಳಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ರಾಮಜನ್ಮಭೂಮಿ ನ್ಯಾಸ್‌ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ಟೆಂಟ್‌ನಲ್ಲಿ ರಾಮಲಲ್ಲಾನ ಮಂದಿರವಿದೆ. ಸುಪ್ರೀಂ ಕೋರ್ಟ್‌ನಲ್ಲಿರುವ ಮೂಲ ಅರ್ಜಿ ಇತ್ಯರ್ಥವಾದರೆ ಮಂದಿರದ ಉಳಿದ ಭಾಗ ನಿರ್ಮಿಸಲಾಗುತ್ತದೆ.

- ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಸಂಸದ

2003ರಲ್ಲಿ ಸುಪ್ರೀಂ ಕೋರ್ಟು, ಎಲ್ಲಿಯವರೆಗೆ ಮಂದಿರ ನಿರ್ಮಾಣ ವಿವಾದ ಇತ್ಯರ್ಥ ಆಗುವುದಿಲ್ಲವೋ ಅಲ್ಲಿಯವರೆಗೆ ಜಮೀನು ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೇಳಿದೆ. ಮೋದಿ ಸರ್ಕಾರಕ್ಕೆ ಇದು ಗೊತ್ತಿದೆ. ಆದರೂ ಸುಮ್ಮನೇ ಈಗ ಜಮೀನು ಹಸ್ತಾಂತರ ಕೋರಿ ಅರ್ಜಿ ಸಲ್ಲಿಸಿ, ಕೋರ್ಟನ್ನೇ ಸರ್ಕಾರ ಬೆದರಿಸುತ್ತಿದೆ. ಈ ಮೂಲಕ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರ ಹೊರಟಿದೆ.

- ಅಸಾದುದ್ದೀನ್‌ ಒವೈಸಿ, ಮಜ್ಲಿಸ್‌ ಪಕ್ಷದ ಸಂಸದ