ನಾಪತ್ತೆಯಾಗಿರುವ ಅನಿವಾಸಿ ಭಾರತೀಯ ಗಂಡಂದಿರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಇವರ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವ ಚಿಂತನೆಯಲ್ಲಿ ತೊಡಗಿದೆ.

ನವದೆಹಲಿ : ನಾಪತ್ತೆಯಾಗಿರುವ ಅನಿವಾಸಿ ಭಾರತೀಯ ಗಂಡಂದಿರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಇವರ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವ ಚಿಂತನೆಯಲ್ಲಿ ತೊಡಗಿದೆ.

ಅನೇಕ ಅನಿವಾಸಿ ಭಾರತೀಯ ಗಂಡಂದಿರು ತಮ್ಮ ಹೆಂಡಂದಿರನ್ನು ಭಾರತದಲ್ಲೇ ಬಿಟ್ಟು ಕೈಕೊಟ್ಟು ಹೋಗಿರುತ್ತಾರೆ. ಇಂಥವರು ನ್ಯಾಯಾಲಯದ ಸತತ ನೋಟಿಸ್‌ಗಳಿಗೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ, ಇಂಥವರ ಮೇಲೆ ಆಸ್ತಿ ಜಪ್ತಿ ಮಾಡಲು ಅನುವಾಗುವಂಥ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಈ ವಿಷಯ ತಿಳಿಸಿದರು. ಕೈಕೊಟ್ಟು ಹೋದ ಇಂಥ ಗಂಡಂದಿರನ್ನು ‘ಪರಾರಿಕೋರ’ ಎಂದು ಪರಿಗಣಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ.

ಈ ನಡುವೆ, ವಿದೇಶಾಂಗ ಇಲಾಖೆ ವೆಬ್‌ಸೈಟ್‌ನಲ್ಲೇ ಸಮನ್ಸ್‌ ಜಾರಿ ಮಾಡಿ, ಇಂಥ ಸಮನ್ಸ್‌ಗಳನ್ನು ಸಂಬಂಧಿತ ವ್ಯಕ್ತಿಗಳ ಕೈಗೆ ಕೊಟ್ಟಾಗಿದೆ ಎಂದು ಪರಿಗಣಿಸಲು ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ನಿಯಮಗಳಿಗೆ ತಿದ್ದುಪಡಿ ಅಗತ್ಯವಾಗಿದೆ. ಹೀಗಾಗಿ ತಿದ್ದುಪಡಿಗೂ ಮನವಿ ಮಾಡಲಾಗಿದೆ. ಈತನಕ ನೊಂದ ಹೆಂಡಂದಿರು ಸಂಬಂಧಿತ ರಾಯಭಾರ ಕಚೇರಿಗಳಿಗೆ ಗಂಡಂದಿರ ಬಗ್ಗೆ ಪತ್ರ ಬರೆಯುತ್ತಿದ್ದರು. ಬಳಿಕ ರಾಯಭಾರ ಕಚೇರಿಗಳು ಸಮನ್ಸ್‌ ಜಾರಿ ಮಾಡುತ್ತಿದ್ದವು.

2015ರಿಂದ 2017ರ ನವೆಂಬರ್‌ವರೆಗೆ ‘ಪರಾರಿ ಗಂಡಂದಿರ’ ಬಗ್ಗೆ ವಿದೇಶಾಂಗ ಇಲಾಖೆಗೆ 3,328 ದೂರುಗಳು ವಿದೇಶಾಂಗ ಇಲಾಖೆಗೆ ಬಂದಿವೆ.