ನವದೆಹಲಿ(ಜ.14): ಕಲ್ಲಿದ್ದಲು ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕೆಂದು ವಿಶೇಷ ಕೋರ್ಟ್ ನಿರ್ದೇಶಿಸಿದಂತೆ ಸಿಬಿಐ ಹಗರಣದ ಅಂತಿಮ ವರದಿಯನ್ನು ಸಲ್ಲಿಸಿದೆ.

ಸಾಕ್ಷಿದಾರ ಸುರೇಶ್ ಸಿಂಘಲ್ ಹೇಳಿಕೆಗಳ ಆಧಾರದಲ್ಲಿ ಸಿಬಿಐ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.

ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಹಾಗೂ ಮಾಜಿ ಕಲ್ಲಿದ್ದಲು ಸಹಾಯಕ ಸಚಿವ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಮರ್ಪಕವಾಗಿ ವರದಿಯನ್ನು ಸಲ್ಲಿಸಿಲ್ಲ ಎಂದು ಹಾಗೂ ಜ. 23ರೊಳಗೆ ಮತ್ತೆ ಸಲ್ಲಿಸಬೇಕೆಂದು ವಿಶೇಷ ನ್ಯಾ. ಭರತ್ ಪರಶರ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಸಿಬಿಐ ಸಲ್ಲಿಸಿದ ವರದಿಯಲ್ಲಿ ಸಾಕ್ಷ್ಯಗಳ ಪಟ್ಟಿ ಮತ್ತು ಅವರ ಹೇಳಿಕೆಗಳನ್ನು ರೆಕಾರ್ಡ್ ಮಾಡಿ ಸಲ್ಲಿಸಲಾಗಿದೆ. ಸಿಬಿಐ ವರದಿ ಸಲ್ಲಿಸಲು ತಡಮಾಡುತ್ತಿರುವ ಕಾರಣ ವಿಚಾರಣೆಯು ತಡವಾಗುತ್ತಿದೆ ಎಂದು ಕೋರ್ಟ್ ಕಿಡಿಕಾರಿದೆ.

ಕಲ್ಲಿದ್ದಲು ಹಗರಣ ಸಂಬಂಧ ಕಳೆದ ಏಪ್ರಿಲ್ 29ರಂದು ಪಟಿಯಾಲ ನ್ಯಾಯಾಲಯ ಜಿಂದಾಲ್, ಮಾಜಿ ಮುಖ್ಯಮಂತ್ರಿ ಮಧು ಖೋಡ, ಮಾಜಿ ಕಲ್ಲಿದ್ದಲು ರಾಜ್ಯಖಾತೆ ಸಚಿವ ನಾರಾಯಣ್ ರಾವ್ ಸೇರಿದಂತೆ 12 ಮಂದಿಯ ಮೇಲೆ ಚಾರ್ಜ್'ಶೀಟ್ ದಾಖಲಾಗಿತ್ತು.