ಕೊಲ್ಹಾಪುರ (ಸೆ.10): ಆಗಸ್ಟ್ 20, 2013ರಲ್ಲಿ ಪುಣೆಯ ಓಂಕಾರೇಶ್ವರ ದೇಗುಲದ ಬಳಿ ಹತ್ಯೆಯಾದ ವಿಚಾರವಾದಿ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣ ಕುರಿತು ಸುದೀರ್ಘ ತನಿಖೆ ನಡೆಸಿರುವ ಸಿಬಿಐ ಕೊಲ್ಹಾಪುರ ಕೋರ್ಟ್‌ಗೆ 40 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

ಇಎನ್​ಟಿ ಸ್ಪೆಷಲಿಸ್ಟ್, ಹಿಂದೂ ಜನಜಾಗೃತಿ ಸಮಿತಿ ಸದಸ್ಯ ವೀರೇಂದ್ರ ತಾವಡೆ ಪ್ರಕರಣದ ಪ್ರಮುಖ ಆರೋಪಿ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಜೂನ್ 10ರಂದು ಸಿಬಿಐ ವೀರೇಂದ್ರ ತಾವಡೆಯನ್ನು ಬಂಧಿಸಿತ್ತು.ಇನ್ನೂ ಈತನ ಜೊತೆಗೆ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್, ಇನ್ನಿಬ್ಬರು ಆರೋಪಿಗಳು. ಸದ್ಯ ಇವರಿಬ್ಬರು ತಲೆಮರೆಸಿಕೊಂಡಿದ್ದಾರೆ. 

ವೀರೇಂದ್ರ ತಾವಡೆ, ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ದಾಬೋಲ್ಕರ್ ಹತ್ಯೆಗೆ ಪ್ಲಾನ್ ಮಾಡಿದ್ದರು. ಮೂವರ ಮಧ್ಯೆ ಹಲವು ಮೇಲ್​ಗಳು ವಿನಿಮಯವಾಗಿವೆ. ಆ ಮೇಲ್​ಗಳಲ್ಲಿ ದಾಬೋಲ್ಕರ್​ರನ್ನು ಧರ್ಮದ್ರೋಹಿ ಎಂದು ಸಂಬೋಧಿಸಿರುವುದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ದಾಬೋಲ್ಕರ್ ಹತ್ಯೆಗಾಗಿ ಗನ್ ವ್ಯಾಪಾರಿಗಳನ್ನು ಸಂಪರ್ಕಿಸಿದ್ದರು. ಹಾಗೆ ಸಂಪರ್ಕಿಸಿದ್ದ ಒಬ್ಬ ಗನ್​ ವ್ಯಾಪಾರಿ ಮೂವರೂ ಆರೋಪಿಗಳನ್ನು ಗುರುತಿಸಿದ್ದಾನೆ. ಆದರೆ, ಆರೋಪಿಗಳನ್ನು ಗುರುತಿಸಿರುವ ಗನ್ ವ್ಯಾಪಾರಿ, ಆರೋಪಿಗಳಿಗೆ ಗನ್ ಕೊಟ್ಟಿದ್ದು ತಾನಲ್ಲ ಎಂದು ಹೇಳಿದ್ದಾನೆ.