ನವದೆಹಲಿ : ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ರಚನೆ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಬೇಕು ಹಾಗೂ ಪ್ರಾಧಿಕಾರದ ರಚನೆಯನ್ನು ವಿರೋಧಿಸಬೇಕು ಎಂಬ ತೀರ್ಮಾನಕ್ಕೆ ರಾಜ್ಯದ ಸರ್ವಪಕ್ಷಗಳ ಸಂಸದರು ಬಂದಿದ್ದಾರೆ. ನವದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ರಾತ್ರಿ ನಡೆದ ಸಂಸದರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. 

ಸಂಸತ್ತಿನಲ್ಲಿ ಕಾವೇರಿ ಪ್ರಾಧಿಕಾರ ರಚನೆಯ ಅಧಿಸೂಚನೆ ಬಗ್ಗೆ ಚರ್ಚೆ ಕೈಗೊಳ್ಳಲು ಪಕ್ಷಭೇದ ಮರೆತು ನೊಟೀಸ್ ನೀಡಬೇಕು. ಈ ಬಗ್ಗೆ ಚರ್ಚೆ ನಡೆದಾಗ ಒಗ್ಗಟ್ಟಿನಿಂದ ರಾಜ್ಯದ ನಿಲುವನ್ನು ವ್ಯಕ್ತಪಡಿಸಿ ಪ್ರಾಧಿಕಾರದ ರಚನೆಯನ್ನು ವಿರೋಧಿಸುವ ನಿಲುವು ಸಭೆಯಲ್ಲಿ ವ್ಯಕ್ತವಾಯಿತು. ಜೊತೆಗೆ ಸುಪ್ರೀಂ ಕೋರ್ಟ್‌ನಲ್ಲೂ ಕಾನೂನು ಹೋರಾಟದ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಯಿತು. ಆದರೆ, ಕಾವೇರಿ ನಿರ್ವಹಣಾ ಪ್ರಾಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸದಿರಲು ತೀರ್ಮಾನಿಸಲಾಯಿತು.

ರಾಜ್ಯಕ್ಕೆ ಸಂಕಷ್ಟ: ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾವೇರಿ ನಿರ್ವಹಣಾ ಪ್ರಾಧಿಕಾರದ ವಿಚಾರದಿಂದ ರಾಜ್ಯ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಹಕ್ಕಿನ ನೀರನ್ನು ನಾವು ನ್ಯಾಯಯುತವಾಗಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಧ್ವನಿ ಎತ್ತಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು. 

ಏತನ್ಮಧ್ಯೆ, ಕಾವೇರಿ ವಿವಾದ ಹಿನ್ನೆಲೆಯಲ್ಲಿ ಮತ್ತು ಪ್ರಾಧಿಕಾರದ ರಚನೆಯಿಂದ ಕರ್ನಾಟಕಕ್ಕೆ ಆಗಲಿರುವ ಹಾನಿಯ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಭೆಗೆ ಸುದೀರ್ಘವಾಗಿ ವಿವರಿಸಿದರು. ಕಾವೇರಿ ನದಿ ನೀರನ್ನು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ೧೪.೫ ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕರ್ನಾಟಕಕ್ಕೆ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ರಾಜ್ಯಕ್ಕೆ ೪೦ ಟಿಎಂಸಿ ನೀರು ನಷ್ಟವಾಗಿದೆ. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲಿ ಪ್ರಾಧಿಕಾರ ರಚನೆ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ ಅಂತಾರಾಜ್ಯ ಜಲ ವಿವಾದ ಕಾಯ್ದೆ ಪ್ರಕಾರ ಪ್ರಾಧಿಕಾರ ರಚನೆಯ ಅಧಿಕಾರ ಸಂಸತ್ತಿನದ್ದು ಎಂಬುದನ್ನು ದೇವೇಗೌಡ ಸಂಸದರಿಗೆ ಮನದಟ್ಟು ಮಾಡಿಕೊಟ್ಟರು.

ಬಿಜೆಪಿಯಿಂದಲೂ ಬೆಂಬಲ: ಸರ್ಕಾರದ ನಿಲುವನ್ನು ಬಿಜೆಪಿ ಕೂಡ ಬೆಂಬಲಿಸಿದ್ದು, ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕೇಂದ್ರ ಯೋಜನಾ ಮತ್ತು ಅಂಕಿ-ಅಂಶಗಳ ಸಚಿವ ಸದಾನಂದ ಗೌಡ ಭರವಸೆ ನೀಡಿದರು. ಇದೇ ವೇಳೆ, ಕಾವೇರಿ ವಿವಾದದ ಬಗ್ಗೆ ಯಾವ ನಡೆ ಇಡಬೇಕು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ರಾಜ್ಯದ ಸಂಸದರು ಕೋರಿದ್ದು, ಈ ಬಗೆಗಿನ ಟಿಪ್ಪಣಿಯನ್ನು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಕೇಂದ್ರದಲ್ಲಿ ಬಾಕಿ ಉಳಿದಿರುವ ವಿಷಯಗಳು ಮತ್ತು ಯೋಜನೆಗಳ ಬಗ್ಗೆ ಕೇಂದ್ರದ ಗಮನ ಸೆಳೆಯುವಂತೆಯೂ ಸಂಸದರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಸಭೆಯಲ್ಲಿ ಉಪಸ್ಥಿತರಿದ್ದ ಅಡ್ವೊಕೋಟ್ ಜನರಲ್ ಉದಯ್ ಹೊಳ್ಳ ಅವರು ಕಾನೂನು ಹೋರಾಟದ ವಿವಿಧ ಆಯಾಮದ ಮಾಹಿತಿ ನೀಡಿದರು.