ಮಂಡ್ಯ(ಅ. 07): ಕಾವೇರಿ ಕೊಳ್ಳದ ಪ್ರದೇಶಗಳಿಗೆ ಕೇಂದ್ರದ ತಾಂತ್ರಿಕ ತಂಡ ಭೇಟಿ ಕೊಟ್ಟು ಪರಿಸ್ಥಿತಿಯನ್ನ ಅವಲೋಕಿಸಿದೆ. ಬೆಳಗ್ಗೆ ಬೆಂಗಳೂರಿಂದ ಮದ್ದೂರಿಗೆ ಹೆಲಿಕಾಪ್ಟರ್’ನಲ್ಲಿ ಬಂದಿಳಿದ ಸಿಡಬ್ಲ್ಯೂಸಿ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಂಡ ಬರಿದಾದ ಕೊಳ್ಳ, ಕಾಲುವೆ, ಬೆಳೆ ಹಾಗೂ ಜಲಕ್ಷಾಮದ ಸಾಕ್ಷಾತ್ ಕಂಡಿದ್ದಾರೆ. ಬೆಳಗ್ಗೆ ವಿಧಾನಸೌಧದಿಂದ ತೆರಳಿದ ತಂಡ ವಾಸ್ತವ ಸ್ಥಿತಿಯನ್ನ ಅರಿಯುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿತು. ಮಂಡ್ಯ-ಮದ್ದೂರು ಸುತ್ತಲಿನ ಪ್ರದೇಶಗಳ ವೀಕ್ಷಣೆ ಬಳಿಕ ಮಾತಾಡಿದ ಜಿ.ಎಸ್.ಝಾ, ವಸ್ತುಸ್ಥಿತಿಗೆ ಅನುಗುಣವಾಗಿ ಸುಪ್ರೀಂಕೋರ್ಟ್’ಗೆ ವರದಿ ಸಲ್ಲಿಸುವುದಾಗಿ ಹೇಳಿದರು.
ಬೆಳಗ್ಗೆ ಮತ್ತು ಮಧ್ಯಾಹ್ನ ದೊಡ್ಡರಸಿನಕೆರೆ, ಮಾದರಹಳ್ಳಿಕೆರೆ, ಮಳವಳ್ಳಿ ತಾಲೂಕಿನ ಶೆಟ್ಟಹಳ್ಳಿ, ಕಿರುಗಾವಲು, ಮಳವಳ್ಳಿಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಕೇಂದ್ರದ ತಂಡ ಭೇಟಿ ನೀಡಿತು. ಸಂಜೆ 6 ಗಂಟೆ ಬಳಿಕ ಕೆಆರ್ಎಸ್ ಡ್ಯಾಮಿನ ಕಡೆಗೆ ಅಧ್ಯಯನ ತಂಡ ತೆರಳಿ ನೀರಿನ ಮಟ್ಟ ಹಾಗೂ ಒಳಹರಿವು ಹಾಗೂ ಹೊರಹರಿವನ್ನ ಪರಿಶೀಲಿಸಿತು. ಇನ್ನು, ಬೆಳಗ್ಗೆ ವಿಧಾನಸೌಧದಲ್ಲಿ ತಾಂತ್ರಿಕ ತಂಡವನ್ನ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಭೇಟಿಯಾಗಿದರು. ಈ ಸಂದರ್ಭದಲ್ಲಿ ರಾಜ್ಯದ ನೀರಿನ ಕೊರತೆಯನ್ನ ಸವಿವರವಾಗಿ ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ಯಾವುದೇ ಕಾರಣಕ್ಕೂ ಮತ್ತೆ ಕಾವೇರಿ ನೀರು ಬಿಡುವಂತೆ ಹೇಳಬೇಡಿ ಎಂದೂ ಕೇಂದ್ರದ ಅಧ್ಯಯನ ತಂಡಕ್ಕೆ ಮನವಿ ಮಾಡಿದರೆನ್ನಲಾಗಿದೆ.
ರಮ್ಯಾ ಪ್ರತ್ಯಕ್ಷ.!
ಈ ಮಧ್ಯೆ, ಇಷ್ಟು ದಿನ ಕಾವೇರಿ ಹೋರಾಟದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಮಾಜಿ ಸಂಸದೆ ರಮ್ಯಾ ಇವತ್ತು ಮದ್ದೂರಿನಲ್ಲಿ ದಿಢೀರ್ ಕಾಣಿಸಿಕೊಂಡ್ರು. ಕೇಂದ್ರ ತಾಂತ್ರಿಕ ತಂಡ ಭೇಟಿಯಾದ ಕಾಂಗ್ರೆಸ್ ನಾಯಕಿ, ಜಿಲ್ಲೆಯ ವಾಸ್ತವ ಸ್ಥಿತಿಯ ವಿವರಣೆ ನೀಡಿದರು.
- ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್
