ನವದೆಹಲಿ (ಸೆ.18): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಾಳೆ ಕಾವೇರಿ ಮೇಲುಸ್ತುವಾರಿ ಸಮಿತಿಯ ಮಹತ್ವದ ಸಭೆ ನಡೆಯಲಿದೆ. 

ಕಾವೇರಿ ಕೊಳ್ಳದ ಬರ ಪರಿಸ್ಥಿತಿ, ಅಂತರ್ಜಲ ಸ್ಥಿತಿ, ಜಲಾಶಯಗಳಲ್ಲಿ ನೀರಿನ ಸ್ಥಿತಿ ಮತ್ತು ಮಳೆ ಪ್ರಮಾಣದೊಂದಿಗೆ ಸಮಿತಿಯ ಮುಂದೆ ವಾದ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಇದರ ಜತೆಗೆ ತಮಿಳುನಾಡಿನಲ್ಲಿರುವ ವಾಸ್ತವ ಪರಿಸ್ಥಿತಿಯನ್ನೂ ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡಿಕೊಟ್ಟು ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕ ಎದುರಿಸುವ ಸಂಕಷ್ಟವನ್ನು ತಿಳಿಸಲು ತೀರ್ಮಾನಿಸಲಾಗಿದೆ.

ಸೆ.20ರವರೆಗೆ ತಮಿಳನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಈ ಹಿಂದೆ ಕರ್ನಾಟಕಕ್ಕೆ ಆದೇಶಿಸಿದ್ದ ಸುಪ್ರೀಂಕೋರ್ಟ್‌, ನಾಳೆ ಮತ್ತೆ ಈ ಕುರಿತ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಹೀಗಾಗಿ ನಾಳೆ ನಡೆಯಲಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯ ತೀರ್ಮಾನ ಕರ್ನಾಟಕದ ಪಾಲಿಗೆ ಮಹತ್ವದ್ದಾಗಿದೆ.