ತಪ್ಪು ಮಾಹಿತಿ ವಿರುದ್ಧ ಸೂಕ್ತ ದಾಖಲೆ ಸಲ್ಲಿಸಲು ರಾಜ್ಯದಿಂದ ಸಿದ್ಧತೆ

ಬೆಂಗಳೂರು (ಅ.10): ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆ​ಯಲ್ಲಿ ಕರ್ನಾಟಕದ ತೀವ್ರ ಒತ್ತಾಯದ ಮೇರೆಗೆ ಸುಪ್ರೀಂಕೋರ್ಟ್‌ ನೇಮಿಸಿದ ಕೇಂದ್ರ ಉನ್ನತ ತಾಂತ್ರಿಕ ತಂಡ ರಾಜ್ಯದ ಪರಿಸ್ಥಿತಿ ಅಧ್ಯಯನ ಮುಗಿಸಿ ಭಾನುವಾರ ತಮಿಳುನಾಡು ಅಧ್ಯಯನ ಆರಂಭಿಸಿದೆ. ಈ ವೇಳೆ ತಾಂತ್ರಿಕ ತಂಡಕ್ಕೆ ತಮಿಳುನಾಡು ಸರ್ಕಾರ ನೀಡಬಹುದಾದ ಅಂಕಿ ಅಂಶಗಳು ಹಾಗೂ ಮಾಹಿತಿ ಮೇಲೆ ಕರ್ನಾಟಕ ಹದ್ದಿನ ಕಣ್ಣಿಟ್ಟಿದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌.ಝಾ ನೇತೃತ್ವದ ತಂಡ ಭಾನುವಾರದಿಂದ ಎರಡು ದಿನಗಳ ಕಾಲ ತಮಿಳುನಾಡಿನ ಪರಿಸ್ಥಿತಿಯ ಬಗ್ಗೆ ಅಧ್ಯಯನ ಕೈಗೊಂಡಿದ್ದು, ಮೊದಲ ದಿನ ಸೇಲಂ ಜಿಲ್ಲೆಯ ಮೆಟ್ಟೂರು ಸುತ್ತಮುತ್ತ ಸುಮಾರು 150 ಕಿ.ಮೀ.ಗಳಷ್ಟುಅಚ್ಚುಕಟ್ಟು ಪ್ರದೇಶದ ಪ್ರವಾಸ ನಡೆಸಿತು. ಅಲ್ಲಿನ ಜಲಾಶಯದ ನೀರಿನ ಮಟ್ಟ, ಹರಿದು ಬರುವ ನೀರಿನ ಪ್ರಮಾಣ ಮತ್ತು ಹೊರ ಹರಿವು ಪ್ರಮಾಣಗಳನ್ನು ತಂಡದ ಸದಸ್ಯರು ವೀಕ್ಷಿಸಿದ್ದಾರೆ. ತಮಿಳುನಾಡು ಸರ್ಕಾರವೂ ತನ್ನಲ್ಲಿನ ಅಂಕಿ ಅಂಶ, ನೀರಿನ ಪ್ರಮಾಣ, ಬೆಳೆ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲಾರಂಭಿಸಿದೆ. ಹಾಗೆಯೇ ರೈತ ಮುಖಂಡರು ಮತ್ತು ಸ್ಥಳೀಯ ಸಂಘಟನೆ, ಪಕ್ಷಗಳು ತಮ್ಮದೇ ದೂರು ದುಮ್ಮಾನಗಳನ್ನೂ ಸಲ್ಲಿಸಿವೆ. ಈ ಹಂತದಲ್ಲಿ ತಮಿಳುನಾಡಿನಲ್ಲಿ ಇಲ್ಲದ ಸಂಕಷ್ಟಗಳ ಮಾಹಿತಿ ನುಸುಳುವ ಬಗ್ಗೆ ಕರ್ನಾಟಕ ಎಚ್ಚರ ವಹಿಸಿದೆ ಎಂದು ರಾಜ್ಯ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ಆಯೋಗದ ಸದಸ್ಯರಾದ ಎಸ್‌.ಮಸೂದ್‌ ಹುಸೇನ್‌, ಆರ್‌.ಕೆ.ಗುಪ್ತಾ ಹಾಗೂ ಉಭಯ ರಾಜ್ಯಗಳ ಮುಖ್ಯ ಎಂಜಿನಿಯರ್‌ಗಳು ತಂಡದಲ್ಲಿದ್ದಾರೆ. ಜತೆಗೆ ರಾಜ್ಯದ ಜಲಸಂಪನ್ಮೂಲ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಕಾವೇರಿ ನಿರಾವರಿ ನಿಗಮದ ಎಂ.ಡಿ.ಚಿಕ್ಕರಾಯಪ್ಪ ಮತ್ತು ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ಇದ್ದಾರೆ. ಇವರು ತಮಿಳುನಾಡು ನೀಡುವ ಮಾಹಿತಿಯನ್ನು ರಾಜ್ಯಕ್ಕೆ ರವಾನಿ ಸುತ್ತಿದ್ದಾರೆ. ಇದನ್ನಾಧರಿಸಿ ರಾಜ್ಯದ ಜಲಸಂಪನ್ಮೂಲ ಹಿ​ರಿ​ಯ ಅಧಿಕಾರಿಗಳು ಮತ್ತು ಕಾವೇರಿ ನೀರಾವರಿ ನಿಗಮ​ದ ಅಧಿಕಾರಿಗಳು ಹಾಗೂ ಕಾನೂನು ವಿಭಾಗದ ಅಧಿಕಾ​ರಿಗಳು ತಮಿಳುನಾಡಿನ ಮಾಹಿತಿ​ ಪರಿಶೀಲಿಸು​ತ್ತಿ​ದ್ದಾ​ರೆ.

ಪರಿಸ್ಥಿತಿ ತುಲನೆ ನಡೆಯುತ್ತಿದೆ: ತಮಿಳುನಾಡಿನಲ್ಲಿ 28.17ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ 15ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಾಂಬಾ ಬೆಳೆ ಬೆಳೆಯಲಾಗಿದೆ. ಈ ಬೆಳೆ ಒಣಗಿ ನಾಶವಾಗುವ ಲಕ್ಷಣಗಳಿಲ್ಲ ಎನ್ನುವ ಮಾಹಿತಿ ಕರ್ನಾಟಕದ ಅಧಿಕಾರಿಗಳಿಗೆ ಸಿಕ್ಕಿದೆ. ಅದೇ ಕರ್ನಾಟಕದಲ್ಲಿ 18.85ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ 6ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆಯಾದರೂ, ಅದರಲ್ಲಿ 2ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಒಣಗಿ ನಾಶದ ಅಂಚಿನಲ್ಲಿದೆ. ಹಾಗೆಯೇ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳ ನೀರಿನ ಮಟ್ಟನೆಲಕಚ್ಚಿದೆ. ಆದರೆ ತಮಿಳುನಾಡಿನ ಪರಿಸ್ಥಿತಿ ಭಿನ್ನ. ರಾಜ್ಯದಿಂದ ನೀರುವ ಹರಿಸಿರುವುದರಿಂದ ಅಲ್ಲಿನ ಬೆಳೆಗಳಿಗೆ ಸಾಕಾಗುಷ್ಟುನೀರು ಸದ್ಯ ಸಂಗ್ರಹವಿದೆ.

ಇನ್ನು ಕಳೆದ ಎರಡು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಸುರಿದ ಭಾರೀ ಮಳೆಯಿಂದ ಅಂತರ್‌ಜಲ ಸಮೃದ್ಧವಾಗಿದೆ. ಆದರೆ ಕರ್ನಾಟಕದಲ್ಲಿ ಅಂತರ್ಜಲ ನೆಲಕಚ್ಚಿದೆ. ಹೀಗಾಗಿ ಅಂತರ್ಜಲದ ಆಧಾರದಲ್ಲಿ ಬಿತ್ತನೆ ಮಾಡಲಾಗದ ಸ್ಥಿತಿ ಇದೆ ಎಂಬ ಮಾಹಿತಿಗಳು ಕರ್ನಾಟಕದ ಅಧಿಕಾರಿಗಳಿಗೆ ಗೊತ್ತಿದೆ. ಇದನ್ನು ಕೇಂದ್ರ ತಂಡಕ್ಕೂ ಮನವರಿಕೆ ಮಾಡಲಾಗಿದೆ. ಹೀಗಿರವಾಗ ಕೇಂದ್ರಕ್ಕೆ ತಮಿಳುನಾಡಿನಿಂದ ತಪ್ಪು ಮಾಹಿತಿ ಹೋದರೆ ಆಕ್ಷೇಪ ಸಿದ್ಧಪಡಿಸಿ ತಂಡಕ್ಕೆ ಸಲ್ಲಿಸಲು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಅಗತ್ಯವಾದರೆ ಆಕ್ಷೇಪ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಕೇಂದ್ರ ತಾಂತ್ರಿಕ ಉನ್ನತ ತಂಡಕ್ಕೆ ಸಲ್ಲಿಸಲಾಗುತ್ತಿದೆ. (ಕನ್ನಡಪ್ರಭ)