ಬೆಂಗಳೂರು (ಸೆ.20): ಕಾವೇರಿ ನೀರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದರೆ ಇತ್ತ ಬೆಂಗಳೂರಿಗರ ಎದೆಯಲ್ಲಿ ಡವಡವ ಶುರುವಾಗಿದೆ. ಇದಕ್ಕೆ ಕಾರಣ ಕೂಡ ಇದೆ. ಕಾವೇರಿ ಕೊಳದ ನಾಲ್ಕೂ ಡ್ಯಾಂಗಳಲ್ಲಿ ಇರುವುದು ಕೇವಲ 26.17 ಟಿಎಂಸಿ ನೀರು. ನಾಳೆಯಿಂದ 10 ದಿನ ಮತ್ತೆ 2.59 ಟಿಎಂಸಿ ನೀರು ಬಿಡಬೇಕು. ಮುಂದಿನ 10 ತಿಂಗಳಲ್ಲಿ 3 ಟಿಎಂಸಿ ನೀರು ಆವಿಯಾಗುತ್ತದೆ. ಆಗ ಉಳಿಯುವುದು 20.58 ಟಿಎಂಸಿ ನೀರು ಮಾತ್ರ.

ನೀರಿನ ಅಭಾವ ಕೇವಲ ಬೆಂಗಳೂರಿಗಷ್ಟೇ ಅಲ್ಲ, ಮೈಸೂರು, ಮಂಡ್ಯ, ಚಾಮರಾಜನಗರ ಜನರಿಗೂ ನೀರು ಬೇಕು. ಆದರೆ ಎಲ್ಲರಿಗೂ ಅಗತ್ಯಕ್ಕೆ ತಕ್ಕಷ್ಟು ಒದಗಿಸಲು ನೀರಿನ ಅಭಾವವಾಗುತ್ತದೆ. ಒಟ್ಟು 28 ಟಿಎಂಸಿ ನೀರು ಬೇಕು. ಆದರೆ ಇರುವುದು 20.58 ಟಿಎಂಸಿ ನೀರು ಮಾತ್ರ. ಹಾಗಾಗಿ ನವೆಂಬರ್ ಅಂತ್ಯದಲ್ಲೇ ನಗರ ಭಾಗಗಳಲ್ಲಿ ನೀರಿನ ಬರ ಶುರುವಾಗುತ್ತದೆ. ಈಗ 2 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ನವೆಂಬರ್ ಅಂತ್ಯದಲ್ಲಿ 4 ದಿನಗಳಿಗೊಮ್ಮೆ ನೀರು ಬಿಡುವ ಪರಿಸ್ಥಿತಿ ಎದುರಾಗಬಹುದು. ಬೆಂಗಳೂರಿನ ಕಾಲು ಭಾಗದಷ್ಟು ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಅನಿವಾರ್ಯವಾಗಲಿದೆ.

ಕಾವೇರಿ ಕೊಳ್ಳದ ಡ್ಯಾಂಗಳ ಸ್ಥಿತಿ ಹೇಗಿದೆ? ಒಂದು ಸಂಕ್ಷಿಪ್ತ ನೋಟ 

ಡ್ಯಾಂ ನೀರು ಎಷ್ಟಿದೆ? ಕಳೆದ ವರ್ಷ

ಕೆಆರ್’ಎಸ್ 8.31 ಟಿಎಂಸಿ 23.43 ಟಿಎಂಸಿ

ಹೇಮಾವತಿ 6.32 ಟಿಎಂಸಿ 17.50 ಟಿಎಂಸಿ

ಹಾರಂಗಿ 3.95 ಟಿಎಂಸಿ 5.17 ಟಿಎಂಸಿ

ಕಬಿನಿ 7.59ಟಿಎಂಸಿ 10.22ಟಿಎಂಸಿ

ಒಟ್ಟು 26.17 ಟಿಎಂಸಿ 56.92 ಟಿಎಂಸಿ