ಬೆಂಗಳೂರು(ಸೆ.13): ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಆದೇಶ ಮಾರ್ಪಾಡಿನಲ್ಲಿಯೂ ಹೆಚ್ಚುವರಿ ನೀರು ಬಿಡುವಂತೆ ಆದೇಶ ಮಾಡಿರುವುದರಿಂದ ಮುಂದೇನು ಮಾಡಬೇಕು ಎನ್ನುವ ಜಿಜ್ಞಾಸೆಯಲ್ಲಿ ಮುಳುಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ತುರ್ತು ಸಂಪುಟ ಸಭೆ ಕರೆದಿದ್ದು, ಪ್ರಧಾನಿ ಭೇಟಿಗೆ ಸಮಯ ಕೇಳುವುದು ಹಾಗೂ ಮೇಲುಸ್ತುವಾರಿ ಸಮಿತಿ ಸಭೆ ಬೇಗ ಕರೆಯುವಂತೆ ಒತ್ತಾಯ ಮಾಡುವ ಸಾಧ್ಯತೆ ಇದೆ.

ಸುಪ್ರೀಂ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ಆಘಾತ: ತುರ್ತು ಸಂಪುಟ ಸಭೆ ಕರೆದ ಸಿಎಂ ಸಿದ್ದರಾಮಯ್ಯ

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ಆದೇಶ ರಾಜ್ಯ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಪರಿಣಾಮ ರಾಜ್ಯದಲ್ಲಿ ಪ್ರತಿಭಟನೆ ಹಿಂಸಾರೂಪ ತಾಳಿದ್ದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ. ಸದ್ಯದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಅಂತ ಚರ್ಚಿಸಲು ಸಿಎಂ ಸಿದ್ರಾಮಯ್ಯ ಇಂದು ಬೆಳಿಗ್ಗೆ ಕಾಂಗ್ರೆಸ್​​ನ ಹಿರಿಯ ಮುಖಂಡರ ಸಭೆ ಕರೆದಿದ್ದಾರೆ.

ಅಲ್ದೆ, ಸರ್ಕಾರದ ನಿರ್ಧಾರ ಏನಿರಬೇಕು ಎನ್ನುವುದರ ಕುರಿತು ಚರ್ಚಿಸಲು ತುರ್ತು ಸಂಪುಟ ಸಭೆ ಕರೆದಿದ್ದಾರೆ. ಬೆಳಗ್ಗೆ ನಡೆಯುವ ಕ್ಯಾಬಿನೆಟ್ ಮೀಟ್​ನಲ್ಲಿ ಸುಪ್ರೀಂಕೋರ್ಟ್​ ಆದೇಶ ಪಾಲನೆ ಜೊತೆಗೆ ಶಾಂತಿ ಕಾಪಾಡಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಅಂತ ಸಭೆಯಲ್ಲಿ ಚರ್ಚೆಯಾಗಲಿದೆ.

ಈಗ ರಾಜ್ಯಕ್ಕೆ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಶೀಘ್ರವೇ ಮಧ್ಯಸ್ಥಿಕೆ ವಹಿಸಬೇಕೆಂದು ಅವರ ಭೇಟಿಗೆ ಸಮಯ ಕೇಳುವ ಸಾಧ್ಯತೆ ಇದೆ.

ಸೆಪ್ಟೆಂಬರ್​ 5ರಂದು 13 ಟಿಎಂಸಿ ನೀರು ಬಿಡಲು ಸೂಚನೆ: ಹೆಚ್ಚುವರಿಯಾಗಿ 30 ಕ್ಯೂಸೆಕ್ಸ್ ನೀರು ಬಿಡಲು ಸೂಚನೆ

ಸೆಪ್ಟೆಂಬರ್ 5ರಂದು ಕೊಟ್ಟ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್​ ಸುಮಾರು 13 ಟಿಎಂಸಿ ನೀರು ಬಿಡಲು ಸೂಚಿಸಿದ್ದರು. ಮಾರ್ಪಾಡು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂಬಂಧ ಮತ್ತೆ 30 ಸಾವಿರ ಕ್ಯೂಸೆಕ್ ಹೆಚ್ಚುವರಿಯಾಗಿ ಬಿಡಲು ಸರ್ವೋಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠ ಸೂಚಿಸಿದೆ. ಒಟ್ನಲ್ಲಿ ಕಾವೇರಿ ಹೋರಾಟ 1991ರ ಹೋರಾಟವನ್ನ ಮತ್ತೆ ನೆನಪಿಸುತ್ತಿದೆ. ಅದ್ರೆ, ಅಂದಿನ ಸಿಎಂ ಬಂಗಾರಪ್ಪ ರೀತಿ ಇಂದಿನ ಸಿಎಂ ದಿಟ್ಟ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುವುದೇ ಮಿಲಿಯನ್ ಡಾಲರ್ ಪ್ರಶ್ನೆ.