ಉಪಚುನಾವಣೆ ಸಮರ ಜಾತಿ ರಾಜಕೀಯದಲ್ಲಿ ಮಿಂದೇಳುತ್ತಿದೆ. ನಡೆಯುತ್ತಿರುವ ಚುನಾವಣೆ ಎರಡು ಕ್ಷೇತ್ರಗಳಿಗಷ್ಟೇ ಆದರೂ, ಕಾಂಗ್ರೆಸ್ ಮತ್ತು ಬಿಜೆಪಿ, ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಈ ಜಾತಿ ರಾಜಕೀಯದ ಲೆಕ್ಕಾಚಾರವನ್ನ ಬಿಡೋಕೂ ಆಗಲ್ಲ. ಈಗ ನಂಜನಗೂಡು ಕ್ಷೇತ್ರವನ್ನೇ ತೆಗೆದುಕೊಳ್ಳಿ. ಅದು ಶ್ರೀನಿವಾಸ್ ಪ್ರಸಾದ್​ಗೆ ಪ್ರತಿಷ್ಠೆಯ ಕ್ಷೇತ್ರ. ಕಾಂಗ್ರೆಸ್​'ಗೆ, ತಮಗೆ ತಿರುಗಿಬಿದ್ದ ಶ್ರೀನಿವಾಸ್ ಪ್ರಸಾದ್​'ರನ್ನು ಸೋಲಿಸುವ ಉಮೇದು. ಅದಕ್ಕಾಗಿ ಜೆಡಿಎಸ್​'ನಲ್ಲಿದ್ದ ಕಳಲೆ ಕೃಷ್ಣಮೂರ್ತಿಯನ್ನು ಕಾಂಗ್ರೆಸ್'​ಗೆ ಕರೆತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಮತದಾರರನ್ನು ಗೆಲ್ಲಲು ಜಾತಿಗೊಬ್ಬ ಲೀಡರ್ ಇದ್ದಾರೆ.

ಮೈಸೂರು(ಮಾ.31): ಉಪಚುನಾವಣೆ ಸಮರ ಜಾತಿ ರಾಜಕೀಯದಲ್ಲಿ ಮಿಂದೇಳುತ್ತಿದೆ. ನಡೆಯುತ್ತಿರುವ ಚುನಾವಣೆ ಎರಡು ಕ್ಷೇತ್ರಗಳಿಗಷ್ಟೇ ಆದರೂ, ಕಾಂಗ್ರೆಸ್ ಮತ್ತು ಬಿಜೆಪಿ, ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಈ ಜಾತಿ ರಾಜಕೀಯದ ಲೆಕ್ಕಾಚಾರವನ್ನ ಬಿಡೋಕೂ ಆಗಲ್ಲ. ಈಗ ನಂಜನಗೂಡು ಕ್ಷೇತ್ರವನ್ನೇ ತೆಗೆದುಕೊಳ್ಳಿ. ಅದು ಶ್ರೀನಿವಾಸ್ ಪ್ರಸಾದ್​ಗೆ ಪ್ರತಿಷ್ಠೆಯ ಕ್ಷೇತ್ರ. ಕಾಂಗ್ರೆಸ್​'ಗೆ, ತಮಗೆ ತಿರುಗಿಬಿದ್ದ ಶ್ರೀನಿವಾಸ್ ಪ್ರಸಾದ್​'ರನ್ನು ಸೋಲಿಸುವ ಉಮೇದು. ಅದಕ್ಕಾಗಿ ಜೆಡಿಎಸ್​'ನಲ್ಲಿದ್ದ ಕಳಲೆ ಕೃಷ್ಣಮೂರ್ತಿಯನ್ನು ಕಾಂಗ್ರೆಸ್'​ಗೆ ಕರೆತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಮತದಾರರನ್ನು ಗೆಲ್ಲಲು ಜಾತಿಗೊಬ್ಬ ಲೀಡರ್ ಇದ್ದಾರೆ.

ನಂಜನಗೂಡು: ವೀರಶೈವ - 50 ಸಾವಿರ ಮತಗಳು

ನಂಜನಗೂಡಿನಲ್ಲಿ 50 ಸಾವಿರ ಲಿಂಗಾಯತ ಮತಗಳಿವೆ. ಲಿಂಗಾಯತ ಮತಗಳಿಗಾಗಿ ಬಿಜೆಪಿಯಿಂದ ಖುದ್ದು ಯಡಿಯೂರಪ್ಪನವರೇ ಇದ್ದಾರೆ. ಜೊತೆಗೆ ಸೋಮಣ್ಣ ಮತ್ತು ರೇಣುಕಾಚಾರ್ಯ ಪ್ರಚಾರ ಮಾಡುತ್ತಿದ್ದಾರೆ.ಕಾಂಗ್ರೆಸ್​ನಿಂದ ಶಾಮನೂರು ಶಿವಂಕರಪ್ಪ ಮತ್ತವರ ಪುತ್ರ ಸಚಿವ ಮಲ್ಲಿಕಾರ್ಜುನ್ ಓಡಾಡುತ್ತಿದ್ದಾರೆ.

ನಂಜನಗೂಡು: ದಲಿತರು - 50 ಸಾವಿರ

ದಲಿತರ ವೋಟುಗಳ ಸಂಖ್ಯೆ 50 ಸಾವಿರ ಇದೆ. ಬಿಜೆಪಿಗೆ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್​ರದ್ದೇ ದೊಡ್ಡ ಬಲ. ಜೊತೆಗೆ ಡಿ.ಎಸ್. ವೀರಯ್ಯ, ರಮೇಶ್ ಜಿಗಜಿಣಗಿ ಮತ್ತು ಇತ್ತೀಚೆಗೆ ಬಿಜೆಪಿ ಸೇರಿದ ಕುಮಾರ್ ಬಂಗಾರಪ್ಪ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್​ಗೆ ಹೆಚ್.ಸಿ. ಮಹದೇವಪ್ಪ, ಚಾಮರಾಜನಗರ ಸಂಸದ ಧ್ರುವನಾರಾಯಣ್, ಸಚಿವ ಆಂಜನೇಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುನಿಯಪ್ಪ, ಉಮಾಶ್ರೀ ಮೊದಲಾದವರ ದಂಡೇ ಇದೆ.

ನಂಜನಗೂಡು: ಕುರುಬರು - 15 ಸಾವಿರ

ಕುರುಬರ 15 ಸಾವಿರ ವೋಟಿಗಾಗಿ ಬಿಜೆಪಿಯಿಂದ ಈಶ್ವರಪ್ಪ ಮತ್ತು ಕಾಂಗ್ರೆಸ್'​ನಿಂದ ಸಿಎಂ ಸಿದ್ದರಾಮಯ್ಯ ಹೋರಾಡುತ್ತಿದ್ದಾರೆ.

ನಂಜನಗೂಡು: ನಾಯಕ - 28 ಸಾವಿರ

28 ಸಾವಿರ ಮತದಾರರಿರುವ ನಾಯಕರ ವೋಟಿಗಾಗಿ ಬಿಜೆಪಿ ಶ್ರೀರಾಮುಲು ನೇತೃತ್ವದಲ್ಲಿ ಕಣಕ್ಕಿಳಿದಿದೆ. ಕಾಂಗ್ರೆಸ್, ನಾಯಕ ಜನಾಂಗದವರ ಮತ ಸೆಳೆಯರು ಸತೀಶ್ ಜಾರಕಿಹೊಳಿ ಮತ್ತು ಬಿ.ವಿ. ನಾಯಕ್ ಅವರನ್ನು ಮತಬೇಟೆಗೆ ಬಿಟ್ಟಿದೆ.

ನಂಜನಗೂಡು: ಉಪ್ಪಾರ - 23 ಸಾವಿರ

ಉಪ್ಪಾರ ಸಮುದಾಯದ ಮತದಾರರ ಸಂಖ್ಯೆ 23 ಸಾವಿರ ಇದೆ. ಬಿಜೆಪಿ, ಉಪ್ಪಾರ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಉಪ್ಪಾರರ ನೇತೃತ್ವದಲ್ಲಿ ಮತ ಕೇಳುತ್ತಿದ್ದರೆ, ಕಾಂಗ್ರೆಸ್, ಸಿ. ಪುಟ್ಟರಂಗಶೆಟ್ಟಿಯವರ ನೇತೃತ್ವದಲ್ಲಿದೆ.

ನಂಜನಗೂಡು: ಮುಸ್ಲಿಂ - 12 ಸಾವಿರ

ಮುಸ್ಲಿಮರ 12 ಸಾವಿರ ಮತದಾರರನ್ನು ಸೆಳೆಯಲು ಬಿಜೆಪಿ ಪರ ಪ್ರತ್ಯೇಕವಾಗಿ ಪ್ರಚಾರ ನಡೆಸಲು ಯಾರೂ ಇಲ್ಲ. ಕಾಂಗ್ರೆಸ್​ನ ತನ್ವೀರ್ ಸೇಠ್ ಮತ್ತು ರಿಜ್ವಾನ್ ಅರ್ಷದ್ ಕಣದಲ್ಲಿದ್ದಾರೆ.

ನಂಜನಗೂಡು: ಒಕ್ಕಲಿಗರು - 8 ಸಾವಿರ

ಒಕ್ಕಲಿಗ ಮತದಾರರ ಸಂಖ್ಯೆ 8 ಸಾವಿರ. ಬಿಜೆಪಿ ಪರ ಡಿ.ವಿ. ಸದಾನಂದ ಗೌಡ, ಆರ್. ಅಶೋಕ್, ಶೋಭಾ ಕರಂದ್ಲಾಜೆ ಪ್ರಚಾರ ನಡೆಸುತ್ತಿದ್ದರೆ, ಕಾಂಗ್ರೆಸ್ ಪರ ಡಿ.ಕೆ. ಶಿವಕುಮಾರ್, ಅಪ್ಪಾಜಿ ನಾಡಗೌಡ, ಎಂ. ಕೃಷ್ಣಪ್ಪ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಗುಂಡ್ಲುಪೇಟೆ ಕ್ಷೇತ್ರದಲ್ಲೂ ಅಷ್ಟೆ. ಸಚಿವರಾಗಿದ್ದಾಗಲೇ ಅಕಾಲ ಮರಣಕ್ಕೀಡಾದ ಮಹದೇವ ಪ್ರಸಾದ್ ನಿಧನದಿಂದ ತೆರವಾಗಿರುವ ಕ್ಷೇತ್ರ ಇದು. ಇಲ್ಲಿ ಮಹದೇವ ಪ್ರಸಾದ್ ಪತ್ನಿ ಗೀತಾ ಬಿಜೆಪಿ ಯಿಂದ ನಿರಂಜನ್ ಕುಮಾರ್ ಕಣಕ್ಕಿಳಿದಿದ್ದಾರೆ. ಇಲ್ಲಿಯೂ ಜಾತಿಗೊಬ್ಬ ಲೀಡರ್ ಇದ್ದಾರೆ.

ಗುಂಡ್ಲುಪೇಟೆ: ವೀರಶೈವ - 70 ಸಾವಿರ

ಗುಂಡ್ಲುಪೇಟೆಯಲ್ಲಿ ವೀರಶೈವ ಮತದಾರರ ಸಂಖ್ಯೆ 70 ಸಾವಿರ. ಈ ಮತಗಳಿಗಾಗಿ ಬಿಜೆಪಿಯಿಂದ ಹೋರಾಡುತ್ತಿರುವುದು ಬಿ.ಎಸ್. ಯಡಿಯೂರಪ್ಪ. ಕಾಂಗ್ರೆಸ್ ಪರವಾಗಿ ಶಾಮನೂರು ಶಿವಶಂಕರಪ್ಪ ಮತ್ತು ಎಂ. ಬಿ. ಪಾಟೀಲ್ ಮತಬೇಟೆಗಿಳಿದಿದ್ದಾರೆ.

ಗುಂಡ್ಲುಪೇಟೆ: ದಲಿತರು - 40 ಸಾವಿರ

40 ಸಾವಿರ ದಲಿತರ ಮತಗಳಿಗಾಗಿ ಬಿಜೆಪಿ ಅರವಿಂದ ಲಿಂಬಾವಳಿ, ಕೆ. ಶಿವರಾಂ ಪ್ರಚಾರ ಮಾಡುತ್ತಿದ್ದಾರೆ, ಕಾಂಗ್ರೆಸ್ ನೇತೃತ್ವವನ್ನು ಸ್ವತಃ ಪರಮೇಶ್ವರ್ ವಹಿಸಿಕೊಂಡಿದ್ದಾರೆ. ಜೊತೆಗೆ ಸಂಸದ ಧ್ರುವನಾರಾಯಣ ಮತ್ತು ಸಚಿವ ಆಂಜನೇಯ ಇದ್ಧಾರೆ.

ಗುಂಡ್ಲುಪೇಟೆ: ಕುರುಬರು - 20 ಸಾವಿರ

20 ಸಾವಿರ ಕುರುಬರ ಮತಗಳಿಗಾಗಿ ಬಿಜೆಪಿಯಿಂದ ಈಶ್ವರಪ್ಪ ಮತ್ತು ವಿಜಯ ಶಂಕರ್ ಇದ್ದರೆ, ಕಾಂಗ್ರೆಸ್​ಗೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಇದ್ದಾರೆ.

ಗುಂಡ್ಲುಪೇಟೆ: ನಾಯಕ - 20 ಸಾವಿರ

ನಾಯಕರ ಮತಗಳೂ 20 ಸಾವಿರದಷ್ಟಿವೆ. ಬಿಜೆಪಿಗೆ ಶ್ರೀರಾಮುಲು ನೇತೃತ್ವ. ಕಾಂಗ್ರೆಸ್​ಗೆ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಮುಂದಾಳತ್ವ.

ಗುಂಡ್ಲುಪೇಟೆ: ಮುಸ್ಲಿಮ್ - 5 ಸಾವಿರ

ಮುಸ್ಲಿಂ ಮತದಾರರ ಸಂಖ್ಯೆ 5 ಸಾವಿರ. ಬಿಜೆಪಿಯಂದ ಅನ್ವರ್ ಮಾನಪ್ಪಾಡಿ ಇದ್ದರೆ, ಕಾಂಗ್ರೆಸ್​ನಿಂದ ಯು.ಟಿ. ಖಾದರ್ ಮತ್ತು ಸಿಎಂ ಇಬ್ರಾಹಿಂ ಪ್ರಚಾರ ಮಾಡುತ್ತಿದ್ಧಾರೆ.

ಗುಂಡ್ಲುಪೇಟೆ: ಒಕ್ಕಲಿಗರು - ಒಂದು ಸಾವಿರ

ಒಕ್ಕಲಿಗ ಮತದಾರರ ಸಂಖ್ಯೆ ಕೇವಲ ಒಂದು ಸಾವಿರ. ಬಿಜೆಪಿಗಾಗಿ ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿನಿ ಶ್ರೀರಮೇಶ್ ಹೋರಾಡುತ್ತಿದ್ದಾರೆ. ಕಾಂಗ್ರೆಸ್ ಪರ ಡಿ.ಕೆ. ಶಿವಕುಮಾರ್ ಪ್ರಚಾರ ನಡೆಸುತ್ತಿದ್ಧಾರೆ.

ಒಟ್ಟಿನಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಕಾ ಜಾತಿ ಲೆಕ್ಕಾಚಾರದಲ್ಲಿವೆ.