ಮೋರಿಗಾಂವ್‌(ಅಸ್ಸಾಂ): ಭಾರತ ರತ್ನ ಪುರಸ್ಕೃತ ಅಸ್ಸಾಂ ಮೂಲದ ಸಂಗೀತ ದಿಗ್ಗಜ ದಿ. ಭೂಪೇನ್‌ ಹಜಾರಿಕಾ ಅವರ ವಿರುದ್ಧ ಹೇಳಿಕೆ ನೀಡಿದ ಆರೋಪ ಹೊರಿಸಿ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಥಳೀಯ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ ರಾಜು ಮಹಾಂತಾ ಎನ್ನುವವರು ನೀಡಿದ ದೂರು ಆಧರಿಸಿ ಪೊಲೀಸರು ಈ ಕೇಸು ದಾಖಲಿಸಿದ್ದಾರೆ.

ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಪ್ರಚುರಪಡಿಸಿದ ನಾನಾಜೀ ದೇಶ್‌ಮುಖ್‌ ಹಾಗೂ ಸಂಗೀತ ದಿಗ್ಗಜ ಭೂಪೇನ್‌ ಹಜಾರಿಕಾ ಅವರಿಗೆ ಭಾರತ ರತ್ನ ಘೋಷಿಸಲಾಗಿದೆ. ಆದರೆ, ಇತ್ತೀಚೆಗೆ ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಲಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಖರ್ಗೆ ಅವರ ಈ ಹೇಳಿಕೆಯಿಂದ ಅಸ್ಸಾಂ ಜನತೆಯ ಭಾವನೆಗೆ ಧಕ್ಕೆಯಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ರಾಜು ಮಹಂತಾ ದೂರು ಸಲ್ಲಿಸಿದ್ದರು. ಅಲ್ಲದೆ ಈ ಹೇಳಿಕೆ ಸಂಬಂಧ ಖರ್ಗೆ ಕ್ಷಮೆ ಕೇಳಬೇಕು ಎಂದು ರಾಜು ಆಗ್ರಹಿಸಿದ್ದಾರೆ.