ನವದೆಹಲಿ(ಡಿ.20): ಮದುವೆ ಸಂದರ್ಭದಲ್ಲಿ ಏನೂ ಕೆಡುಕಾಗದಿರಲಿ ಎಂದು ವರನೊಬ್ಬ ತನ್ನ ತಮ್ಮನೊಂದಿಗೆ ದೆಹಲಿಯಿಂದ ಹರಿದ್ವಾರಕ್ಕೆ ಗಂಗಾ ಸ್ನಾನಕ್ಕೆಂದು ತೆರಳಿದ್ದ. ಪಂಡಿತನೊಬ್ಬ 'ನೀನು ಹರಿದ್ವಾರಕ್ಕೆ ಹೋಗಿ ಗಾಂಗಾ ಸ್ನಾನ ಮಾಡಿದರಷ್ಟೇ ನಿನ್ನ ವೈವಾಹಿಕ ಬದುಕು ಸುಖಮಯವಾಗುತ್ತದೆ' ಎಂದಿದ್ದರು. ಪಂಡಿತನ ಮಾತು ಕೇಳಿ ಹರಿದ್ವಾರಕ್ಕೆ ತೆರಳಿದ್ದಾತನ ಕಾರಿಗೆ ದಾರಿ ಮಧ್ಯೆ ಬೆಂಕಿ ತಗುಲಿದೆ.

ತಿಳಿದು ಬಂದ ಮಾಹಿತಿಯನ್ವಯ ಪಂಕಜ್ ಕೌಶಿಕ್ ಹಾಗೂ ಆಶೀಷ್ ಕೌಷಿಕ್ ಇಬ್ಬರು ಸಹೋದರರು ದೆಹಲಿಯಿಂದ ಹರಿದ್ವಾರಕ್ಕೆ ಗಂಗಾ ಸ್ನಾನಕ್ಕಾಗಿ ತಮ್ಮ ಕಾರಿನಲ್ಲಿ ಹೊರಟಿದ್ದರು. ಆದರೆ ಮುಂಜಾನೆ 4 ಗಂಟೆಗೆ ರಾನೀಪುರ್ ತಲುಪುತ್ತಿದ್ದಂತೆ ಇವರ ಕಾರಿಗೆ ಅಚಾನಕ್ಕಾಗಿ ಬೆಂಕಿ ತಗುಲಿದೆ. ಅದೃಷ್ಟವಶಾತ್ ಇಬ್ಬರೂ ಕಾರಿನಿಂದ ಹೊರ ಬರುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಕಾರು ಮಾತ್ರ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.    

ಕೂದಲೆಳೆಯ ಅಂತರದಲ್ಲಿ ಪಾರಾದ ಸಹೋದರರಿಬ್ಬರೂ ಸಮಯ ವ್ಯರ್ಥ ಮಾಡದೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಬೆಂಕಿ ಬೇರೆ ಸ್ಥಳಕ್ಕೆ ಹಬ್ಬುವ ಮುನ್ನ ಬೆಂಕಿಯನ್ನು ಸಿಬ್ಬಂದಿಗಳು ನಂದಿಸಿದ್ದಾರೆ. 2017ರ ಫೆಬ್ರವರಿ 23ರಂದು ಇವರ ಮದುವೆ ನಡೆಯಬೇಕಿತ್ತು.

ಒಟ್ಟಾರೆಯಾಗಿ ಪಂಡಿತನ ಮಾತು ಕೇಳಿ ವೈವಾಹಿಕ ಬದುಕನ್ನು ನೆಟ್ಟಗಾಗಿಸಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರಿದ್ದರು ಈ ಸಹೋದರರು.