ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಶಾಸಕ ಸ್ಥಾನಕ್ಕೆ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡಿರುವುದರಿಂದ ಶೀಘ್ರವೇ ನಂಜನಗೂಡು ವಿಧಾನ ಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಈಗಾಗಲೇ ಮೂರು ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ.
ಬೆಂಗಳೂರು (ಡಿ.24): ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್'ನಲ್ಲಿ ಅಭ್ಯರ್ಥಿಗಾಗಿ ಹುಡುಕಾಟ ಆರಂಭವಾಗಿದೆ.
ಶ್ರೀನಿವಾಸ್ ಪ್ರಸಾದ್'ಗೆ ಸ್ಪರ್ಧೆಯೊಡ್ಡುವ ಅಭ್ಯರ್ಥಿ ಆಡಳಿತ ಪಕ್ಷದಲ್ಲಿ ಸಿಗದಿರುವುದು ನಾಯಕರ ಚಿಂತೆಗೆ ಕಾರಣವಾಗಿದೆ. ಇದರ ಜೊತೆಗೆ ಚುನಾವಣೆಯ ಜವಾಬ್ದಾರಿ ಹೊತ್ತಿಕೊಳ್ಳಲು ಹಿರಿಯ ನಾಯಕರು ಹಿಂದೇಟು ಹಾಕ್ತಿದ್ದಾರೆ.
ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಶಾಸಕ ಸ್ಥಾನಕ್ಕೆ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡಿರುವುದರಿಂದ ಶೀಘ್ರವೇ ನಂಜನಗೂಡು ವಿಧಾನ ಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಈಗಾಗಲೇ ಮೂರು ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ.
ಕಾಂಗ್ರೆಸ್'ನಿಂದ ಸಿಡಿದು ಹೊರ ಬಂದಿರುವ ಶ್ರೀನಿವಾಸ್ ಪ್ರಸಾದ್ ಅವರಿಗೆ ಬಿಜೆಪಿ ಗಾಳ ಹಾಕಿದ್ದು, ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಅವರನ್ನು ಎದುರಿಸಿ ಗೆಲ್ಲುವಂತಹ ಅಭ್ಯರ್ಥಿಗೆ ಆಡಳಿತ ಪಕ್ಷ ಕಾಂಗ್ರೆಸ್ ಹುಡುಕಾಟ ನಡೆಸಿದೆ.
ಧೃವನಾರಾಯಣ ಅಸಮ್ಮತಿ, ಸುನೀಲ್ ಬೋಸ್'ಗೆ ವಿರೋಧ
ಚಾಮರಾಜನಗರ ಸಂಸದ ಧೃವನಾರಾಯಣ, ಚುನಾವಣೆಯಲ್ಲಿ ಸ್ಪರ್ಧೆಗೆ ನಿರಾಕರಿಸಿದ್ದಾರೆ. ಇನ್ನೂ ಸಚಿವ ಎಚ್. ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಸ್ಪರ್ಧೆಗೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಇನ್ನೂ ಬಿಜೆಪಿಯಲ್ಲಿರುವ ಕೃಷ್ಣಮೂರ್ತಿಯನ್ನು ಪಕ್ಷಕ್ಕೆ ತರಲು ಕೂಡ ವಿರೋಧ ವ್ಯಕ್ತವಾಗಿದೆ. ಇನ್ನೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್ ಸ್ಥಳೀಯರಾದರೂ ಗೆಲ್ಲುವುದು ಕಷ್ಟವಾಗಿದೆ. ಇನ್ನೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಚುನಾವಣೆ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯಗೆ ಪ್ರತಿಷ್ಠೆ:
ನಂಜನಗೂಡು ಉಪ ಚುನಾವಣೆ ಕಾಂಗ್ರೆಸ್ ಪಕ್ಷಕ್ಕಿಂತ ಸಿಎಂ ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿದೆ. ಶ್ರೀನಿವಾಸ್ ಪ್ರಸಾದ್ ವಿರುದ್ಧ ತಮ್ಮ ಜಿಲ್ಲೆಯಲ್ಲಿಯೇ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರದಿದ್ದರೆ, ಪಕ್ಷದಲ್ಲಿ ಸಿಎಂ ಇಮೇಜ್'ಗೆ ಧಕ್ಕೆಯಾಗುತ್ತದೆ. ಸಿಎಂ ತವರು ಜಿಲ್ಲೆಯಾಗಿರುವುದರಿಂದ ಪಕ್ಷ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲವನ್ನೂ ಸಿಎಂ ನೋಡಿಕೊಳ್ಳುತ್ತಾರೆ ಎಂಬ ಮಾತು ಕಾಂಗ್ರೆಸ್ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ಜಾತಿ ಲೆಕ್ಕಾಚಾರ:
ನಂಜನಗೂಡಿನಲ್ಲಿ ದಲಿತರು ಮತ್ತು ಲಿಂಗಾಯತ ಸಮುದಾಯವೇ ಪ್ರಮುಖ ಪಾತ್ರ ವಹಿಸುವುದರಿಂದ ಶ್ರೀನಿವಾಸ್ ಪ್ರಸಾದ್ ಬಿಜೆಪಿಯಿಂದ ಸ್ಪರ್ಧಿಸಿದರೆ, ಲಿಂಗಾಯತ ಸಮುದಾಯವೂ ಅವರ ಬೆಂಬಲಕ್ಕೆ ನಿಲ್ಲುವ ಆತಂಕ ಇದ್ದು, ಅದನ್ನು ತಪ್ಪಿಸಿ ಗೆಲುವು ಪಡೆಯಲು ಶ್ರೀನಿವಾಸ್ ಪ್ರಸಾದ್ ಗೆ ತಕ್ಕ ಸ್ಪರ್ಧಿ ಹುಡುಕುವುದೇ ಆಡಳಿತ ಪಕ್ಷಕ್ಕೆ ತಲೆನೋವಾಗಿದೆ.
