ಬೆಂಗಳೂರು (ಸೆ.05): ರಾಮಚಂದ್ರಾಪುರ ಮಠದ ಪೀಠಾಧೀಶರ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಗಾಯಕಿ ಪ್ರೇಮಲತಾ ದಿವಾಕರ್‌ಶಾಸ್ತ್ರಿ ಮತ್ತಿತರರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಅಪಪ್ರಚಾರ ಮತ್ತು ಹವ್ಯಕ ಸಮುದಾಯದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಪ್ರೇಮಲತಾ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು. ಈ ದೂರು ರದ್ದುಗೊಳಿಸಬೇಕೆಂದು ಪ್ರೇಮಲತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ರವಿಮಳಿಮಠ ಅವರಿದ್ದ ನ್ಯಾಯಪೀಠ, ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದಾಪುರದ ಜೆಎಂಎಫ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಖಾಸಗಿ ದೂರು ಮತ್ತು ದೂರಿನ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.
ಮತೀಯ ಭಾವನೆಗೆ ಧಕ್ಕೆಯಾಗುತ್ತಿದೆ ಎಂಬ ಆರೋಪದಲ್ಲಿ ದೂರು ದಾಖಲಿಸಿಬೇಕಾದಲ್ಲಿ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಈ ದೂರು ದಾಖಲಿಸುವ ಸಂದರ್ಭದಲ್ಲಿ ಯಾವುದೇ ಅನುಮತಿ ಪಡೆದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶಿವಸಾಯಿ ಎಂ.ಪಾಟೀಲ್ ವಾದ ಮಂಡಿಸಿ, ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ ಪ್ರಕಾರ ಧಾರ್ಮಿಕ ಕೇಂದ್ರಗಳಲ್ಲಿ ದ್ವೇಷÜ ಉಂಟುಮಾಡುವುದು(ಐಪಿಸಿ 153 ಎ) ಮತ್ತು ಮತೀಯ ನಂಬಿಕೆಗಳಿಗೆ ಅಪಮಾನಗೊಳಿಸುವ(ಐಪಿಸಿ 295 ಎ) ಆರೋಪಗಳಲ್ಲಿ ದೂರು ದಾಖಲಿಸಿ ವಿಚಾರಣೆ ನಡೆಸಬೇಕಾದರೆ ಕೇಂದ್ರ ಇಲ್ಲವೇ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದೇ ಅನುಮತಿ ಪಡೆದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಪುರಸ್ಕರಿಸಿದ ನ್ಯಾಯಪೀಠ ಆರೋಪಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಮತ್ತು ದೂರು ರದ್ದುಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಗಾಯಕಿ ಪ್ರೇಮಲತಾ ದಿವಾಕರ್ ಶಾಸ್ತ್ರಿ ಮತ್ತು ಆಕೆಯ ಪತಿ ದಿವಾಕರ್ ಶಾಸ್ತ್ರಿ ಎಂಬವರು ಹವ್ಯಕ ಸಮುದಾಯವನ್ನು ರಾಮಚಂದ್ರಾಪುರ ಮಠದ ವಿರುದ್ಧ ಎತ್ತಿ ಕಟ್ಟುವುದು ಮತ್ತು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಮಚಂದ್ರಾಪುರದ ಹವ್ಯಕ ಮಂಡಳಿ ಅಧ್ಯಕ್ಷ ನರೇಂದ್ರ ಹೆಗಡೆ ಎಂಬವರು ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ಸಮಾನ ಮನಸ್ಕ ಹವ್ಯಕ ವೇದಿಕೆ ಎಂಬ ಸಂಘಟನೆಯೊಂದಿಗೆ ಕೈಜೋಡಿಸಿ ‘ಸತ್ಯ ಸಂಗತಿ’ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ಮಠ ಮತ್ತು ರಾಘವೇಶ್ವರ ಶ್ರೀಗಳ ವಿರುದ್ಧ ಅವಹೇಳನಾಕಾರಿ ಸಂಗತಿ ಮುದ್ರಿಸಿದ್ದು, ಹವ್ಯಕ ಸಮುದಾಯದವರಿಗೆ ಅಂಚೆಯ ಮೂಲಕ ಕಳುಹಿಸಿದ್ದಾರೆ. ಆ ಮೂಲಕ ಮಠದ ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಸಮಾನ ಮನಸ್ಕ ಹವ್ಯಕ ವೇದಿಕೆ ಗೌರಾವಾಧ್ಯಕ್ಷ ನೂಜಿಬೈಲು ಕೃಷ್ಣ ಭಟ್, ಅಧ್ಯಕ್ಷ ಸತ್ಯಪ್ರಕಾಶ್ ವಾರಣಾಸಿ, ಕಾರ್ಯದರ್ಶಿ ಎಂ.ಸ್ವಯಂಪ್ರಕಾಶ್ ಹಾಗೂ ಸತ್ಯ ಸಂಗತಿ ಎಂಬ ಪುಸ್ತಕ ಪ್ರಕಟಿಸಿದ್ದ ಅಭಿಮಾನಿ ಪಬ್ಲಿಕೇಷನ್ ವಿರುದ್ಧ ಧಾರ್ಮಿಕ ಕೇಂದ್ರಗಳಲ್ಲಿ ದ್ವೇಷ ಉಂಟುಮಾಡುವುದು ಮತ್ತು ಮತೀಯ ನಂಬಿಕೆಗಳಿಗೆ ಅಪಮಾನಗೊಳಿಸುವ ಆರೋಪದಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ದೂರಿಗೆ ಸಂಬಂಧಿಸಿದಂತೆ ಪ್ರೇಮಲತಾ ಶಾಸ್ತ್ರಿ ಮತ್ತು ದಿವಾಕರ್ ಶಾಸ್ತ್ರಿ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಹಾಜರಾಗಿ, ಜಾಮೀನು ಪಡೆದಿದ್ದರು. ಜತೆಗೆ ಪ್ರಕರಣ ರದ್ದುಪಡಿಸುವಂತೆ ಕೋರಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.
