ಗುಜರಾತಿನ ಅಹಮದಾಬಾದ್‌ನಲ್ಲಿ 1 ಮೆ.ವ್ಯಾ.ಸಾಮರ್ಥ್ಯದ ಕೆನಾಲ್‌ ಟಾಪ್‌ ಸೋಲಾರ್‌ ಪ್ರಾಜೆಕ್ಟ್ ಕೈ​ಗೊಳ್ಳ​ಲಾಗಿದ್ದು, ಅದೇ ಮಾದರಿಯನ್ನು ಇಲ್ಲಿ ಅನು​ಸರಿ​ಸಲಾಗಿದೆ. ಆದರೆ ಅಹಮದಾಬಾದ್‌ ಯೋಜ​ನೆಗೆ ರೂ.17 ಕೋಟಿ ವೆಚ್ಚವಾಗಿದ್ದರೆ, ವಿಜಯ​ಪು​ರ​ದ ಈ ಯೋಜನೆಗೆ ರೂ.11.43 ಕೋಟಿ ವೆಚ್ಚವಾಗಿದೆ.

ವರದಿ: ಕಿರಣ ಮಾಸಣಗಿ, ಕನ್ನಡಪ್ರಭ

ವಿಜಯಪುರ (ಆಲಮಟ್ಟಿ): ಗುಜ​ರಾತ್‌ ಅನ್ನು ಮಾದ​ರಿ​ಯಾ​ಗಿ​ಟ್ಟು​ಕೊಂಡು ನೀರಾವರಿ ಸೌಲಭ್ಯ ಮತ್ತು ನೈಸರ್ಗಿಕ ಶಕ್ತಿಗಳ ಸದ್ಬಳಕೆ ನಿಟ್ಟಿನಲ್ಲಿ ವಿಜಯಪುರದಲ್ಲಿ ಕೈಗೊಂಡ ಸೌರಶಕ್ತಿ ಯೋಜನೆ ಈಗ ದೇಶಕ್ಕೇ ಮಾದ​ರಿ​ಯಾ​ಗಿ ಪರಿ​ವ​ರ್ತ​ನೆ​ಯಾ​ಗಿ​ದೆ. ದಕ್ಷಿಣ ಭಾರ​ತ​ದಲ್ಲೇ ಮೊದ​ಲನೆಯ​ದಾದ ಈ ಕೆನಾಲ್‌ ಸೋಲಾರ್‌ ಯೋಜನೆ ಯಶಸ್ಸು ಇಂತಹ ಇನ್ನಷ್ಟು ಯೋಜ​ನೆ​ಗ​ಳಿಗೆ ಪ್ರೇರಣೆಯಾಗುತ್ತಿ​ದೆ.

ಯೋಜ​ನೆ​ಯಡಿ ಆಲಮಟ್ಟಿ ಬಲದಂಡೆ ಕಾಲುವೆ ಮೇಲೆ 8ನೇ ಕಿ.ಮೀ ನಿಂದ 11ನೇ ಕಿ.ಮೀವರೆಗೆ ಸೌರಫಲಕ ಅಳವಡಿಸಲಾಗಿದೆ. ವಿಜಯಪುರ ಜಿಲ್ಲೆ​ಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚು. ಇದರಿಂದ ನೀರಿನ ಆವಿಯಾಗುವಿಕೆ ಪ್ರಮಾ​ಣ​ವೂ ಜಾಸ್ತಿ. ಇದರ ತಡೆಗೆ ಕಾಲುವೆ ಮೇಲೆ ಸೌರಫಲಕ ಅಳ​ವಡಿಕೆಗೆ ಮುಂದಾಗಿದ್ದು, ಈ ಮೂಲಕ ನೀರನ್ನು ಉಳಿ​​ಸುವ ಜತೆಗೆ ವಿದ್ಯುತ್‌ ಉತ್ಪಾದಿಸುವ ಹೊಸ ಮಾದರಿಗೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಂ​ದಾಗಿದೆ ಎಂದು ಕೃಷ್ಣಾ ಕಾಡಾದ ಕಾರ್ಯ​ಪಾಲಕ ಅಭಿಯಂತರ ತಿರುಮೂರ್ತಿ ಮಾಹಿತಿ ನೀಡಿದರು.

ಈ ಕಾಲುವೆಗಳು 9 ಮೀ ಅಗಲವಿದ್ದು, ಅದರ ಮೇಲೆ ಸುಮಾರು 12 ಮೀ ಅಗಲ ಹಾಗೂ 700 ಮೀಟರ್‌ ಉದ್ದದವರೆಗೆ 3280 ಸೌರಫಲಕಗಳನ್ನು ಅಳವಡಿಸಲಾಗಿದೆ. ಈ ಸೌರಫಲಕಗಳಿಂದ ಪ್ರತಿನಿತ್ಯ 4000-6000 ಯುನಿಟ್‌ ವಿದ್ಯುತ್‌ ಉತ್ಪಾದಿಸ​ಲಾಗು​ತ್ತಿದೆ. ಪ್ರತಿದಿನ 25ರಿಂದ 27ಡಿಗ್ರಿ ಸಾಮಾನ್ಯ ಉಷ್ಣಾಂಶ​ದಿಂದ ಇದು ಸಾಧ್ಯ​ವಾಗು​ತ್ತಿದ್ದು, ಅತಿ ಹೆಚ್ಚಿನ ಪ್ರಖರತೆ ಇದ್ದಾಗಲೂ ಗರಿಷ್ಠ 1 ಮೆಗಾ​ವ್ಯಾಟ್‌ (10ಸಾವಿರ ಯುನಿಟ್‌)ನಷ್ಟುವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಈ ಯೋಜನೆಗಿದೆ.

ಉತ್ಪಾದನೆಗೊಂಡ ಈ ವಿದ್ಯುತ್‌ ಅನ್ನು ಸುತ್ತಲಿನ 12 ಹಳ್ಳಿಗಳಿಗೆ ನೀಡಲು ಆರಂಭದಲ್ಲಿ ಯೋಜನೆ ರೂಪಿಸಲಾಗಿತ್ತು. ನಂತರದಲ್ಲಿ ಕ್ಯಾಪ್ಟಿವ್‌ ಬೇಸಿಸ್‌ (ನೀಡಿದಷ್ಟು ಬಿಲ್‌ ಕಡಿತದ) ಆಧಾರದ ಮೇಲೆ ಇಲ್ಲಿ ಉತ್ಪಾದನೆಗೊಳ್ಳುವ ವಿದ್ಯುತ್‌ ಅನ್ನು ಸಮೀಪ​ದಲ್ಲಿರುವ ಹೆಸ್ಕಾಂನ ರಾಂಪುರ ಸಬ್‌'ಸ್ಟೇಷನ್‌ಗೆ ನೀಡ​ಲಾಗುತ್ತಿದೆ. ಅಂದರೆ ಆಲಮಟ್ಟಿಎಡ ಮತ್ತು ಬಲ​ದಂಡೆ ಕಾಲುವೆಗಳಿಗೆ ನೀರು ಪಂಪ್‌ ಮಾಡಲು ವಿದ್ಯುತ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿ ಬಳ​ಸುವ ವಿದ್ಯುಚ್ಛಕ್ತಿಯ ಒಟ್ಟು ಬಿಲ್‌ನಲ್ಲಿ ಈ ಸೋಲಾರ್‌ ಪವರ್‌ ಪ್ರಾಜೆಕ್ಟ್'ನಿಂದ ಉತ್ಪಾದನೆ​ಗೊಂ​ಡು ಹೆಸ್ಕಾಂಗೆ ನೀಡಲಾಗುವ ಯುನಿಟ್‌'ನಷ್ಟು ಕಡಿತ ಮಾಡಿ ಉಳಿದಿರುವುದಕ್ಕೆ ಹೆಸ್ಕಾಂ ಬಿಲ್‌ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಉತ್ಪಾದನೆ ಹೆಚ್ಚಿದಲ್ಲಿ ಪ್ರತಿ ಯುನಿಟ್‌'ಗೆ ರೂ.3.60ರಂತೆ ಮೊತ್ತ ಪಾವತಿ​ಸುವ ಕುರಿತು ಹೆಸ್ಕಾಂ ಜತೆಗೆ ಒಡಂಬಡಿಕೆ​ಯನ್ನೂ ಮಾಡಿಕೊಳ್ಳಲಾಗಿದೆ. 2015ರ ಜೂ.9​ರಂದು ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಈವ​ರೆ​ಗೂ 14 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದಿಸಲಾಗಿದೆ.

ಗುಜರಾತಿನ ಅಹಮದಾಬಾದ್‌ನಲ್ಲಿ 1 ಮೆ.ವ್ಯಾ.ಸಾಮರ್ಥ್ಯದ ಕೆನಾಲ್‌ ಟಾಪ್‌ ಸೋಲಾರ್‌ ಪ್ರಾಜೆಕ್ಟ್ ಕೈ​ಗೊಳ್ಳ​ಲಾಗಿದ್ದು, ಅದೇ ಮಾದರಿಯನ್ನು ಇಲ್ಲಿ ಅನು​ಸರಿ​ಸಲಾಗಿದೆ. ಆದರೆ ಅಹಮದಾಬಾದ್‌ ಯೋಜ​ನೆಗೆ ರೂ.17 ಕೋಟಿ ವೆಚ್ಚವಾಗಿದ್ದರೆ, ವಿಜಯ​ಪು​ರ​ದ ಈ ಯೋಜನೆಗೆ ರೂ.11.43 ಕೋಟಿ ವೆಚ್ಚವಾಗಿದೆ.

ಕೊಪ್ಪ​ಳ​ದಲ್ಲೂ ಆರಂಭಿ​ಸಲು ಚಿಂತ​ನೆ:
ವಿಜ​ಯ​ಪು​ರದಲ್ಲಿ ಸಿಕ್ಕ ಯಶಸ್ಸನ್ನು ಕಂಡು ಇದೇ ಮಾದರಿಯನ್ನು ಕೊಪ್ಪಳ ಏತ ನೀರಾವರಿ ಯೋಜನೆಯ 10ನೇ ಕಿ.ಮೀನಲ್ಲಿ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಅದು ಬೃಹತ್‌ ಯೋಜನೆ​ಯಾಗಿದ್ದು, ಅದರ ಸಾಮರ್ಥ್ಯ 10 ಮೆಗಾವ್ಯಾಟ್‌ಗೆ (1 ಲಕ್ಷ ಯುನಿಟ್‌) ಹೆಚ್ಚಿಸಲು ಚಿಂತನೆ ನಡೆಸಿದೆ.

ಬರದ ನಾಡು ಎಂಬ ಹೆಸರಿನಿಂದ ವಿಜಯಪುರ ಜಿಲ್ಲೆ ಸೇರಿ ಸುತ್ತಲಿನ ಕೆಲ ಜಿಲ್ಲೆಗಳಲ್ಲಿ ನೀರಾವರಿ ಕ್ರಾಂತಿಗೆ ಸಚಿವ ಎಂ.ಬಿ.ಪಾಟೀಲ ನಾಂದಿ ಹಾಡಿದ್ದಾರೆ. ಕಾಮಗಾರಿಗಳಿಗೆ ತೀವ್ರತೆ ನೀಡಿದ್ದಾರೆ. ಸೋಲಾರ್‌ ಪ್ರಾಜೆಕ್ಟ್ಗೆ ಹೆಚ್ಚಿನ ಆದ್ಯತೆ ಕೊಟ್ಟಲ್ಲಿ ರಾಜ್ಯದ ವಿದ್ಯುತ್‌ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
- ತಿರುಮೂರ್ತಿ, ಕೃಷ್ಣಾ ಕಾಡಾದ ಕಾರ್ಯಪಾಲಕ ಅಭಿಯಂತರ

(ಕನ್ನಡಪ್ರಭ ವಾರ್ತೆ)