ಸೇನೆಯಲ್ಲಿರುವ ಯುದ್ಧ ಸಾಮಗ್ರಿಗಳು 10 ದಿನಕ್ಕೂ ಸಾಕಾಗುವುದಿಲ್ಲ ಎಂಬ ಭಯಾನಕ ಸತ್ಯವನ್ನು ಸಿಎಜಿ ವರದಿಯಲ್ಲಿ ಬಿಚ್ಚಿಡಲಾಗಿದೆ. 2013ರಲ್ಲಿದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಅಂಥ ಪ್ರಮುಖ ವ್ಯತ್ಯಾಸಗಳಿಲ್ಲ, ಗಮನಾರ್ಹ ಬೆಳವಣಿಗೆಯೂ ಆಗಿಲ್ಲ ಎಂದು ಮಹಾಲೇಖಪಾಲರ ವರದಿ ತಿಳಿಸಿದೆ.

ನವದೆಹಲಿ(ಜುಲೈ 22): ಚೀನಾ ಮತ್ತು ಪಾಕಿಸ್ತಾನ ದೇಶಗಳು ಭಾರತವನ್ನು ಹುರಿದು ಮುಕ್ಕಲು ಹೊಂಚುಹಾಕಿಕೊಂಡು ಕೂತಿವೆ. ಚೀನಾದ ಗಡಿಯಲ್ಲಿ ಶತ್ರುಗಳ ಪ್ರಬಲ ಸೇನೆಯ ಎದುರು ಭಾರತೀಯ ಯೋಧರು ಟೊಂಕ ಕಟ್ಟಿ ನಿಂತಿದ್ದಾರೆ. ಗಡಿಯಿಂದ ಭಾರತೀಯ ಸೇನೆ ಕಾಲ್ತೆಗೆಯದಿದ್ದರೆ ಯುದ್ಧ ಮಾಡಲು ರೆಡಿಯಾಗಿರುವುದಾಗಿ ಚೀನಾ ದೇಶ ಸತತವಾಗಿ ಆರ್ಭಟಿಸುತ್ತಿದೆ. ಇಂಥ ಯುದ್ಧಭೀತಿ ಸನ್ನಿವೇಶದ ಹಿನ್ನೆಲೆಯಲ್ಲಿ ಮಹಾಲೇಖಪಾಲ(ಸಿಎಜಿ)ರ ವರದಿಯೊಂದು ದೇಶಕ್ಕೆ ಶಾಕಿಂಗ್ ನ್ಯೂಸ್ ನೀಡಿದೆ. ಸಂಸತ್'ನಲ್ಲಿ ನಿನ್ನೆ ಮಂಡಿಸಲಾದ ಸಿಎಜಿ ವರದಿಯಲ್ಲಿ ಸೇನೆಯ ವಾಸ್ತವ ಕರಾಳ ಚಿತ್ರಣವನ್ನು ಎತ್ತಿತೋರಿಸಲಾಗಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಮಿಲಿಟರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಹೊಸ ಶಕ್ತಿ ಸಿಗುತ್ತದೆ ಎಂದು ನಿರೀಕ್ಷಿಸಿದ್ದವರಿಗೂ ನಿರಾಸೆಯಾಗುವಂತಿದೆ. ಸೇನೆಯಲ್ಲಿರುವ ಯುದ್ಧ ಸಾಮಗ್ರಿಗಳು 10 ದಿನಕ್ಕೂ ಸಾಕಾಗುವುದಿಲ್ಲ ಎಂಬ ಭಯಾನಕ ಸತ್ಯವನ್ನು ಸಿಎಜಿ ವರದಿಯಲ್ಲಿ ಬಿಚ್ಚಿಡಲಾಗಿದೆ. 2013ರಲ್ಲಿದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಅಂಥ ಪ್ರಮುಖ ವ್ಯತ್ಯಾಸಗಳಿಲ್ಲ, ಗಮನಾರ್ಹ ಬೆಳವಣಿಗೆಯೂ ಆಗಿಲ್ಲ ಎಂದು ಮಹಾಲೇಖಪಾಲರ ವರದಿ ತಿಳಿಸಿದೆ.

ವರದಿಯ ಮುಖ್ಯಾಂಶಗಳು:
* ಸರಕಾರೀ ಸ್ವಾಮ್ಯದ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್'ಬಿ) ಸಂಪೂರ್ಣ ವಿಫಲವಾಗಿದೆ. (ಸೇನೆಯ ಶೇ.90 ಶಸ್ತ್ರಾಸ್ತ್ರಗಳಿಗೆ ಮದ್ದು ಗುಂಡು, ಸಾಮಗ್ರಿಗಳನ್ನು ಒದಗಿಸುವುದು ಒಎಫ್'ಬಿಯೇ)

* 2013ರಲ್ಲಿದ್ದ ಯುದ್ಧ ಸಾಮಗ್ರಿಗಳನ್ನು ಅವಲೋಕಿಸಿದಾಗ 15-20 ದಿನಗಳಿಗಿಂತ ಹೆಚ್ಚು ಕಾಲ ಭಾರತದ ಸೇನೆಗೆ ಯುದ್ಧ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಿಎಜಿ 2015ರಲ್ಲಿ ವರದಿ ನೀಡಿತ್ತು.

* 2013ರ ಸ್ಥಿತಿಗೂ ಈಗಿನ(2016-17) ಸ್ಥಿತಿಗೂ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಸಮರ್ಪಕವಾಗಿ ಯುದ್ಧ ಸಾಮಗ್ರಿ ಪೂರೈಕೆ ಮಾಡಬೇಕೆಂದು ಕೇಂದ್ರ ಸರಕಾರ ದಿಗ್ದರ್ಶನ ಮಾಡಿದ್ದರೂ ಒಎಫ್'ಬಿ ತನ್ನ ಗುರಿ ಮುಟ್ಟಲು ಪೂರ್ಣ ವಿಫಲವಾಗಿದೆ.

* ರಕ್ಷಣಾ ಸಚಿವಾಲಯವು 2013ರಲ್ಲಿ 16,500 ರೂಪಾಯಿ ಯೋಜನೆ ರೂಪಿಸಿ ಸೇನೆಯ ಶಸ್ತ್ರಾಗಾರಕ್ಕೆ ಪುಷ್ಟಿ ನೀಡಲು ಮಾಡಿದ ಪ್ರಯತ್ನ ಫಲಕೊಟ್ಟಿಲ್ಲ.

* ಆರ್ಟಿಲರಿ ಶೆಲ್'ಗೆ ಹಾಕಲಾಗುವ ಫ್ಯೂಜ್'ಗಳ ಸಂಪೂರ್ಣ ಕೊರತೆ ಇದೆ. ಯುದ್ಧದ ಟ್ಯಾಂಕರ್'ಗಳು ಮತ್ತು ಆರ್ಟಿಲರಿಗಳಿಗೆ ಬಳಸುವ ಯುದ್ಧ ಸಾಮಗ್ರಿಗಳಿಗೆ ಫ್ಯೂಜ್'ಗಳು ಅತ್ಯಗತ್ಯವಾಗಿರುತ್ತವೆ. ಆದರೆ, ಶೇ.83ರಷ್ಟು ಯುದ್ಧ ಸಾಮಗ್ರಿಗಳು ಫ್ಯೂಜ್ ಕೊರತೆ ಕಾರಣ ಬಳಕೆಯೋಗ್ಯವಾಗಿಲ್ಲ. ಅಂದರೆ ಶಸ್ತ್ರಾಸ್ತ್ರಗಳಿದ್ದರೂ ಸೈನಿಕರು ನಿರಾಯುಧಿಗಳಾಗಿರುತ್ತಾರೆ.

* 2013ರಲ್ಲಿ ಶೇ. 89 ಯುದ್ಧ ಸಾಮಗ್ರಿಗಳಿಗೆ ಫ್ಯೂಜ್'ಗಳ ಕೊರತೆ ಇತ್ತು.

* ಸೇನೆಯಲ್ಲಿರುವ ಶೇ.40ರಷ್ಟು ಯುದ್ಧ ಸಾಮಗ್ರಿಗಳ ಪ್ರಮಾಣವು ತೀರಾ ಕಡಿಮೆ ಇದ್ದು, ನಿರಂತರವಾಗಿ ಯುದ್ಧ ನಡೆದರೆ 10 ದಿನದೊಳಗೇ ಅವೆಲ್ಲಾ ಖಾಲಿಯಾಗಿಬಿಡುತ್ತವೆ.

* ಶೇ. 55ರಷ್ಟು ಯುದ್ಧ ಸಾಮಗ್ರಿಗಳು ತುರ್ತಾಗಿ ಬಳಕೆಗೆ ಸಿದ್ಧ ಮಾಡುವಷ್ಟು ಮಟ್ಟದಲ್ಲಿಲ್ಲ. ತುರ್ತು ಸಂದರ್ಭಗಳಲ್ಲಿ ಇವುಗಳು ಉಪಯೋಗಕ್ಕೆ ಬರೋದಿಲ್ಲ.

* ಔಟ್'ಬೋರ್ಡ್ ಮೋಟಾರ್'ಗಳನ್ನು ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿ ಖರೀದಿಸಿದ್ದರೂ ಬಹುತೇಕವನ್ನು ಸರಿಯಾಗಿ ಬಳಸಿಯೇ ಇಲ್ಲ. ಸರಿಯಾಗಿ ತಾಳೆಯಾಗದ ಓಬಿಎಂಗಳನ್ನು ಖರೀದಿಸಿದ್ದು ಇದಕ್ಕೆ ಕಾರಣ. 50 ಓಬಿಎಂಗಳ ಪೈಕಿ 46 ಮೋಟರ್'ಗಳನ್ನು ಕಳೆದ 7 ವರ್ಷಗಳಲ್ಲಿ ಬಳಕೆ ಮಾಡಿದ್ದು 10 ಗಂಟೆಗಳಿಗಿಂತ ಕಡಿಮೆಯೇ.