ಅಧಿವೇಶನ ಬಳಿಕ ಮತ್ತೆ ಸಂಪುಟ ವಿಸ್ತರಣೆ ಆಗುವುದು ಖಚಿತವಾಗಿದೆ. ಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, ಸಂಪುಟ ವಿಸ್ತರಣೆಗೆ ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ. ಜೂನ್ ೧೮ ರಿಂದ ೨೦ ರ ಒಳಗೆ ಸಂಪುಟ ವಿಸ್ತರಣೆ ಪಕ್ಕಾ ಆಗಿದೆ.
ಬೆಂಗಳೂರು(ಜೂ.6): ಅಧಿವೇಶನ ಬಳಿಕ ಮತ್ತೆ ಸಂಪುಟ ವಿಸ್ತರಣೆ ಆಗುವುದು ಖಚಿತವಾಗಿದೆ. ಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, ಸಂಪುಟ ವಿಸ್ತರಣೆಗೆ ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ. ಜೂನ್ ೧೮ ರಿಂದ ೨೦ ರ ಒಳಗೆ ಸಂಪುಟ ವಿಸ್ತರಣೆ ಪಕ್ಕಾ ಆಗಿದೆ.
ಮಳೆಗಾಲದ ಅಧಿವೇಶನ ಮುಗಿದ ತಕ್ಷಣವೇ ಸಂಪುಟ ವಿಸ್ತರಣೆಗೆ ಸಿಎಂ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಉಳಿದಿವೆ. ದಿವಂಗತ ಮಹದೇವಪ್ರಸಾದ್, ಹೆಚ್ ವೈ ಮೇಟಿ ಹಾಗೂ ಜಿ ಪರಮೇಶ್ವರರಿಂದ ತೆರವಾಗಿವೆ. ದಲಿತ, ಕುರುಬ, ಒಕ್ಕಲಿಗ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಿಎಂ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಅದ್ರಲ್ಲೂ, ಕುರುಬ ಕೋಟಾದಲ್ಲಿ ಮತ್ತೆ ಮೇಟಿಗೆ ಮಣೆ ಹಾಕೋ ಸಾಧ್ಯತೆ ಹೆಚ್ಚಿದೆ.
ಇನ್ನು, ದಲಿತ ಕೋಟಾದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಶಾಸಕರಾದ ಆರ್ ಬಿ ತಿಮ್ಮಾಪುರ, ನರೇಂದ್ರಸ್ವಾಮಿ, ಮೋಟಮ್ಮ ಹಾಗೂ ಶಿವರಾಜ ತಂಗಡಗಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಸಿಎಂ ಬಳಿ ಈ ವಿಚಾರವನ್ನೂ ಚರ್ಚಿಸಿರುವ ತಂಗಡಗಿ, ನನಗೇ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಲಿಂಗಾಯತ ಕೋಟಾದಲ್ಲಿ ತಿಪಟೂರು ಶಾಸಕ ಷಡಕ್ಷರಿ ಮತ್ತು ಮಹದೇವಪ್ರಸಾದ್ ಪತ್ನಿ ಗೀತಾ ಮಹದೇವ ಪ್ರಸಾದ್ ರೇಸ್'ನಲ್ಲಿದ್ದಾರೆ. ಗುಂಡ್ಲುಪೇಟೆ ಉಪ ಚುನಾವಣೆ ಸಂದರ್ಭದಲ್ಲೂ ಗೀತಾ ಮಹದೇವ ಪ್ರಸಾದ್ ಗೆ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಹಲವು ಬಾರಿ ಹೇಳಿದ್ದರು. ಅಲ್ಲದೆ, ಗೀತಾ ಮಹದೇವಪ್ರಸಾದ್ ಸಚಿವೆಯಾದ್ರೆ, ಚಾಮರಾಜನಗರ ಭಾಗದಲ್ಲಿ ಪಕ್ಷ ಸಂಘಟನೆಗೂ ಅನುಕೂಲ ಅನ್ನೋ ಮಾತು ಕೇಳಿ ಬರುತ್ತಿದೆ.
ಇವೆಲ್ಲದರ ನಡುವೆ ಒಕ್ಕಲಿಗ ಸಮುದಾಯದ ಶಾಸಕರಿಗೂ ಒಂದು ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಮಾಜಿ ಸಚಿವರಾದ ಅಂಬರೀಷ್, ಸಿ ಪಿ ಯೋಗಿಶ್ವರ್ ಹೆಸರು ಚಾಲ್ತಿಯಲ್ಲಿದೆ. ಅದ್ರಲ್ಲೂ ಅಂಬರೀಶ್ ಅವರನ್ನ ಮಂತ್ರಿ ಮಾಡಿ ಮಂಡ್ಯ ಭಾಗದಲ್ಲಿ ಪಕ್ಷ ಬಲಪಡಿಸುವ ಉದ್ದೇಶ ಸಿದ್ದರಾಮಯ್ಯ ಅವರು ಹೊಂದಿದ್ದಾರೆ ಎನ್ನಲಾಗಿದೆ.
ಒಟ್ಟನಲ್ಲಿ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ. ಈ ಸಮಯದಲ್ಲಿ ಹಲವು ಶಾಸಕರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಮಂತ್ರಿ ಆಗಲೇ ಬೇಕು ಎನ್ನುವ ಹಟಕ್ಕೆ ಬಿದ್ದವರಂತೆ ಲಾಬಿ ನಡೆಸಿದ್ದಾರೆ.
