ನವದೆಹಲಿ(ನ.26): ಅಮಾನ್ಯಗೊಂಡಿರುವ 500 ಮತ್ತು 1,000 ಮುಖಬೆಲೆಯ ನೋಟುಗಳಲ್ಲಿ ಠೇವಣಿಯಿಟ್ಟಿರುವ ಮೊತ್ತಕ್ಕೆ ಲೆಕ್ಕ ಕೊಡದೇ ಇದ್ದರೆ ಶೇ.50ರಷ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದ್ದು, ಮುಂದಿನ ವಾರವೇ ಸಂಸತ್‌ನಲ್ಲಿ ಇದು ಮಂಡನೆಯಾಗಲಿದೆ.

ಈ ಯೋಜನೆಯಂತೆ, ಡಿ.30ರವರೆಗೆ ಬ್ಯಾಂಕುಗಳಲ್ಲಿ ಮಿತಿಗಿಂತ ಹೆಚ್ಚು ಠೇವಣಿಯಿಟ್ಟರೆ, ಅದಕ್ಕೆ ಸರಿಯಾದ ಲೆಕ್ಕ ಕೊಡಬೇಕು. ಇಲ್ಲದಿದ್ದರೆ ಅಂಥವರಿಗೆ ತೆರಿಗೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಲೆಕ್ಕ ಕೊಡದ ಠೇವಣಿಗೆ ಶೇ.50 ತೆರಿಗೆ ವಿಧಿಸಿದರೆ, ಉಳಿದ ಮೊತ್ತದ ಪೈಕಿ ಶೇ.25 ಅನ್ನು 4 ವರ್ಷಗಳ ಕಾಲ ಠೇವಣಿ ಹಣವನ್ನು ಹಿಂಪಡೆಯುವಂತಿಲ್ಲ. ಅಷ್ಟೇ ಅಲ್ಲ, ತೆರಿಗೆದಾರರು ತಮ್ಮ ಲೆಕ್ಕವಿಲ್ಲದ ಹಣದ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳದೇ ಇದ್ದರೆ ಅಥವಾ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಅಂಥ ಮೊತ್ತವನ್ನು ಪತ್ತೆಹಚ್ಚಿದರೆ, ಆ ಮೊತ್ತಕ್ಕೆ ಶೇ.90ರಷ್ಟು ತೆರಿಗೆ ಹಾಗೂ ದಂಡ ವಿಧಿಸಲಾಗುತ್ತದೆ.

ಐಟಿ ಇಲಾಖೆ ದಾಳಿ ವೇಳೆ ನಗದು ಪತ್ತೆಯಾದರೆ, ಅದಕ್ಕೆ ಶೇ.30 ದಂಡ ವಿಧಿಸಲಾಗುತ್ತದೆ. ಆ ನಗದಿನ ಮೂಲದ ಬಗ್ಗೆ ಸರಿಯಾದ ವಿವರಣೆ ನೀಡದಿದ್ದರೆ ಶೇ.60ರಷ್ಟು ದಂಡ ವಿಧಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ನೋಟು ಅಮಾನ್ಯ ಘೋಷಣೆಯ ಬಳಿಕ ದೇಶಾದ್ಯಂತ ಜನಧನ ಖಾತೆಗಳಲ್ಲಿ ಹಣ ತುಂಬಿ ತುಳುಕುತ್ತಿದ್ದು, ಕೇವಲ ಎರಡು ವಾರಗಳಲ್ಲಿ 21 ಸಾವಿರ ಕೋಟಿ ರುಪಾಯಿ ಠೇವಣಿ ಬ್ಯಾಂಕ್'ನತ್ತ ಹರಿದು ಬಂದಿದೆ. ಹೀಗಾಗಿ ಈ ಖಾತೆಗಳ ಮೂಲಕ ಕಪ್ಪುಹಣವನ್ನು ಇಡಲಾಗುತ್ತಿದೆಯೇ ಎಂಬ ಅನುಮಾನವನ್ನೂ ಇದು ಮೂಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಇಂಥ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅದರಂತೆ, ಆದಾಯ ತೆರಿಗೆ ಕಾಯ್ದೆದೆ ತಿದ್ದುಪಡಿ ತರುವ ನಿರ್ಧಾರಕ್ಕೆ ಬಂದಿದೆ.