ಬೆಂಗಳೂರು (ಸೆ. 07): ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್‌ ಅಧಿಕಾರಿ ರಾಘವೇಂದ್ರ ಔರಾದ್ಕರ್‌ ಸಮಿತಿಯಲ್ಲಿ ಬಿಟ್ಟುಹೋದ ಕೆಲವು ಸೌಲಭ್ಯಗಳು ಸೇರಿದಂತೆ ರಾಜ್ಯದ ಆರನೇ ವೇತನ ಆಯೋಗದ ಎಲ್ಲ ಶಿಫಾರಸುಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಚಿವ ಸಂಪುಟ ಸಭೆಯಲ್ಲಿ ರಾಘವೇಂದ್ರ ಔರಾದ್ಕರ್‌ ಸಮಿತಿಯ ವೇತನ ಪರಿಷ್ಕರಣೆ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಯಿತು.

ಅಲ್ಲದೆ, ಅದನ್ನು ಕಳೆದ ಆ.1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ತೀರ್ಮಾನಿಸಲಾಯಿತು. ವೇತನ ಪರಿಷ್ಕರಣೆ ಮಾಡಲು ಜು.16ರಂದು ಮೈತ್ರಿ ಸರ್ಕಾರ ಆದೇಶ ಹೊರಡಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿರಲಿಲ್ಲ. ಇದೀಗ ಘಟನೋತ್ತರ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್‌ ಸಿಬ್ಬಂದಿಯ ವೇತನ ಪರಿಷ್ಕರಣೆ ಸಂಬಂಧ ಔರಾದ್ಕರ್‌ ಸಮಿತಿ ನೀಡಿದ ವರದಿಯಲ್ಲಿ ಕೆಲವು ಸೌಲಭ್ಯಗಳನ್ನು ಕೈಬಿಡಲಾಗಿತ್ತು, ಈಗ ಅವುಗಳನ್ನು ಸೇರಿಸಿ ರಾಜ್ಯದ 6 ನೇ ವೇತನ ಆಯೋಗದ ಎಲ್ಲಾ ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿದೆ.

ವರದಿ ಜಾರಿಯಿಂದ 386.26 ಕೋಟಿ ರು. ಹೊರೆ ಬೀಳಲಿದೆ. ಅಗ್ನಿಶಾಮಕ ಮತ್ತು ಕಾರಾಗೃಹ ಇಲಾಖೆಗೆ ಈ ಸೌಲಭ್ಯ ವಿಸ್ತರಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿದರು.

ಮೈತ್ರಿ ಸರ್ಕಾರದ ಆದೇಶ ಹಿಂದಕ್ಕೆ:

ಉತ್ತರ ಕರ್ನಾಟಕ ಭಾಗಕ್ಕೆ ಕೆಲವು ಇಲಾಖೆಗಳನ್ನು ವರ್ಗಾಯಿಸುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಕೈಗೊಂಡ ತೀರ್ಮಾನದಂತೆ ಮಾನವ ಹಕ್ಕುಗಳ ಆಯೋಗದ ಇಬ್ಬರು ಸದಸ್ಯರ ಪೈಕಿ ಒಬ್ಬರನ್ನು ಅಲ್ಲಿಗೆ ಕಳುಹಿಸುವ ಆದೇಶವನ್ನು ಹಿಂಪಡೆದುಕೊಳ್ಳಲಾಗಿದೆ.

ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಮೈತ್ರಿ ಸರ್ಕಾರವು ಕೆಲವೊಂದು ಇಲಾಖೆಗಳನ್ನು ಆ ಭಾಗಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಅಂತೆಯೇ ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರನ್ನು ಧಾರವಾಡಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಸಚಿವ ಸಂಪುಟದಲ್ಲಿ ಈ ಆದೇಶವನ್ನು ವಾಪಸ್‌ ಪಡೆದುಕೊಳ್ಳಲಾಗಿದೆ.

ಆಯೋಗದ ಸದಸ್ಯರು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಮಸ್ಯೆಗಳನ್ನು ಆಲಿಸಿ ಕೆಲಸ ಮಾಡುತ್ತಿದ್ದಾರೆ. ಮೂವರು ಸದಸ್ಯರು ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕವಾಗಿ ಧಾರವಾಡಕ್ಕೆ ಓರ್ವ ಸದಸ್ಯರನ್ನು ನಿಯೋಜನೆ ಮಾಡುವ ಅಗತ್ಯವಿಲ್ಲ ಎಂದು ಮನವಿ ಮಾಡಿಕೊಂಡಿದ್ದರು. ಈ ಮನವಿ ಮೇರೆಗೆ ಒಬ್ಬ ಸದಸ್ಯರನ್ನು ಕಳುಹಿಸುವ ಆದೇಶವನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಸೌರ ಶಕ್ತಿ ನೀತಿಗೆ ತಿದ್ದುಪಡಿ:

ಸೌರ ಶಕ್ತಿ ವಿದ್ಯುತ್‌ ಉತ್ಪಾದನೆಗೆ ರೂಪಿಸಲಾಗಿರುವ ನೀತಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಸೋಲಾರ್‌ ಪಾರ್ಕ್ ನಿರ್ಮಿಸಲು 100 ಮೆಗಾವ್ಯಾಟ್‌ ಮಿತಿಯನ್ನು 25 ಮೆಗಾವ್ಯಾಟ್‌ಗೆ ಇಳಿಸಲು ನಿರ್ಧರಿಸಲಾಗಿದೆ. ಖಾಸಗಿಯವರಿಗೆ ಮುಕ್ತವಾಗಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

2014ರಿಂದ ಜಾರಿಯಲ್ಲಿದ್ದ ಸೌರಶಕ್ತಿ ನೀತಿಯಲ್ಲಿ ಕನಿಷ್ಠ 100 ಮೆಗಾವ್ಯಾಟ್‌ ಸೌರ ವಿದ್ಯುತ್‌ ಘಟಕಗಳನ್ನು ಆರಂಭಿಸಬೇಕು ಮತ್ತು ಉತ್ಪಾದಿತ ವಿದ್ಯುತ್‌ನ್ನು ಸರ್ಕಾರಕ್ಕೆ ಮಾರಾಟಕ್ಕೆ ಮಾಡಬೇಕು ಎಂಬ ನಿಯಮ ಇತ್ತು. ಅದನ್ನು ಸರಳೀಕರಣ ಮಾಡಿ 20 ಮೆಗಾವ್ಯಾಟ್‌ಗೆ ಇಳಿಕೆ ಮಾಡಲಾಗಿದ್ದು, ಖಾಸಗಿಯವರಿಗೂ ಮಾರಾಟ ಮಾಡಬಹುದಾಗಿದೆ.

100 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ 500 ಎಕರೆ ಜಮೀನಿನ ಅಗತ್ಯ ಇತ್ತು. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಉತ್ಪಾದನೆಗೆ ಯಾರು ಮುಂದೆ ಬರುತ್ತಿರಲಿಲ್ಲ. ಹೀಗಾಗಿ 20 ಮೆಗಾವ್ಯಾಟ್‌ಗೆ ಇಳಿಕೆ ಮಾಡಲಾಗಿದೆ. ಇದರಿಂದ ಕಡಿಮೆ ಬಂಡವಾಳದಿಂದಲೇ ಉತ್ಪಾದನಾ ಘಟಕವನ್ನು ಆರಂಭಿಸಬಹುದು. ಪರಿಷ್ಕೃತ ನೀತಿಯಿಂದ ಅನುಮತಿ ಪಡೆದ 18 ತಿಂಗಳಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಪ್ರಾರಂಭಿಸಬೇಕು ಎಂದರು.

ಸಚಿವ ಸಂಪುಟದ ಇತರೆ ನಿರ್ಧಾರಗಳು

- ಲೋಕಾಯುಕ್ತ ಅಭಿಯೋಜಕರಾಗಿ ಎಂ.ಎಚ್‌.ಇಟಗಿ ನೇಮಕ

- ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿನ ಮ್ಯಾಜಿಸ್ಟೇಟ್‌ ಕೋರ್ಟ್‌ ಮೂಲ ಸೌಕರ್ಯ ಅಭಿವೃದ್ಧಿಗಾಗಿ 35 ಕೋಟಿ ರು. ನೀಡಿಕೆ

- ಕೊಪ್ಪಳ-ಗಿಣಿಗೇರಾ ರೈಲು ನಿಲ್ದಾಣದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಾಗಿ 13.13 ಕೋಟಿ ರುನಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ

- ಕೊಂಕಣ ರೈಲ್ವೆ ನಿಗಮ ನಿಯಮಿತಕ್ಕೆ 29.40 ಕೋಟಿ ರು. ಬಿಡುಗಡೆಗೆ ಒಪ್ಪಿಗೆ

- ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲ ನೀಡುವ ಸಂಬಂಧ ಉಪಸಮಿತಿ ರಚಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲು ನಿರ್ಧಾರ.

- ದಾವಣಗೆರೆ ಜಿಲ್ಲೆ ಜಗಳೂರಿನ 53 ಕೆರೆಗಳಿಗೆ ನೀರು ತುಂಬಿಸಲು 660 ಕೋಟಿ ರು., ಚಿತ್ರದುರ್ಗ ಜಿಲ್ಲೆ ಭರಮಸಾಗರದ 38 ಕೆರೆಗಳಿಗೆ ಮತ್ತು ದಾವಣಗೆರೆಯ ಒಂದು ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು 528 ಕೋಟಿ ರು.ಗೆ ಆಡಳಿತಾತ್ಮಕ ಅನುಮೋದನೆ.

- ಶಿಕಾರಿಪುರ ತಾಲೂಕಿನ ಉಡುಗಣಿ, ತುಡಗಣಿ ಕೆರೆಗೆ ನೀರು ತುಂಬಿಸಲು 850 ಕೋಟಿ ರು.ಗೆ ಒಪ್ಪಿಗೆ

- ಕಾವೇರಿ ನೀರಾವರಿ ನಿಗಮಕ್ಕೆ 250 ಕೋಟಿ ರು ಹಣ ಸಂಗ್ರಹಕ್ಕೆ (ಅವಧಿ ಸಾಲ) ಹಾಗೂ ವಿಶ್ವೇಶ್ವರ ಜಲನಿಗಮಕ್ಕೆ 730 ಕೋಟಿ ರು. ಅವಧಿ ಸಾಲ ಪಡೆಯಲು ತೀರ್ಮಾನ

- ಕೆಪಿಎಸ್‌ಸಿ ಸೇವಾ ಷರತ್ತು ನಿಯಮಕ್ಕೆ ತಿದ್ದುಪಡಿ. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರಿಗೆ ವೇತನ ಪರಿಷ್ಕರಣೆಗೆ ಸಚಿವ ಸಂಪುಟ ಸಮ್ಮತಿ.