ಕ್ಯಾಬ್ ಚಾಲಕ ಹಾಗೂ ಪ್ರಯಾಣಿಕನ ನಡುವಿನ ಜಗಳ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶುಲ್ಕ ಉಳಿಸಲು ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪಹರಿಸಲು ಯತ್ನಿಸಿದ್ದಾಗಿ ಪ್ರಯಾಣಿಕ ಆರೋಪಿಸಿದ್ದಾರೆ.
ಬೆಂಗಳೂರು : ಪೂರ್ವನಿಗದಿತ ಮಾರ್ಗ ಬದಲಾವಣೆ ಮಾಡಿದ ವಿಚಾರಕ್ಕೆ ಮತ್ತೆ ಉಬರ್ ಕ್ಯಾಬ್ ಚಾಲಕ ಮತ್ತು ಪ್ರಯಾಣಿಕರ ಮಧ್ಯೆ ಜಗಳವಾಗಿದ್ದು, ಈ ಪ್ರಕರಣವು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೂ ಕಾರಣವಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೋರಮಂಗಲಕ್ಕೆ ಉಬರ್ ಕ್ಯಾಬ್‌ನಲ್ಲಿ ಮಂಗಳವಾರ ರಾತ್ರಿ ಬ್ಯಾಂಕ್ ಉದ್ಯೋಗಿ ಜೈ ಸಿಂಘ್ವಾಲ್ ಎಂಬುವರು ತೆರಳುವಾಗ ಈ ಗಲಾಟೆ ನಡೆದಿದೆ. ಈ ಸಂಬಂಧ ಕೆಐಎಎಲ್ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಫೇಸ್‌ಬುಕ್‌ನಲ್ಲಿ ಘಟನೆ ಕುರಿತು ಜೈ ಸಿಂ ಘ್ವಾಲ್ ಬರೆದುಕೊಂಡಿದ್ದು, ಇದಕ್ಕೆ ಹಲವು ಮಂದಿ ಪ್ರತಿಕ್ರಿಯಿಸಿದ್ದಾರೆ. ಆದರೆ ಚಾಲಕನ ಮೇಲೆ ಆರೋಪವನ್ನು ಉಬರ್ ಸಂಸ್ಥೆ ನಿರಾಕರಿಸಿದೆ.
ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಅಪಹರಿಸಲು ಯತ್ನಿಸಿದ ಎಂದು ಆರೋಪಿಸಿ ಜೈ ಸಿಂಘಾಲ್ ದೂರಿದ್ದಾರೆ. ಆದರೆ 120 ರು. ಟೋಲ್ ಶುಲ್ಕ ಉಳಿಸಲೆಂದು ಹೊಸ ರಸ್ತೆಯಲ್ಲಿ ಕರೆದು ಕೊಂಡು ಹೋಗುತ್ತಿದ್ದೆ. ಅಷ್ಟರಲ್ಲಿ ಗಲಾಟೆ ಪ್ರಾರಂಭಿಸಿ ಕ್ಯಾಬ್ ಇಳಿದು ಹೊರಟು ಹೋದರು ಎಂದು ಪೊಲೀಸರಿಗೆ ಕ್ಯಾಬ್ ಚಾಲಕ ಹೇಳಿಕೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ. ಕೆಲ ದಿನಗಳ ಹಿಂದೆ ಇದೇ ರೀತಿ ಆರೋಪಕ್ಕೆ ಉಬರ್ ಕ್ಯಾಬ್ ಚಾಲಕರು ತುತ್ತಾಗಿದ್ದನ್ನು ಸ್ಮರಿಸಬಹುದಾಗಿದೆ.
ಫೇಸ್‌ಬುಕ್‌ನಲ್ಲಿ ಬರೆದಿರುವುದು: ಕೆಲಸದ ನಿಮಿತ್ತ ಪುಣೆಗೆ ಹೋಗಿದ್ದ ನಾನು, ಆ. 28ರ ರಾತ್ರಿ 12.20ರ ಸುಮಾರಿಗೆ ಕೆಐಎಎಲ್‌ಗೆ ಬಂದಿಳಿದೆ. ಆಗ ಕೋರಮಂಗಲಕ್ಕೆ ಹೋಗಲು ಉಬರ್ ಕ್ಯಾಬ್ ಬುಕ್ ಮಾಡಿದೆ. 12.47ರ ಸುಮಾರಿಗೆ ಚಾಲಕ ಬಂದು ನನ್ನನ್ನು ಕರೆದುಕೊಂಡು ಹೊರಟ. ನಿಲ್ದಾಣದಿಂದ ಒಂದು ಕಿ.ಮೀ ದೂರ ಹೋಗುತ್ತಿದ್ದಂತೆಯೇ ಆತ ಹೆಚ್ಚಿನ ಪ್ರಯಾಣ ದರ ಪಾವತಿಸುವಂತೆ ಕೇಳಿದ. ಆ ವಿಚಾರಕ್ಕೆ ನಮ್ಮಿಬ್ಬರ ನಡುವೆ ವಾಗ್ವಾದ ನಡೆಯಿತು ಎಂದು ಜೈಸಿಂಘ್ವಾಲ್ ಬರೆದುಕೊಂಡಿದ್ದಾರೆ.
ನಿಗದಿತ ದರಕ್ಕಿಂತ ಹೆಚ್ಚಿನ ದರ ಕೊಡಲು ನಿರಾಕರಿಸಿದ ನಾನು, ಏರ್‌ಪೋರ್ಟ್‌ಗೆ ಮರಳಿ ಕರೆದು ಕೊಂಡು ಹೋಗುವಂತೆ ಹೇಳಿದೆ. ಇದರಿಂದ ಕೋಪಗೊಂಡ ಆತ, ಯಾರಿಗೋ ಕರೆ ಮಾಡಿ ಕನ್ನಡದಲ್ಲಿ ಏನೇನೋ ಹೇಳುತ್ತಿದ್ದ. ನನಗೆ ಕನ್ನಡ ಬಾರದಿದ್ದರೂ ಇದೇ ವಿಚಾರ ಮಾತ ನಾಡುತ್ತಿದ್ದಾನೆ ಎಂಬುದು ಅರ್ಥವಾಯಿತು. ಆ ನಂತರ ಮಂತ್ರಿ ವೃತ್ತದಲ್ಲಿ ಎಡ ತಿರುವು ತೆಗೆದುಕೊಂಡು, ಬೇಗೂರು ರಸ್ತೆ ಕಡೆಗೆ ಕಾರು ತಿರುಗಿಸಿದ. ಸ್ಪಲ್ಪ ಸಮಯದಲ್ಲೇ ಎರಡು ಕಾರುಗಳು ಅಲ್ಲಿಗೆ ಬಂದವು. ನನ್ನನ್ನು ಅಪಹರಿಸಲು ಯತ್ನಿಸುತ್ತಿದ್ದಾರೆ ಎಂಬುದು ಗೊತ್ತಾಯಿತು. ತಕ್ಷಣ ಕಾರಿನಿಂದ ಜಿಗಿದು ಓಡಲಾರಂಭಿಸಿದೆ. ಆಗ ನನ್ನನ್ನು ಹಿಂಬಾಲಿಸಿ ಚಾಲಕರು ಬಂದರು. ಕೊನೆಗೆ ಅಲ್ಲೇ ಇದ್ದ ಸಂಚಾರ ಪೊಲೀಸರ ಹತ್ತಿರ ಹೋಗುತ್ತಿದ್ದಂತೆಯೇ ಪರಾರಿಯಾದರು.
ನಂತರ ಕೆಐಎಎಲ್ ಪೊಲೀಸ್ ಠಾಣೆಗೆ ತೆರಳಿ ಚಾಲಕ ಹಾಗೂ ಉಬರ್ ಕಂಪನಿ ವಿರುದ್ಧ ದೂರು ನೀಡಿದೆ. ಪೊಲೀಸರೊಂದಿಗೆ ಕೆಐಎಎಲ್ ನಿಲ್ದಾಣಕ್ಕೆ ತೆರಳಿ, ಕ್ಯಾಬ್ ನಿಲುಗಡೆ ಪ್ರದೇಶದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದೆವು. ಆದರೆ ಪಾರ್ಕಿಂಗ್ ದೃಶ್ಯ ಸೆರೆಯಾಗುವಂತೆ ಒಂದು ಕ್ಯಾಮೆರಾವನ್ನು ಅಳವಡಿಸಿರಲಿಲ್ಲ. ಆಗ ಪೊಲೀಸರಿಗೆ ನನ್ನ ಬಳಿಯೇ ಇದ್ದ ಚಾಲಕನ ಫೋಟೋ ಹಾಗೂ ವಿಡಿಯೋಗಳನ್ನು ನೀಡಿದೆ ಎಂದು ವಿವರಿಸಿದ್ದಾರೆ.
