ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಜನರ ಭಾವನೆಗಳನ್ನು ಅರಿಯುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗಿದೆ. ಇದೇ ವೇಳೆ ಪ್ರತ್ಯೇಕವಾಗಿ ರಾಜ್ಯವಾರು ಸಮೀಕ್ಷೆಯನ್ನೂ ನಡೆಸಲಾಗಿದ್ದು, ಅದರನ್ವಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಕಣಕ್ಕಿಳಿದರೆ ಅವುಗಳಿಗೆ 16 ಸ್ಥಾನ ಲಭ್ಯವಾಗಲಿದೆ. ಬಿಜೆಪಿ ಕೇವಲ 12 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ ಎಂದು ಹೇಳಿದೆ.

‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ರಿಪಬ್ಲಿಕ್‌’ ಆಂಗ್ಲ ಸುದ್ದಿವಾಹಿನಿಯು ಸಿ ವೋಟರ್‌ ಸಹಯೋದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ಹೊರಬಿದ್ದಿದೆ.

ಮೈತ್ರಿ ಸರ್ಕಸ್‌:  ಕಳೆದ ಲೋಸಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ 9 ಮತ್ತು ಜೆಡಿಎಸ್‌ 2 ಸ್ಥಾನ ಗೆದ್ದುಕೊಂಡಿದ್ದವು. ಬಿಜೆಪಿ 17 ಸ್ಥಾನ ಗೆದ್ದಿತ್ತು. ಈ ಬಾರಿಯೂ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದಲ್ಲಿ, ಕಾಂಗ್ರೆಸ್‌ 7 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಆದರೆ ಜೆಡಿಎಸ್‌ 1 ಸ್ಥಾನ ಹೆಚ್ಚು ಗೆಲ್ಲುವ ಮೂಲಕ ತನ್ನ ಬಲವನ್ನು 3ಕ್ಕೆ ಏರಿಸಿಕೊಳ್ಳಲಿದೆ. ಮತ್ತೊಂದೆಡೆ ಬಿಜೆಪಿ ಕಳೆದ ಬಾರಿಗಿಂತ 1 ಸ್ಥಾನ ಹೆಚ್ಚು ಗೆಲ್ಲುವ ಮೂಲಕ ತನ್ನ ಬಲವನ್ನು 18ಕ್ಕೆ ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್‌ ಶೇ.37.6ರಷ್ಟು, ಬಿಜೆಪಿ ಶೇ.44.3ರಷ್ಟು, ಜೆಡಿಎಸ್‌ ಶೇ.12.4 ರಷ್ಟುಮತ್ತು ಇತರರು ಶೇ.5.7ರಷ್ಟುಮತ ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಮೈತ್ರಿಗೆ ಮಹಾಬಲ:

ಒಂದು ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಂದಾಗಿ ಸ್ಪರ್ಧಿಸಿದಲ್ಲಿ ಅವುಗಳಿಗೆ 16 ಸ್ಥಾನ ಲಭ್ಯವಾಗಲಿದೆ. ಅಂದರೆ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಸಿಗಬಹುದಾದ 6 ಸ್ಥಾನ ಹೆಚ್ಚು ಸಿಗಲಿದೆ. ಇದೇ ವೇಳೆ ಬಿಜೆಪಿ ಕೇವಲ 12 ಸ್ಥಾನಕ್ಕೆ ತೃಪ್ತಿಪಟ್ಟುಬೇಕಾಗಿ ಬರಲಿದೆ. ಇದು ಕಳೆದ ಬಾರಿ ಗೆದ್ದಿದ್ದಕ್ಕಿಂತ 5 ಸ್ಥಾನ ಕಡಿಮೆ ಎಂದು ಸಮೀಕ್ಷೆ ಹೇಳಿದೆ.

ಮೈತ್ರಿ ಆಗದಿದ್ದಲ್ಲಿ

ಒಟ್ಟು ಸ್ಥಾನ    28

ಪಕ್ಷ    2014    ಈಗ

ಬಿಜೆಪಿ    17    18

ಕಾಂಗ್ರೆಸ್‌    09    07

ಜೆಡಿಎಸ್‌    02    03


ಮೈತ್ರಿ ಆದರೆ

ಪಕ್ಷ    2014    ಈಗ

ಬಿಜೆಪಿ    17    12

ಕಾಂಗ್ರೆಸ್‌+ ಜೆಡಿಎಸ್‌    11    16

ಕೈ-ದಳ ದೋಸ್ತಿಯಿಂದ ಬಿಜೆಪಿಗೆ ಸಂಕಷ್ಟ!

- (ಒಗ್ಗಟ್ಟಿನ ಬಲ) ಲೋಕಸಭೆಗೆ ಈಗ ಚುನಾವಣೆ ನಡೆದರೆ ಏನಾಗಬಹುದು ಎಂಬ ಬಗ್ಗೆ ರಿಪಬ್ಲಿಕ್‌ ಟೀವಿ, ಸಿ-ವೋಟರ್‌ ಮತದಾರರ ಸಮೀಕ್ಷೆ

- ರಾಜ್ಯದಲ್ಲಿ ಮೈತ್ರಿ ಆದರೆ ಕಾಂಗ್ರೆಸ್‌-ಜೆಡಿಎಸ್‌ಗೆ 16, ಬಿಜೆಪಿಗೆ 12 ಸೀಟು

ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿ 18, ಕಾಂಗ್ರೆಸ್‌ 7, ಜೆಡಿಎಸ್‌ 3

ಕೇಂದ್ರದಲ್ಲಿ ಮತ್ತೆ  ಎನ್‌ಡಿಎ ಸರ್ಕಾರ?

ಈಗ ಲೋಕಸಭಾ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಬಗ್ಗೆ ರಿಪಬ್ಲಿಕ್‌ ಟೀವಿ, ಸಿ-ವೋಟರ್‌ ಹಾಗೂ ಎಬಿಪಿ ನ್ಯೂಸ್‌ ನಡೆಸಿದ ಸಮೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ. ರಿಪಬ್ಲಿಕ್‌ ಪ್ರಕಾರ ಎನ್‌ಡಿಎ ಬಹುಮತದ ಸನಿಹಕ್ಕೆ ಬರಲಿದ್ದರೆ, ಎಬಿಪಿ ನ್ಯೂಸ್‌ ಪ್ರಕಾರ ಎನ್‌ಡಿಎ ಸ್ಪಷ್ಟಬಹುಮತ ಸಾಧಿಸಲಿದೆ.


ಲೋಕಸಭಾ ಸ್ಥಾನ: 543 ಬಹುಮತಕ್ಕೆ: 272

ಮೈತ್ರಿಕೂಟ    ರಿಪಬ್ಲಿಕ್‌    ಎಬಿಪಿ    2014

ಎನ್‌ಡಿಎ    261    300    336

ಯುಪಿಎ    119    116    60

ಇತರೆ    163    127    147